ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸುಳೆ ಬಿಟ್ಟು ಬಿಸಿಲಲ್ಲಿ ಕಾಯಕ

ತಡರಾತ್ರಿ ಮನೆ ಸೇರುವ ಕೊರೊನಾ ವಾರಿಯರ್ಸ್‌
Last Updated 24 ಏಪ್ರಿಲ್ 2020, 5:30 IST
ಅಕ್ಷರ ಗಾತ್ರ

ತೇರದಾಳ: ಬೆಳಗಾವಿಯ ಸುಗಂಧಾ ಎಂಬ ನರ್ಸ್‌ ತನ್ನ ಮಗಳನ್ನು ಬಿಟ್ಟು ಕೋವಿಡ್-19 ರೋಗಿಗಳ ಶುಶ್ರೂಷೆಯಲ್ಲಿ ತೊಡಗಿದ್ದು, ಮಗಳು ತಾಯಿಯನ್ನ ದೂರದಿಂದ ನೋಡಿ ಹೋಗುತ್ತಿರುವ ದೃಶ್ಯ ವಾಹಿನಿಗಳಲ್ಲಿ ಪ್ರಸಾರವಾಗಿದ್ದಕ್ಕೆ ಸ್ವತಃ ಮುಖ್ಯಮಂತ್ರಿ ಸ್ಪಂದಿಸಿದ್ದರು.

ಆದರೆ ಇಲ್ಲಿನ ಇಬ್ಬರೂ ತಾಯಂದಿರು ಆಶಾ ಕಾರ್ಯಕರ್ತೆಯರಾಗಿ ಕೆಲಸದಲ್ಲಿದ್ದು ರೋಗದ ಜಾಗೃತಿ ಮೂಡಿಸುವ ಸಲುವಾಗಿ 6 ತಿಂಗಳ ಹಸುಳೆಗಳನ್ನು ಬಿಟ್ಟು ದಿನವಿಡಿ ಹೊರಗಿದ್ದು, ತಡರಾತ್ರಿ ಮಕ್ಕಳನ್ನು ಸೇರುವುದು, ಮತ್ತೆ ಬೆಳಗ್ಗೆದ್ದು ಕೆಲಸಕ್ಕೆ ಹೋಗುತ್ತಿದ್ದಾರೆ.

ಸಮೀಪದ ಸಸಾಲಟ್ಟಿ ಗ್ರಾಮದ ಮಂಜುಳಾ ಸರಿಕರ ಹಾಗೂ ಯರಗಟ್ಟಿಯ ನೀಲವ್ವ ಕುದರಿ ಎಂಬ ಆಶಾ ಕಾರ್ಯಕರ್ತೆಯರು ತಮ್ಮ ಹಸುಳೆಗಳನ್ನು ಬಿಟ್ಟು ಮಾ. 17ರಿಂದ ಕೊರೊನಾ ಸೋಂಕು ತಡೆಗಟ್ಟುವ ವಿಶೇಷ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳಿಗ್ಗೆ ಕಂದಮ್ಮನ ಬಿಟ್ಟು ಹೋಗಿ ಮನೆಗೆ ಮರಳುವುದು ಮಾತ್ರ ತಡರಾತ್ರಿಯೇ. ಇವರೂ ಸೇರಿದಂತೆ ಇವರ ತಂಡದಲ್ಲಿ 4-6 ಜನ ಮಧುಮೇಹ, ಹೆಚ್ಚಿನ ರಕ್ತದೊತ್ತಡ ಹೊಂದಿದವರಿದ್ದಾರೆ. ಇಡೀ ದಿನವೆಲ್ಲ ಕಾರ್ಯನಿರ್ವಹಿಸುವ ಇವರ ತಂಡಕ್ಕೆ ಬಹಳಷ್ಟು ದಿನ ಮಧ್ಯಾಹ್ನದ ಊಟವೇ ಸಿಗುವುದಿಲ್ಲ.

ತೇರದಾಳ ನಗರದ 12 ಮತ್ತು ಸಸಾಲಟ್ಟಿ, ಗೊಲಭಾವಿ, ಕಾಲತಿಪ್ಪಿ, ಹನಗಂಡಿ, ಯರಗಟ್ಟಿ, ಹಳಿಂಗಳಿ, ತಮದಡ್ಡಿ ಹೀಗೆ ಏಳು ಗ್ರಾಮಗಳಲ್ಲಿನ 35 ಸೇರಿದಂತೆ ಒಟ್ಟು 47 ಜನ ಆಶಾ ಕಾರ್ಯಕರ್ತೆಯರು 24X7ದಂತೆ ಕೆಲಸ ಮಾಡಿ ಪ್ರಜ್ಞಾವಂತರಿಂದ ಸೈ ಎನಿಸಿಕೊಂಡಿದ್ದಾರೆ.
ಸಸಾಲಟ್ಟಿ ಗ್ರಾಮದಲ್ಲಿ ಬೆಂಗಳೂರು, ಧಾರವಾಡ-ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಮಹಾರಾಷ್ಟ್ರದ ಸಾತಾರಾ, ಪುಣೆ, ಸಾಂಗಲಿ ಸೇರಿದಂತೆ ವಿವಿಧೆಡೆಯಿಂದ ಇನ್ನೂರಕ್ಕೂ ಹೆಚ್ಚು ಜನರು ಬಂದಿದ್ದಾರೆ. ಅವರೆಲ್ಲರೂ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ. ಅವರಾರು ಮನೆಯಿಂದ ಹೊರಬರದಂತೆ ಆಶಾ ಕಾರ್ಯಕರ್ತೆಯರು ನೋಡಿಕೊಳ್ಳುತ್ತಿದ್ದಾರೆ.

ಆರಂಭದಲ್ಲಿ ವಿವಾದಗಳಾಗಿದ್ದವು. ಬಳಿಕ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭರಮು ಉಳ್ಳಾಗಡ್ಡಿ ಪೊಲೀಸರನ್ನು ಕರೆಯಿಸಿ ವಾದ ಮಾಡುವವರಿಗೆ ಅರ್ಥವಾಗುವಂತೆ ತಿಳಿವಳಿಕೆ ಕೊಟ್ಟಿದ್ದಾರೆ.

ಇಷ್ಟೆಲ್ಲ ಕಷ್ಟ ಪಡುತ್ತಿದ್ದರೂ ಆಶಾ ಕಾರ್ಯಕರ್ತೆಯರಿಗೆ ಇಲಾಖೆಯಿಂದ ಮಾಸ್ಕ್ ಬಿಟ್ಟರೆ ಸುರಕ್ಷತೆಗಾಗಿ ಬೇರೇನನ್ನೂ ಇಲ್ಲಿಯವರೆಗೆ ಕೊಟ್ಟಿಲ್ಲ. ಗ್ರಾಮ ಪಂಚಾಯ್ತಿಯಿಂದ ಗ್ಲೌಸ್ ನೀಡಲಾಗಿದೆ. ಆದರೆ ಮಧ್ಯಾಹ್ನ ಊಟದ ವ್ಯವಸ್ಥೆ ಆಗಿಲ್ಲ ಎಂಬ ದೂರು ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT