ಬಾಗಲಕೋಟೆ: ‘ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 2.99 ಲಕ್ಷ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳಿಗೆ ಮಂಗಳವಾರ ₹17.78 ಕೋಟಿ ಪಾವತಿ ಮಾಡಲಾಗಿದೆ. 4,18,560 ಪಡಿತರ ಚೀಟಿಗಳಿದ್ದು, ಆ ಪೈಕಿ ಸಕ್ರಿಯವಾಗಿರುವ, ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವವರಿಗೆ ಹಣ ಜಮೆಯಾಗಿದೆ’ ಎಂದು ಜಿಲ್ಲಾಧಿಕಾರಿ ಜಾನಕಿ ತಿಳಿಸಿದ್ದಾರೆ.
‘10 ಕೆ.ಜಿ. ಅಕ್ಕಿ ಪೈಕಿ ಐದು ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, ಐದು ಕೆ.ಜಿ ಅಕ್ಕಿ ಬದಲಾಗಿ ಪ್ರತಿ ಕೆ.ಜಿ.ಗೆ ₹34ರಂತೆ ₹170 ಜಮಾ ಮಾಡಲಾಗಿದೆ. ಕುಟುಂಬ ಸದಸ್ಯರ ಆಧಾರದ ಮೇಲೆ ಹಣ ಪಾವತಿ ಮಾಡಲಾಗಿದೆ. ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ. ಆಹಾರಧಾನ್ಯ ಪಡೆಯುತ್ತಿರುವುದರಿಂದ ಅಂತಹ ಕುಟುಂಬಕ್ಕೆ ನಗದು ಸೌಲಭ್ಯ ನೀಡಲಾಗುವುದಿಲ್ಲ’ ಎಂದಿದ್ದಾರೆ
‘ಅಂತ್ಯೋದಯ ಪಡಿತರ ಚೀಟಿಯ ಕುಟುಂಬದಲ್ಲಿ ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ ವ್ಯಕ್ತಿಗೆ ತಲಾ ₹170 ರಂತೆ ಹಣ ಪಾವತಿ ಮಾಡಲಾಗುತ್ತದೆ. ಹಿಂದಿನ ಮೂರು ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದುಕೊಂಡಿರುವ ಕುಟುಂಬಗಳು ಮಾತ್ರ ನಗದು ವರ್ಗಾವಣೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಕುಟುಂಬಕ್ಕೆ ನಗದು ವರ್ಗಾವಣೆ ಮಾಡಿಲ್ಲ. ಮೇಲಿನ ವರ್ಗಗಳಲ್ಲಿ 50 ಸಾವಿರದಷ್ಟು ಪಡಿತರ ಚೀಟಿದಾರರಿದ್ದಾರೆ. ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆ ಚಾಲನೆಯಲ್ಲಿಲ್ಲದ, ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ (ಇ-ಕೆವೈಸಿ) ಮಾಡಿಸದ, ಅಮಾನ್ಯವಾದ ಆಧಾರ್ ಸಂಖ್ಯೆ ನೀಡಿದವರ ಖಾತೆಗೆ ಹಣ ಜಮಾ ಆಗಿರುವುದಿಲ್ಲ. ಜು.20ರೊಳಗೆ ಮೇಲಿನ ಅಂಶಗಳನ್ನು ಸರಿಪಡಿಸಿದರೆ ಮುