ತೇರದಾಳ: 15 ದಿನಗಳ ಕಾಲ ಪ್ರವಾಹ ಭೀತಿ ಹುಟ್ಟಿಸಿ, ಗ್ರಾಮದ ಸಾಕಷ್ಟು ಜಮೀನುಗಳನ್ನು ಆವರಿಸಿ, ನದಿ ಪಾತ್ರದ ಜನರನ್ನು ಸಂತ್ರಸ್ತರನ್ನಾಗಿಸಿದ ತಾಲ್ಲೂಕಿನ ತಮದಡ್ಡಿಯ ಕೃಷ್ಣಾ ನದಿಯ ನೀರು ಈಗ ಇಳಿಮುಖವಾಗಿದೆ. ನದಿ ನೀರು ಇಳಿಮುಖವಾಗುತ್ತಿದ್ದಂತೆ ಸರ್ಕಾರ ಇಲ್ಲಿ ತೆರೆದಿದ್ದ ಕಾಳಜಿ ಕೇಂದ್ರವನ್ನು ಸ್ಥಗಿತಗೊಳಿಸಿದೆ.
ಸಂತ್ರಸ್ತರ ಜಾನುವಾರುಗಳಿಗೆ ವಿತರಿಸುತ್ತಿದ್ದ ಮೇವನ್ನು ಕೂಡ ನಿಲ್ಲಿಸಲಾಗಿದೆ. ಆದರೆ ನೀರು ಇಳಿದು ಹೋದ ತಕ್ಷಣ ನದಿಪಾತ್ರದಲ್ಲಿ ಜೀವನ ಕಟ್ಟಿಕೊಂಡಿರುವ ಸಂತ್ರಸ್ತರು ಹೋಗಿ ಜೀವನ ನಡೆಸಲು ಅಸಾಧ್ಯವಾಗಿದೆ. ಅಲ್ಲಿ ಇನ್ನೂ ತೇವಾಂಶವಿದ್ದು, ಜಾನುವಾರನ್ನು ಕಟ್ಟುವ ಕೊಟ್ಟಿಗೆ ಸುತ್ತ ಕೆಸರು ತುಂಬಿದೆ. ಸುತ್ತಲಿನ ಪ್ರದೇಶದಲ್ಲಿ ನೀರು ನಿಂತಿದ್ದರಿಂದ ಅಲ್ಲಿಯ ಬೆಳೆ, ಕಳೆಯೆಲ್ಲ ಕೊಳೆತು ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಿದೆ. ಇದರಿಂದ ಸಂತ್ರಸ್ತರಲ್ಲಿ ಅನೇಕರು ತೇರದಾಳ ರಸ್ತೆ ಬದಿಯಲ್ಲಿಯೇ ತಮ್ಮ ಜಾನುವಾರನ್ನು ಕಟ್ಟಿಕೊಂಡು ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಮೇವಿನ ಸರಬರಾಜನ್ನು ನಿಲ್ಲಿಸಿದ್ದರಿಂದ ತಾವೇ ಮೇವು, ನೀರನ್ನು ದೂರದಿಂದ ತರುತ್ತಿದ್ದಾರೆ.
‘ನೀರು ಇಳಿದಿದೆ. ಆದರೆ ಮರಳಿ ಮನೆಗೆ ಹೋಗಿ ವಾಸ ಮಾಡಬೇಕೆಂದರೆ ಅಲ್ಲಿ ಸಾಕಷ್ಟು ಕೆಸರು ಇದೆ. ದನಕರುಗಳನ್ನು ಅಲ್ಲಿ ಕಟ್ಟಲು ಸಾಧ್ಯವಿಲ್ಲ. ಉತ್ತಮ ಕೊಟ್ಟಿಗೆಗಳನ್ನು ಹೊಂದಿದವರು ಮರಳಿ ಹೋಗಿದ್ದಾರೆ. ನಾವಿಲ್ಲಿಯೇ ಇದ್ದೇವೆ. ಅಧಿಕಾರಿಗಳು ಮೇವು ಕೊಡುತ್ತಿಲ್ಲ. ಕಾಳಜಿ ಕೇಂದ್ರದಲ್ಲಿಯ ಊಟವೂ ಬಂದ್ ಆಗಿರುವ ಕಾರಣ ರಸ್ತೆ ಬದಿಯೇ ಅಡುಗೆ ಮಾಡಿಕೊಳ್ಳುತ್ತಿದ್ದೇವೆ. ಪ್ರವಾಹ ಬಂದಾಗಿನಿಂದ ಕೂಲಿ ಕೆಲಸವೂ ಇಲ್ಲದೇ ಎಲ್ಲದಕ್ಕೂ ಪರದಾಡುತ್ತಿದ್ದೇವೆ’ ಎಂದು ಸಂತ್ರಸ್ತ ಸಿದ್ರಾಮ ಸಿಂಗೆ ಅಳಲು ತೋಡಿಕೊಂಡರು.
