ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ |ಚರ್ಮಗಂಟು: ಹಸು ಇಲ್ಲ, ಪರಿಹಾರವೂ ಸಿಗಲಿಲ್ಲ

ಸಂಕಷ್ಟಕ್ಕೆ ಸಿಲುಕಿರುವ ರೈತ ಕುಟುಂಬಗಳು
Published 5 ಅಕ್ಟೋಬರ್ 2023, 5:32 IST
Last Updated 5 ಅಕ್ಟೋಬರ್ 2023, 5:32 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಹಾಲು ಕೊಡುತ್ತಿದ್ದ ಹಸು ಚರ್ಮಗಂಟು ರೋಗದಿಂದ ಸತ್ತು ಒಂಬತ್ತು ತಿಂಗಳಾದರೂ ಸರ್ಕಾರದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ಸಾವು ನೋವು ಮರೆಯುವ ಮುನ್ನವೇ ಮತ್ತೆ ಚರ್ಮಗಂಟು ವ್ಯಾಪಿಸುತ್ತಿದೆ’

ಹೀಗೆ ಆತಂಕ ವ್ಯಕ್ತಪಡಿಸಿದವರು ರಬಕವಿ ಬನಹಟ್ಟಿಯ ರೈತ ಶಿವಾನಂದ ಯಲ್ಲಟ್ಟಿ. ಅವರಂತೆಯೇ ನೆರವಿನ ನಿರೀಕ್ಷೆಯಲ್ಲಿ ಇರುವ ರೈತರು, ‘ಸರ್ಕಾರದಿಂದ ಪರಿಹಾರ ಸಿಕ್ಕಿದ್ದರೆ, ಇನ್ನೊಂದು ಹಸು ಕೊಳ್ಳಬಹುದಿತ್ತು. ಹಾಲಿನಿಂದ ಕುಟುಂಬದ ಖರ್ಚು ನಿಭಾಯಿಸಬಹುದಿತ್ತು. ಸಮಸ್ಯೆ ಪರಿಹರಿಸಿಕೊಳ್ಳಬಹುದಿತ್ತು’ ಎಂದರು.

‘ಹಸು ಸತ್ತಿದ್ದಕ್ಕೆ ₹20 ಸಾವಿರ ಪರಿಹಾರ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಅರ್ಜಿಯನ್ನೂ ಭರ್ತಿ ಮಾಡಿದೆವು. ಆದರೆ, ಪರಿಹಾರ ಮಾತ್ರ ಸಿಗಲಿಲ್ಲ. ಕಚೇರಿಗೆ ಅಲೆಯುವುದು ತಪ್ಪಲಿಲ್ಲ’ ಎಂಬ ದೂರು ಅವರದ್ದು.

ಕಳೆದ ವರ್ಷ ರಾಜ್ಯದಲ್ಲಿ 3.10 ಲಕ್ಷ ಎತ್ತು, ಎಮ್ಮೆ, ಕರುಗಳಿಗೆ ಚರ್ಮಗಂಟು ರೋಗ ಕಾಣಿಸಿತ್ತು. ಅದರಲ್ಲಿ 32 ಸಾವಿರ ಜಾನುವಾರುಗಳು ಮೃತಪಟ್ಟಿದ್ದವು. ಸಂಕಷ್ಟ ಸಿಲುಕಿದ ರೈತರಿಗೆ ನೆರವಾಗಲು ರಾಜ್ಯ ಸರ್ಕಾರವು ಮೃತ ಎತ್ತಿಗೆ ₹30 ಸಾವಿರ, ಹಸುವಿಗೆ ₹20 ಸಾವಿರ ಹಾಗೂ ಕರುವಿಗೆ ₹5 ಸಾವಿರ ಪರಿಹಾರ ಘೋಷಿಸಿತ್ತು.

‘28,100 ಜಾನುವಾರುಗಳ ಮಾಲೀಕರಿಗೆ ₹57.17 ಕೋಟಿ ಪರಿಹಾರ ವಿತರಿಸಲಾಗಿದೆ. ಇನ್ನೂ 3,900 ಜಾನುವಾರುಗಳ ಮಾಲೀಕರಿಗೆ ₹7.79 ಕೋಟಿ ಪರಿಹಾರ ವಿತರಿಸಬೇಕಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಶ್ರೀನಿವಾಸ ತಿಳಿಸಿದರು.

‘ಬಾಗಲಕೋಟೆ ಜಿಲ್ಲೆಯಲ್ಲಿ 1,607 ಹಸು, ಎತ್ತು, ಕರು ಮೃತಪಟ್ಟಿದ್ದವು. 1,272 ಜಾನುವಾರುಗಳ ಮಾಲೀಕರಿಗೆ ₹2.78 ಕೋಟಿ ಪರಿಹಾರ ಸಿಕ್ಕಿದೆ. ಇನ್ನೂ 325 ಜಾನುವಾರುಗಳ ಮಾಲೀಕರಿಗೆ ₹61.03 ಲಕ್ಷ ಪರಿಹಾರ ಸಿಗಬೇಕಿದೆ’ ಎಂದು ಜಿಲ್ಲೆಯ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಾನಂದ ಕರಡಿಗುಡ್ಡ ಹೇಳಿದರು.

ಚರ್ಮಗಂಟು ರೋಗ ಬಾಗಲಕೋಟೆ, ಬೆಳಗಾವಿ, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಕಾಣಿಸಿದೆ. ರಬಕವಿ ಬನಹಟ್ಟಿ, ಮುಧೋಳ ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ಜಾನುವಾರುಗಳು ಬಳಲುತ್ತಿವೆ.

₹7.79 ಕೋಟಿ ಪರಿಹಾರ ಬಾಕಿ ಜಾನುವಾರು ಮೃತಪಟ್ಟು ಹತ್ತು ತಿಂಗಳು ಮತ್ತೆ ಕಾಣಿಸಿಕೊಂಡಿರುವ ಚರ್ಮಗಂಟು

ರಾಜ್ಯ ಸರ್ಕಾರಕ್ಕೆ ಪರಿಹಾರ ಕೊಡಬೇಕಾದ ರೈತರ ವಿವರ ಕಳುಹಿಸಲಾಗಿತ್ತು. ಈಗಾಗಲೇ ಹಲವು ರೈತರಿಗೆ ಪರಿಹಾರ ಕೊಡಲಾಗಿದೆ. ಉಳಿದವರಿಗೂ ಬಿಡುಗಡೆಯಾದ ಕೂಡಲೇ ನೀಡಲಾಗುವುದು
ಡಾ.ಶಿವಾನಂದ ಕರಡಿಗುಡ್ಡ ಉಪನಿರ್ದೇಶಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT