ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ | ಆರಂಭವಾಗದ ಕುಡಿಯುವ ನೀರಿನ ಶುದ್ಧ ಘಟಕ

ಸ್ಥಗಿತವಾಗಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಎಸ್.ಎಂ. ಹಿರೇಮಠ
Published 30 ನವೆಂಬರ್ 2023, 5:32 IST
Last Updated 30 ನವೆಂಬರ್ 2023, 5:32 IST
ಅಕ್ಷರ ಗಾತ್ರ

ಬಾದಾಮಿ: ತಾಲ್ಲೂಕಿನಲ್ಲಿ 2015-16 ರಲ್ಲಿ ಆರಂಭವಾದ ಕುಡಿಯುವ ನೀರನ ಶುದ್ಧ ಘಟಕಗಳು ಸ್ಥಗಿತವಾಗಿವೆ. ಏಳು ಗ್ರಾಮಗಳಿಗೆ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭವಾಗದೇ ಜನರು ನೀರಿಗಾಗಿ ಪರದಾಡುವಂತಾಗಿದೆ. ಲಕ್ಷಾಂತರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ತಾಲ್ಲೂಕಿನ 49 ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿ ಏಳು ವರ್ಷಗಳಾಗಿವೆ. ಕೆಲವು ಹಳ್ಳಿಯಲ್ಲಿ ಜನರು ಉಪಯೋಗಿಸುವರು. ಕೆಲವು ಗ್ರಾಮಗಳಲ್ಲಿ ಉಪಯೋಗಿಸುವುದಿಲ್ಲ. ಅವಶ್ಯಕತೆಗೆ ತಕ್ಕಂತೆ ನೀರಿನ ಘಟಕಗಳನ್ನು ಆರಂಭಿಸಬೇಕಿತ್ತು. ಸರಿಯಾಗಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸದ ಕಾರಣ ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿವೆ.

ಜಾಲಿಹಾಳ ಗ್ರಾಮದ ಹೊರವಲಯದಲ್ಲಿ ಏಳು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಮಲಪ್ರಭಾ ನದಿಯಿಂದ ಇಲ್ಲಿ ನೀರು ಸಂಗ್ರಹವಾಗಿ ಶುದ್ಧೀಕರಣಗೊಂಡು ಗ್ರಾಮಗಳಿಗೆ ಪೂರೈಕೆ ಮಾಡಬೇಕು ಎಂದು ಜಾರಿಗೊಳಿಸಲಾಗಿದ್ದ ಯೋಜನೆ ಕಾರ್ಯ ನಿರ್ವಹಿಸುತ್ತಿಲ್ಲ.

ಬೇಲೂರ, ಜಾಲಿಹಾಳ, ಢಾಣಕಶಿರೂರ, ಮಣ್ಣೇರಿ, ಹೊಸೂರ, ಗುಡ್ಡದ ಮಲ್ಲಾಪುರ ಮತ್ತು ನಸಗುನ್ನಿ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ಯೋಜನೆಯಾಗಿದ್ದು, ಒಂದೆರಡು ಬಾರಿ ನೀರು ಬಂದದ್ದು ಬಿಟ್ಟರೆ, ಮತ್ತೆ ನೀರು ಬರಲೇ ಇಲ್ಲ. ಐದು ವರ್ಷಗಳಿಂದ ನೀರೇ ಬಂದಿಲ್ಲ ಎಂದು ಬೇಲೂರ, ಜಾಲಿಹಾಳ ಗ್ರಾಮದ ಜನರು ತಿಳಿಸಿದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಶುದ್ಧ ನೀರಿನ ಘಟಕಗಳು ಎರಡು ತಿಂಗಳಲ್ಲಿ ದುರಸ್ತಿಯಾಗಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಆರು ತಿಂಗಳು ಗತಿಸಿದರೂ ಇನ್ನೂ ದುರಸ್ತಿಯ ಭಾಗ್ಯ ಕಂಡಿಲ್ಲ.

‘ನಮ್ಮ ಊರಾಗ ಕುಡಿಯುವ ನೀರಿನ ಸಮಸ್ಯೆ ಇದೆ. ಶುದ್ಧ ನೀರಿನ ಘಟಕ ಕೆಟ್ಟು ಐದು ವರ್ಸಾತು. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಸಮಾರಂಭದಲ್ಲಿ ದುರಸ್ತಿ ಮಾಡಿಸಲು ಹೇಳಿದ್ದೆವು ವರ್ಷವಾದರೂ ದುರಸ್ತಿ ಆಗಿಲ್ಲ’ ಎಂದು ಬಾಚಿನಗುಡ್ಡ ಗ್ರಾಮದ ಕುಮಾರ ಯಡಪ್ಪನವರ ದೂರಿದರು..

‘ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಗುತ್ತಿಗೆದಾರರಿಗೆ ನೋಟಿಸ್ ಕೊಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಪರಿಕರಗಳು ಮತ್ತು ಮೋಟಾರ್ ಅಳವಡಿಕೆ ಮಾಡಿ ಆರಂಭಿಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಅಧಿಕಾರಿ ಆರ್.ಎಸ್. ಬಂಡಿ ಹೇಳಿದರು.

‘ಮಳೆಯಾಗದ ಕಾರಣ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಗೊನ್ನಾಗರ ಆಗ್ರಹಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ ಬಹುಗ್ರಾಮ ಯೋಜನೆ ದುರಸ್ತಿ ಕೈಗೊಳ್ಳಿ ನೀರಿಗಾಗಿ ಪರದಾಡಬೇಕಾದ ಸ್ಥಿತಿ

ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸುವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ
ಭೀಮಸೇನ ಚಿಮ್ಮನಕಟ್ಟಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT