ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಅವ್ಯವಸ್ಥೆ: ಡಿ.ಸಿಗೆ ಮಾಹಿತಿ ಕೊಟ್ಟ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಗುತ್ತಿಗೆ ಸಿಬ್ಬಂದಿ, ವಾರ್ಡನ್‌ ವಿರುದ್ಧ ಮಕ್ಕಳ ದೂರು
Last Updated 12 ಡಿಸೆಂಬರ್ 2019, 17:30 IST
ಅಕ್ಷರ ಗಾತ್ರ

ದೇವರಹಿಪ್ಪರಗಿ (ವಿಜಯಪುರ): ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಿರಿಯ ವಿದ್ಯಾರ್ಥಿಗಳನ್ನು, ಕೆಲ ಹಿರಿಯ ವಿದ್ಯಾರ್ಥಿಗಳು ಬುಧವಾರ ರಾತ್ರಿ ಥಳಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಹಾಸ್ಟೆಲ್‌ಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಹೋಗಿದ್ದರು. ಇದಾದ ಬಳಿಕ 10ನೇ ತರಗತಿಯ ಕೆಲ ವಿದ್ಯಾರ್ಥಿಗಳು ದೂರು ನೀಡಿದ್ದ ಮೂವರು ಬಾಲಕರನ್ನು ಕೋಣೆಯಲ್ಲಿ ಕೂಡಿಹಾಕಿ ಥಳಿಸಿದ್ದಾರೆ. ಈ ಸಮಯದಲ್ಲಿ ಹಾಸ್ಟೆಲ್‌ ಮೇಲ್ವಿಚಾರಕ ಹಾಗೂ ಗುತ್ತಿಗೆ ಆಧಾರದ ಸಿಬ್ಬಂದಿ ವಸತಿ ನಿಲಯದಲ್ಲಿ ಇರಲಿಲ್ಲ ಎನ್ನಲಾಗಿದೆ.

ಈ ಬಗ್ಗೆ ಮೇಲ್ವಿಚಾರಕ ಅಜರುದ್ದೀನ್ ಮುಲ್ಲಾ ಅವರನ್ನು ಪ್ರಶ್ನಿಸಿದಾಗ, ‘ಇದು ಮಕ್ಕಳ ಜಗಳ. ಹಿರಿಯ ವಿದ್ಯಾರ್ಥಿಗಳು ನನ್ನ ಅಭಿಮಾನಿಗಳು. ಡಿ.ಸಿ.ಗೆ ಕಿರಿಯ ವಿದ್ಯಾರ್ಥಿಗಳು ದೂರು ನೀಡಿದ್ದರಿಂದ ಕೋಪಗೊಂಡ ಅವರು, ನನ್ನ ಮೇಲಿನ ಅಭಿಮಾನದಿಂದ ನಾಲ್ಕು ಏಟು ಹೊಡೆದಿರಬಹುದು. ಆ ಸಮಯದಲ್ಲಿ ನಾನು ವಸತಿ ನಿಲಯದಲ್ಲಿ ಇರಲಿಲ್ಲ. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’ ಎಂದರು.

‘ಗುತ್ತಿಗೆ ಸಿಬ್ಬಂದಿ ಲಾಲಸಾಬ್ ಟಕ್ಕಳಕಿ ಅವರೇ ಹಿರಿಯ ವಿದ್ಯಾರ್ಥಿಗಳಿಗೆ ಹೇಳಿ, ನಮ್ಮನ್ನು ಚಾದರ್‌ನಲ್ಲಿ ಕಟ್ಟಿ, ಬಾಗಿಲು ಹಾಕಿ ಹೊಡೆಸಿದ್ದಾರೆ. ನಮ್ಮನ್ನು ಹೊಡೆದವರು ವಸತಿ ನಿಲಯದಲ್ಲಿ ಬೀಡಿ, ಸಿಗರೇಟ್ ಸೇದುತ್ತಾರೆ. ಶಾಲೆಗೂ ಸರಿಯಾಗಿ ಹೋಗುವುದಿಲ್ಲ. ಅವರಿಗೆ ವಾರ್ಡನ್ ಏನೂ ಹೇಳುವುದಿಲ್ಲ. ಈ ವಿಷಯವನ್ನು ನಾವು ಹೇಳಿದ್ದೇವೆ ಎಂದು ಗೊತ್ತಾದರೆ, ನಮ್ಮನ್ನು ಮತ್ತೆ ಹೊಡೆಯುತ್ತಾರೆ. ನಮಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಏಟು ತಿಂದ ಕಿರಿಯ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಈ ಬಗ್ಗೆ ವಿವರವಾದ ವರದಿ ನೀಡುವಂತೆ ಅಧಿಕಾರಿಗಳು ಹಾಗೂ ವಸತಿ ನಿಲಯದ ಮೇಲ್ವಿಚಾರಕರಿಗೆ ಸೂಚಿಸಿದ್ದೇನೆ. ನಾನೂ, ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT