ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕ ಎಟಿಎಂಗಳಲ್ಲಿ ‘ನೋ ಕ್ಯಾಶ್’

ಹಣಕ್ಕಾಗಿ ಗ್ರಾಹಕರ ಪರದಾಟ; ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಅಧಿಕಾರಿಗಳ ವಿರುದ್ಧ ಹಿಡಿಶಾಪ
Last Updated 20 ಜೂನ್ 2018, 5:46 IST
ಅಕ್ಷರ ಗಾತ್ರ

ಬಾಗಲಕೋಟೆ: ‘ನೋ ಕ್ಯಾಶ್’ ಇಲ್ಲವೇ ‘ಔಟ್‌ ಆಫ್‌ ಸರ್ವಿಸ್‌’ ಫಲಕ ಈಗ ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಟಿಎಂಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಹಣ ತೆಗೆದುಕೊಳ್ಳುವ ಧಾವಂತದಲ್ಲಿ ಎಟಿಎಂಗೆ ಬರುವ ಗ್ರಾಹಕರು, ಯಂತ್ರದ ಮೇಲಿನ ಫಲಕ ಕಾಣುತ್ತಲೇ ಅಸಮಾಧಾನಗೊಳ್ಳುತ್ತಾರೆ. ಬ್ಯಾಂಕ್‌ಗಳ ಆಡಳಿತ ವರ್ಗಕ್ಕೆ, ಕೇಂದ್ರ ಸರ್ಕಾರಕ್ಕೆ, ಬ್ಯಾಂಕಿಂಗ್ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾರೆ.

ಕೆಲವು ಗ್ರಾಹಕರು ಎಟಿಎಂ ಕೇಂದ್ರಗಳ ಎದುರು ಕಾವಲಿಗೆ ನಿಂತಿರುವ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ನಗರದ ವಿದ್ಯಾಗಿರಿ, ನವನಗರ ಹಾಗೂ ಹಳೆಯ ಬಾಗಲಕೋಟೆಯ ಬಹುತೇಕ ಎಟಿಎಂ ಕೇಂದ್ರಗಳಲ್ಲಿ ಮಂಗಳವಾರ ಹಣ ಸಿಗದೇ ಗ್ರಾಹಕರು ಕಂಗಾಲಾದರು. ಇರುವ ಕೆಲವು ಎಟಿಎಂಗಳಲ್ಲಿ ಉದ್ದನೆಯ ಸಾಲು ಕಂಡುಬಂದಿತು. ಶನಿವಾರ ರಮ್ಜಾನ್ ಹಬ್ಬ, ಭಾನುವಾರ ಸೇರಿ ಎರಡು ದಿನ ಸತತವಾಗಿ ರಜೆ ಇದ್ದ ಕಾರಣ ಎಟಿಎಂಗಳಿಗೆ ಹಣ ತುಂಬಿರಲಿಲ್ಲ. ಹಾಗಾಗಿ ‘ನೋ ಕ್ಯಾಶ್’ ಫಲಕ ಕಂಡುಬಂದಿತು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದರೂ, ರಜೆ ಮುಗಿದು ಎರಡು ದಿನ ಕಳೆದರೂ ಎಟಿಎಂಗಳ ಸ್ಥಿತಿ ಸುಧಾರಿಸದಿರುವುದು ಗ್ರಾಹಕರ ತಾಳ್ಮೆಗೆಡಲು ಕಾರಣವಾಗಿತ್ತು.

ಶಾಲೆ–ಕಚೇರಿಗೆ ಹೊರಟವರು, ಉದ್ಯಮಿ, ವ್ಯಾಪಾರಿಗಳು, ಮಾರುಕಟ್ಟೆ, ಆಸ್ಪತ್ರೆಗಳಿಗೆ ಹೊರಟವರು ಹಣ ತೆಗೆದುಕೊಳ್ಳಲು ಹೋದರೆ ಹಣ ಇಲ್ಲದ್ದು ಗೊತ್ತಾಗಿ ನಿರಾಶೆಯಿಂದ ಮರಳಿದರು. ಕೆಲವು ಎಟಿಎಂಗಳು ಬಾಗಿಲು ಹಾಕಿದ್ದು, ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡುವ ಗೋಜು ಬೇಡ ಎಂಬಂತೆ ಸಿಬ್ಬಂದಿ ಕಂಡು ಬಂದರು.

