ಮಂಗಳವಾರ, ಸೆಪ್ಟೆಂಬರ್ 28, 2021
25 °C
‘ಅರಿಸಿನ ಗಣಪನ ಪ್ರತಿಷ್ಠಾಪಿಸಿ’

ಪಿಒಪಿ, ಬಣ್ಣದ ಮೂರ್ತಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ನೀರಿನ ಮೂಲಗಳ ಮಾಲಿನ್ಯ ತಪ್ಪಿಸಲು ಪಿಒಪಿ ಮತ್ತು ಬಣ್ಣದ ಗಣೇಶ ಮೂರ್ತಿಗಳನ್ನು ಬಳಸುವುದನ್ನು ನಿರ್ಬಂಧಿಸಿದ್ದು. ರೋಗ ನಿರೋಧಕ ಶಕ್ತಿಯುಳ್ಳ ಮೂರ್ತಿ ಗಳನ್ನು ಪರಿಚಯಿಸಲಾಗುತ್ತಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿ ಕಾರಿ ಆರ್.ಎಸ್.ಪುರಾಣಿಕ ತಿಳಿಸಿದ್ದಾರೆ.

‘ಕೋವಿಡ್‌ ಸಂದಿಗ್ಧ ಸಂದರ್ಭದಲ್ಲಿ ಮನೆ–ಮನೆಗಳಲ್ಲಿ ರೋಗನಿರೋಧಕ ಶಕ್ತಿಯುಳ್ಳ ಅರಿಸಿನ ಮಿಶ್ರಿತ ಗೋಧಿ ಹಿಟ್ಟು ಅಥವಾ ರಾಗಿ ಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶ ವಿಗ್ರಹಗಳನ್ನು ಪೂಜೆ ಮಾಡಿದಲ್ಲಿ ಕುಟುಂಬದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮಂಡಳಿ ಮಾರ್ಗಸೂಚಿಗಳ ಹೊರಡಿಸಿದೆ’ ಎಂದು ಹೇಳಿದ್ದಾರೆ.

‘ಗಣಪತಿ ಸಿಂಗರಿಸಲು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ತ್ಯಜಿಸಿ, ಹೂವು ಪತ್ರೆಗಳನ್ನು ಬಳಸುವುದು ಹಾಗೂ ಅರಿಸಿನ ಗಣೇಶನನ್ನು ಕೂರಿಸಲು ಪೀಠವಾಗಿ ತೆಂಗಿನ ಚಿಪ್ಪಿನ ಕರಟವನ್ನು ಉಪಯೋಗಿಸಬಹುದಾಗಿದೆ. ರೋಗನಿರೋಧಕ ಪರಿಕರಣಗಳನ್ನು ಬಳಸಿ ಮನೆಯಲ್ಲಿಯೇ ಗಣೇಶನ ವಿಗ್ರಹ ಮಾಡಿ ಮನೆಯಲ್ಲೇ ವಿಸರ್ಜಿಸಿದರೆ ಸಾಮಾಜಿಕ ಅಂತರ ಕಾಪಾಡಿಕೊಂಡಂತಾಗುತ್ತದೆ’ ಎಂದು ತಿಳಿಸಿದ್ದಾರೆ.

ವಿಸರ್ಜಿತ ನೀರಿನಿಂದ ಮನೆ ಶುಚಿ ಮಾಡಿಕೊಂಡರೆ ಕ್ರಿಮಿನಾಶಕವಾಗಿಯೂ ಬಳಕೆಗೆ ಬರುತ್ತದೆ. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸ್ವಯಂ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು, ನಿವಾಸಿ ಸಂಘಗಳ ಪ್ರತಿನಿಧಿಗಳ ಸಹಕಾರದೊಂದಿಗೆ ಈ ಬಾರಿ ವಿಶಿಷ್ಟ ರೀತಿಯಲ್ಲಿ ಗಣೇಶನ ಪೂಜಿಸುವಲ್ಲಿ ಸಾರ್ವಜನಿಕರು ಮಂಡಳಿಯೊಂದಿಗೆ ಕೈಜೋಡಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ಈ ಬಾರಿ ವಿಶೇಷವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 10 ಲಕ್ಷ ಅರಿಶಿಣ ಗಣೇಶ ಮೂರ್ತಿಗಳನ್ನು ನಿಗದಿತ ಸಮಯದಲ್ಲಿ ನಿರ್ಮಿಸುವ ಗುರಿಯೊಂದಿಗೆ ಅಭಿಯಾನ ಆರಂಭಿಸಿದ್ದು, ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸ ಬೇಕೆಂದು ವಿನಂತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು