ನರೇಗಲ್: ಗ್ರಾಮೀಣ ಗ್ರಂಥಾಲಯಗಳು ಈಚೆಗೆ ದಿಕ್ಕು ತಪ್ಪಿವೆ. ಮೂಲ ಉದ್ದೇಶಗಳಿಂದ ವಿಮುಖವಾಗಿ ಕಾಟಾಚಾರಕ್ಕೆ ಎಂಬಂತಿವೆ ಎಂಬ ಆರೋಪಗಳ ಮಧ್ಯ ನರೇಗಲ್ ಸಮೀಪದ ಕೋಟುಮಚಗಿಯ ಗ್ರಾಮ ಪಂಚಾಯಿತಿ ಗ್ರಂಥಾಲಯವು ಗ್ರಾಮೀಣ ಜನರಿಗೆ ಪತ್ರಿಕೆ, ಪುಸ್ತಕಗಳ ಅಭಿರುಚಿ ಮೂಡಿಸುತ್ತಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಓದುವ ಅಭಿರುಚಿ ಹೆಚ್ಚಿಸಿದೆ.
1992ರಲ್ಲಿ ಆರಂಭವಾದ ಈ ಗ್ರಂಥಾಲಯವು 7,279 ಪುಸ್ತಕಗಳನ್ನು ಹೊಂದಿದೆ. ಗ್ರಂಥಾಲಯದ ವರ್ಗೀಕರಣದ ಪದ್ಧತಿ ಪ್ರಕಾರ ಸ್ಪರ್ಧಾತ್ಮಕ, ಮಕ್ಕಳ ಕಥೆ, ಕಾದಂಬರಿ, ಕವನ ಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಪತ್ರಿಕೆಗಳು ಮತ್ತು ಕೆಲವು ಸರ್ಕಾರಿ ಪ್ರಕಟಣೆಗಳು ಗ್ರಂಥಾಲಯಕ್ಕೆ ತಪ್ಪದೆ ಬರುತ್ತವೆ.
ಸ್ಪರ್ಧಾತ್ಮಕ ಪರೀಕ್ಷೆಯ 250 ಪುಸ್ತಕಗಳು ವಿವಿಧ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಹಕಾರಿಯಾಗಿದೆ. 888 ಸದಸ್ಯರನ್ನು ಹೊಂದಿರುವ ಗ್ರಂಥಾಲಯಕ್ಕೆ ಪ್ರತಿದಿನವೂ 25 ರಿಂದ 30 ಜನರು ಭೇಟಿ ನೀಡುತ್ತಾರೆ. ಇದರಲ್ಲಿ ಸರ್ಕಾರಿ ನೌಕರರು, ವೃದ್ಧರು, ಮಹಿಳೆಯರು, ರೈತರು ಇರುತ್ತಾರೆ. ಶನಿವಾರ, ಭಾನುವಾರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕೆಲವು ಸದಸ್ಯರು ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಓದುವ ಹವ್ಯಾಸವನ್ನು ಹೊಂದಿದ್ದಾರೆ. ಚರಿತ್ರೆ, ಸಾಮಾಜಿಕ, ಕಥೆ, ಕಾದಂಬರಿಗಳ ಪುಸ್ತಕಗಳನ್ನು ಪ್ರಾರಂಭಿಕ ದಿನಗಳಲ್ಲಿ ಆಸಕ್ತಿಯಿಂದ ಒಯ್ಯುವ ಜನರು ನಂತರದ ದಿನಗಳಲ್ಲಿ ಬೇರೆ ಪುಸ್ತಕಗಳನ್ನು ಕೇಳುತ್ತಾರೆ ಎಂದು ಗ್ರಂಥಪಾಲಕ ಎಸ್. ಐ. ಪತ್ತಾರ ತಿಳಿಸಿದರು.
ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಓದುವ ಬೆಳಕು, ಪುಸ್ತಕ ಓದು ಕಾರ್ಯಕ್ರಮಗಳಿಂದ ಶಾಲಾ ಮಕ್ಕಳು ಸಹ ಸದಸ್ಯತ್ವ ಪಡೆದಿದ್ದಾರೆ. ಕಂಪ್ಯೂಟರ್ ವ್ಯವಸ್ಥೆ ಇರುವ ಕಾರಣ ವಿದ್ಯಾರ್ಥಿಗಳು ಆಕರ್ಷಿತರಾಗಿದ್ದಾರೆ. ಗ್ರಂಥಾಲಯಕ್ಕೆ ಬರುವ ಶಾಲಾ ಮಕ್ಕಳ ಹೋಂ ವರ್ಕ್ ಮಾಡಿಸುವ ಕಾಳಜಿ ಹೊಂದಿರುವ ಗ್ರಂಥಪಾಲಕನಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೆಚ್ಚು ಸಹಕಾರಿಯಾಗಿದೆ.
ಜನರು ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ ಹಾಗೂ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆಎಸ್. ಐ. ಪತ್ತಾರ ಗ್ರಂಥಪಾಲಕ
ಓದುಗರ ಸಂಖ್ಯೆ ಹೆಚ್ಚಿಸಿದ ಗ್ರಂಥಪಾಲಕ ಗ್ರಂಥಾಲಯದ ಆರಂಭಿಕ ದಿನಗಳಿಂದಲೇ ಗ್ರಂಥಪಾಲಕನಾಗಿ ಸೇವೆ ಸಲ್ಲಿಸುತ್ತಿರುವ ಎಸ್. ಐ. ಪತ್ತಾರ ಗ್ರಾಮದಲ್ಲಿ ಓದುಗರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಶಾಲೆಗಳಿಗೆ ಗ್ರಾಮದ ಜನರ ಬಳಿಗೆ ಹೋಗಿ ಗ್ರಂಥಾಲಯಕ್ಕೆ ಬರುವಂತೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮಕ್ಕಳಿಗೆ ಬೆಳೆಸುವಂತೆ ಜಾಗೃತಿ ಮೂಡಿಸುತ್ತಾರೆ. ಅನೇಕ ಅಭಿನಂದನಾ ಗ್ರಂಥಗಳಿಗೆ ಲೇಖನ ಬರೆದ ಪತ್ತಾರರು ಕಲಾವಿದರ ಸಾಹಿತಿಗಳ ನಿಕಟ ಸಂಪರ್ಕ ಹೊಂದಿದ್ದಾರೆ. ಸಂಗೀತ ಮತ್ತು ತಬಲಾದಂತ ವಾದ್ಯಗಳ ಹವ್ಯಾಸಿ ವಾದಕರಾಗಿದ್ದಾರೆ. ಪುಸ್ತಕಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಣತೊಟ್ಟಿದ್ದಾರೆ. ಅನೇಕ ಪುಸ್ತಕ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ ಮತ್ತು ಕೋಟುಮಚಗಿಯ ಗ್ರಾಮೀಣ ಗ್ರಂಥಾಲಯವನ್ನು ಮಾದರಿ ಗ್ರಂಥಾಲಯವನ್ನಾಗಿ ಮಾಡುವತ್ತ ಸಾಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.