ಜಿಲ್ಲೆಯಲ್ಲಿ ಬಾಗಲಕೋಟೆ ಬಿಟ್ಟರೆ ವ್ಯಾಪಾರ ಕೇಂದ್ರಗಳಾದ ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ, ಇಳಕಲ್, ಗುಳೇದಗುಡ್ಡ ಹಾಗೂ ಬಾದಾಮಿಯ ಎಟಿಎಂಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಬಾದಾಮಿಯಲ್ಲಿ ದೇಶ–ವಿದೇಶಗಳಿಂದ ಬರುವ ಪ್ರವಾಸಿಗರು ಖರ್ಚಿಗೆ ಹಣ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ.

ಸಾಕಾರಗೊಳ್ಳದ ‘ಕ್ಯಾಶ್‌ಲೆಸ್’ ಕನಸು: ನೋಟು ಅಮಾನ್ಯೀಕರಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ‘ಕ್ಯಾಶ್‌ಲೆಸ್’ ವ್ಯವಹಾರದ ಕನಸು ಒಂದಷ್ಟು ಮುನ್ನೆಲೆಗೆ ಬಂದರೂ ಈಗ ಮತ್ತೆ ವಹಿವಾಟು ಮೊದಲಿನ ಸ್ಥಿತಿಗೆ ಬಂದಿದೆ. ಕ್ರೆಡಿಟ್‌–ಡೆಬಿಟ್‌ ಕಾರ್ಡ್‌ ಹಾಗೂ ನಗದು ರಹಿತ ವ್ಯವಹಾರಕ್ಕೆ ಸೇವಾ ಶುಲ್ಕದ ಉಸಾಬರಿಯ ಕಾರಣ ಬಹುತೇಕ ವ್ಯಾಪಾರಿಗಳು ಗ್ರಾಹಕ
ರಿಂದ ನಗದು ರೂಪದಲ್ಲಿಯೇ ಹಣ ಕೇಳುತ್ತಿದ್ದಾರೆ. ಹಾಗಾಗಿ ಎಟಿಎಂಗಳಿಂದ ಹಣ ತೆಗೆಯಬೇಕಿದೆ. ಕ್ಯಾಶ್‌ಲೆಸ್ ವ್ಯವಹಾರ ಅಷ್ಟಾಗಿ ಸಾಕಾರಗೊಳ್ಳದಿರುವುದು ಸಂಕಷ್ಟ ಹೆಚ್ಚಿಸಿದೆ.

ಎರಡು ತಿಂಗಳಿನಿಂದ ಸಂಕಷ್ಟ: ‘ಎಟಿಎಂಗಳಲ್ಲಿ ಹಣ ಸಿಗದಪರಿಸ್ಥಿತಿ ವಿಧಾನಸಭೆ ಚುನಾವಣೆ ವೇಳೆಯಿಂದಲೇ ಆರಂಭವಾಗಿದೆ. ಆಗಿನಿಂದಲೂ ಮುಧೋಳದ ಎಟಿಎಂಗಳಲ್ಲಿ ಸರಿಯಾಗಿ ಹಣ ಸಿಗುತ್ತಿಲ್ಲ’ ಎನ್ನುತ್ತಾರೆ ಗ್ರಾಹಕ ರಾಘವೇಂದ್ರ ಅರಳಿಕಟ್ಟಿ. ‘ಚುನಾವಣೆ ಮುಗಿದ ಮೇಲೆ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿತ್ತು. ಆದರೆ ಹಾಗೆಯೇಮುಂದುವರೆದಿದೆ. ಸಂಬಂಧಪಟ್ಟವರು ಇನ್ನಾದರೂಕ್ರಮಕ್ಕೆ ಮುಂದಾಗಲಿ’ ಎಂದು ಆಗ್ರಹಿಸುತ್ತಾರೆ.

ನಗದು ಕೊರತೆ ಇಲ್ಲ: ಲೀಡ್ ಬ್ಯಾಂಕ್

‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಗದು ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಹಾಗಾಗಿ ಆ ವೇಳೆ ಎಟಿಎಂಗಳಲ್ಲಿ ಹಣ ಸಿಗುತ್ತಿರಲಿಲ್ಲ. ಈಗ ಸಾಮಾನ್ಯ ಪರಿಸ್ಥಿತಿಗೆ ಮರಳಿದೆ. ಆರ್‌ಬಿಐನ ಕರೆನ್ಸಿ ಚೆಸ್ಟ್‌ಗಳಿಂದ ಬೇಡಿಕೆಯಷ್ಟು ನಗದು ಪೂರೈಕೆಯಾಗುತ್ತಿದೆ. ಯಾವುದೇ ಕೊರತೆ ಇಲ್ಲ’ ಎನ್ನುತ್ತಾರೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನವೀನ್‌ಕುಮಾರ್.