‘ಪ್ರತಿ ಪ್ರವಾಹದಲ್ಲೂ ತಮದಡ್ಡಿ ಗ್ರಾಮ ನಲುಗುತ್ತದೆ. ಮುಳುಗಡೆ ಗ್ರಾಮವೆಂದು ಘೋಷಣೆಗೊಂಡರೂ, ಅವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಅದಕ್ಕೆಂದು ಗುರುತಿಸಿದ್ದ ಜಾಗದ ವಿವಾದ ಹೈಕೋರ್ಟ್‌ನಲ್ಲಿ ಇದೆ. ಸರ್ಕಾರ ಮುತುವರ್ಜಿ ವಹಿಸಿ ವಿವಾದಕ್ಕೆ ಅಂತ್ಯ ಎಳೆಯಲು ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಈ ಕುರಿತು ಗ್ರಾಮಸ್ಥರಲ್ಲಿ ಅನೇಕರು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಹಲವು ಮನವಿಗಳನ್ನು ಸಲ್ಲಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಜುಲೈ 30ರಂದು ಪ್ರವಾಹ ಪರಿಸ್ಥಿತಿ ಅರಿಯಲು ಜಿಲ್ಲೆಯ ವಿವಿಧ ಕಡೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಸರ್ಕಾರ ಸಂತ್ರಸ್ತರ ಬಗ್ಗೆ, ಮುಳುಗಡೆ ಗ್ರಾಮದ ಕುರಿತು ಕಾಳಜಿ ಹೊಂದಿಲ್ಲ’ ಎಂದು ಗ್ರಾಮಸ್ಥ ನಂದೇಪ್ಪ ನಂದೇಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.
‘ಮುಳುಗಡೆಗೊಂಡಿದ್ದ ಅಂದಾಜು 1,200 ಎಕರೆ ಭೂಪ್ರದೇಶದ ಸಾಕಷ್ಟು ಬೆಳೆ ಹಾನಿಯಾಗಿದೆ. ಅದರ ಕುರಿತು ಸರ್ವೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮುಳುಗಡೆ ಗ್ರಾಮ ಎಂದು ಘೋಷಿತವಾಗಿದ್ದರಿಂದ ಬೆಳೆ ಹಾನಿ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕಬಹುದು’ ಎಂಬ ಸಂದೇಹ ರೈತರಲ್ಲಿ ಆತಂಕ
ಮೂಡಿಸಿದೆ.
ವಾಸಕ್ಕೆ ಯೋಗ್ಯ
‘ಸರ್ಕಾರದ ನಿರ್ದೇಶನದಂತೆ ಪ್ರವಾಹ ಇಳಿಕೆಯಾದ ನಂತರ ಸಂತ್ರಸ್ತರು ವಾಸವಿರುವ ಪ್ರದೇಶವನ್ನು ಗ್ರಾಮ ಪಂಚಾಯಿತಿ ಪಿಡಿಒ ಜೊತೆ ಪರಿಶೀಲಿಸಿದ ನಂತರ ಅಲ್ಲಿ ವಾಸಕ್ಕೆ ಯೋಗ್ಯವೆಂದ ಮೇಲೆ ಮೂಲ ಸ್ಥಳಕ್ಕೆ ತೆರಳಲು ಸಂತ್ರಸ್ತರಿಗೆ ಸೂಚಿಸಿದ್ದೇವೆ. ಇದರಿಂದ ಕಾಳಜಿ ಕೇಂದ್ರ ಹಾಗೂ ಮೇವು ಪೂರೈಕೆ ಸ್ಥಗಿತಗೊಳಿಸಲಾಗಿದೆ’ ಎಂದು ತಮದಡ್ಡಿ ನೋಡಲ್ ಅಧಿಕಾರಿ ಆನಂದ ಕೆಸರಗೊಪ್ಪ ತಿಳಿಸಿದರು.
ತೇರದಾಳ ತಾಲ್ಲೂಕಿನ ತಮದಡ್ಡಿಯಲ್ಲಿನ ಕೃಷ್ಣಾ ನದಿ ಪ್ರವಾಹ ಇಳಿದು ನೀರು ನದಿ ಒಡಲು ಸೇರಿರುವುದರಿಂದ ಅಥಣಿ ತಾಲ್ಲೂಕಿನ ಸತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೋಟ್ ಸೇವೆ ಸೋಮವಾರದಿಂದ ಆರಂಭವಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.