ಗುಳೇದಗುಡ್ಡ: ಒಬ್ಬ ಸಾಮಾನ್ಯ ವ್ಯಕ್ತಿಯೂ ಮನಸ್ಸು ಮಾಡಿದರೆ ಉನ್ನತವಾದ ಸಾಧನೆ ಮಾಡಬಹುದು. ಎಂ.ಆರ್.ಎನ್. ಗ್ರುಪ್ ಕಟ್ಟಿ ಅತಿ ಕಡಿಮೆ ಬಂಡವಾಳ ಹೂಡಿ ಹಲವು ಉದ್ಯಮಗಳನ್ನು ಆರಂಭಿಸಿ ಇಂದು 6 ಸಾವಿರ ಕೋಟಿ ವ್ಯವಹಾರ ಮಾಡುತ್ತಿದ್ದೇವೆ. ಬೆಳವಣಿಗೆ, ಹೆಸರು ಒಮ್ಮಿಂದೊಮ್ಮೆಲೆ ಬರುವುದಿಲ್ಲ, ಶ್ರಮ ಪಟ್ಟಾಗ ಅದು ಸಾಧ್ಯ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಜರುಗಿದ ವಿಶಾಲ(ಎಮ್.ಆರ್.ಎನ್.)ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಗುಳೇದಗುಡ್ಡ ಪಟ್ಟಣದಲ್ಲಿ 5 ನೇ ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಹಕಾರಿ ಕ್ಷೇತ್ರದಲ್ಲಿ ಮೊದಲಬಾರಿಗೆ 17 ಲಕ್ಷ ಹೂಡಿಕೆ ಮಾಡಿ 60 ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯಲಾಗಿದೆ. 35 ಸಾವಿರ ಕೋಟಿ ವ್ಯವಹಾರವಿದೆ, 1700 ಕೋಟಿ ಡಿಪಾಜಿಟ್ ಹೊಂದಿದೆ’ ಎಂದರು.
‘ಪಟ್ಟಣದ ಜನರು ಬ್ಯಾಂಕಿನ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ‘ವಿಶಾಲ ಸಹಕಾರಿ ಪತ್ತಿನ ಸಂಘ ನಾಲ್ಕು ಸಾವಿರ ಸದಸ್ಯರನ್ನು ಹೊಂದಿದ್ದು, ₹ 84 ಕೋಟಿ ಸಾಲ ನೀಡಲಾಗಿದೆ, ₹407 ಕೋಟಿ ವ್ಯಾಪಾರ, ವಹಿವಾಟು ಹೊಂದಿದೆ. ಶೇ 18 ಪ್ರತಿಶತ ಗ್ರಾಹಕರಿಗೆ ಡಿವಿಡೆಂಡ್ ವಿತರಿಸಲಾಗಿದೆ’ ಎಂದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರಾಜಸೇಖರ ಶೀಲವಂತ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿದರು. ಮುರುಘಾಮಠದ ಮ.ನಿ.ಪ್ರ ಕಾಶೀನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಗುಳೇದಗುಡ್ಡ ಶಾಖೆಯ ಸಲಹಾ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.
ವೇದಿಕೆಯ ಮೇಲೆ ಮಹಾಂತೇಶ ಮಮದಾಪೂರ, ಮಾಜಿಶಾಸಕ ಮಲ್ಲಿಕಾರ್ಜುನ ಬನ್ನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಸಂಜು ಬರಗುಂಡಿ, ಆಸಂಗೆಪ್ಪ ನಕ್ಕರಗುಂದಿ, ಹೊಳಬಸು ಶೆಟ್ಟರ್, ಚಂದ್ರಕಾಂತ ಶೇಖಾ ಇದ್ದರು.