‘ಎಟಿಎಂಗಳಲ್ಲಿ ನಿಗದಿತ ಸಮಯಕ್ಕೆ ಹಣ ತುಂಬಿಸುವಲ್ಲಿ ಕೆಲವು ಬ್ಯಾಂಕ್‌ನವರು ಉದಾಸೀನತೆ ತೋರುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದಲೂ ಸಾಕಷ್ಟು ದೂರು ಬಂದಿವೆ. ಈ ನಿರ್ಲಕ್ಷ್ಯದ ಬಗ್ಗೆ ಸಂಬಂಧಿಸಿದ ಬ್ಯಾಂಕ್‌ನ ಮೇಲಧಿಕಾರಿಗಳಿಗೂ ವರದಿ ಸಲ್ಲಿಸಲಾಗುವುದು’ ಎಂದು ನವೀನ್ ಹೇಳುತ್ತಾರೆ.

‘ಸಾಮಾನ್ಯ ದಿನಗಳ ಬೇಡಿಕೆಯಷ್ಟೇ ನಗದನ್ನು ಹಬ್ಬ–ಹರಿದಿನ, ಸಾರ್ವತ್ರಿಕ ರಜೆಯ ವೇಳೆಯೂ ಎಟಿಎಂಗೆ ತುಂಬುವ ಕಾರಣ ಈ ರೀತಿ ಕೊರತೆ ಕಂಡುಬರುತ್ತಿದೆ. ವಿಶೇಷ ದಿನಗಳಲ್ಲಿ ಹೆಚ್ಚಿನ ನಗದು ತುಂಬುವ ಕೆಲಸ ಆಗಬೇಕಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳೊಂದಿಗೂ ಚರ್ಚಿಸಲಾಗುವುದು’ ಎನ್ನುತ್ತಾರೆ. ಜಿಲ್ಲೆಯಲ್ಲಿ ಎಟಿಎಂಗಳಲ್ಲಿ ಹಣ ಸಿಗದಿರುವುದು ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಲು ಇಲ್ಲವೇ ಮಾಹಿತಿ ಪಡೆಯಲು ಗ್ರಾಹಕರು ನವೀನ್‌ಕುಮಾರ ಅವರನ್ನು (ಮೊಬೈಲ್‌ ಸಂಖ್ಯೆ: 94498 60746) ಸಂಪರ್ಕಿಸಬಹುದು.

ಎಟಿಎಂ ನಿರ್ವಹಣೆ ದುಬಾರಿ..

‘ಎಟಿಎಂಗಳ ನಿರ್ವಹಣೆ ದುಬಾರಿಯಾಗಿದ್ದು, ಅವುಗಳ ನಿರ್ವಹಣೆ ಹೊರೆಯಾಗಿ ಪರಿಣಮಿಸಿದೆ. ಹಾಗಾಗಿ ಅವುಗಳನ್ನು ಸದಾ ಚಾಲನೆಯ ಸ್ಥಿತಿಯಲ್ಲಿಡಲು ಕೆಲವು ಬ್ಯಾಂಕ್‌ಗಳು ಮುಂದಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಗರದ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಎಟಿಎಂಗಳ ಭದ್ರತೆಗೆ ಮೂರು ಪಾಳಿಯಲ್ಲಿ ಸಿಬ್ಬಂದಿ ನೇಮಿಸಬೇಕು. ಪ್ರತಿಯೊಬ್ಬರಿಗೂ ₹ 8 ಸಾವಿರದಂತೆ 24 ಸಾವಿರ ಪಗಾರಕ್ಕೆ ವೆಚ್ಚವಾಗುತ್ತದೆ. ಜೊತೆಗೆ ಕಟ್ಟಡದ ಬಾಡಿಗೆ, ಯಂತ್ರದ ನಿರ್ವಹಣೆ, ಹಣ ಹಾಕುವ ಸಂಸ್ಥೆಗೆ ಶುಲ್ಕ, ವಿದ್ಯುತ್ ಬಿಲ್ ಭರಿಸಬೇಕಿದೆ. ಇದು ಆದಾಯಕ್ಕಿಂತ ನಷ್ಟದ ಪ್ರಮಾಣ ಹೆಚ್ಚಿಸಿದೆ’ ಎಂದು ತಿಳಿಸಿದರು.

ತಿಂಗಳ ಅಂತ್ಯಕ್ಕೆ ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದಿರುವೆ. ಎಟಿಎಂಗಳಲ್ಲಿ ಹಣ ಸಿಗದಿರುವ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಲಾಗುವುದು
ವಿಕಾಸ್ ಸುರಳಕರ್, ‌ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT