ಬಾಗಲಕೋಟೆ: ‘ಇತ್ತೀಚಿನ ದಿನಗಳಲ್ಲಿ ಯುವಕರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ತಡೆಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ’ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಸ್.ಸಿ. ಪಾಟೀಲ ಹೇಳಿದರು.
ನವನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಆತ್ಮಹತ್ಯೆ ಮಾಡಿಕೊಳ್ಳದಂತೆ ಭರವಸೆ ತುಂಬುವ ಕೆಲಸ ಆಗಬೇಕು’ ಎಂದರು.
‘ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಪ್ರತಿ ವರ್ಷ ಆಚರಿಸುತ್ತಾ ಬರಲಾಗುತ್ತಿದೆ. ಜಗತ್ತಿನಲ್ಲಿ ಪ್ರತಿ 40 ಸೆಕೆಂಡ್‍ಗೆ ಒಬ್ಬರಂತೆ ಹಾಗೂ ವರ್ಷಕ್ಕೆ 8 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಹತಾಶೆ, ಹಣಕಾಸಿನ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣಗಳಾಗಿವೆ. ಕೆಲವರು ತಮಗೆ ಅತಿಯಾದ ಕಷ್ಟಗಳು ಎದುರಾದಾಗ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಅಂತವರಿಗೆ ಸಮಾಲೋಚನೆ ಹಾಗೂ ಚಿಕಿತ್ಸೆ ಅವಶ್ಯವಾಗಿದೆ’ ಎಂದು ಹೇಳಿದರು.
ಉಪನ್ಯಾಸ ನೀಡಿದ ಮನೋವೈದ್ಯೆ ಸೌಮ್ಯ ಪಾಟೀಲ ಮಾತನಾಡಿ, ‘ಅಲ್ಪ ಖುಷಿ ಪಡೆದುಕೊಳ್ಳಲು ಕೈಗೊಂಡ ಚಟಗಳಿಗೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಒತ್ತಡದಿಂದ ಹೊರಬರಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸಂಕಷ್ಟ ಎದುರಾದಾಗ ಅದರಿಂದ ಹೊರಬರಲು ಪ್ರಯತ್ನಿಸಬೇಕು. ಅಂದಾಗ ಮಾತ್ರ ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ’ ಎಂದರು.
ವಿಷಯ ಪರಿವೀಕ್ಷಕ ವೈ.ಬಿ. ಸಾಲಿ ಮಾತನಾಡಿ, ‘ಇಂದಿನ ಯುವ ಜನತೆ ಅನೇಕ ವ್ಯಸನಗಳಿಗೆ ಬಲಿ ಆಗುತ್ತಿದ್ದಾರೆ. ಮೊಬೈಲ್ ಅತಿಯಾದ ಬಳಕೆ ಕೂಡ ಒಂದು ವ್ಯಸನವಾಗಿ ಪರಿಣಮಿಸುತ್ತಿದೆ. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದು, ಇದನ್ನು ತಡೆಯುವ ಕಾರ್ಯ ಆಗಬೇಕು’ ಎಂದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಮಾತನಾಡಿ, ‘ವ್ಯಸನಿಗಳು ಸ್ವಯಂ ಪ್ರೇರಣೆಯಿಂದ ಚಟ ಬಿಟ್ಟು, ಪರಿವರ್ತನೆ ಹೊಂದಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬೆಲೆ ಸಿಗುತ್ತದೆ’ ಎಂದು ಹೇಳಿದರು.
ಜಿಲ್ಲಾ ಕಾರಾಗೃಹದ ಜೈಲರ್ ಎಂ.ಡಿ.ಸೌದಾಗರ, ಗೀತಾ ಮಾಲಗಾರ, ಎ.ಎಂ.ಭದ್ರಣ್ಣವರ, ಆರ್.ಎಸ್.ನಾಗರಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.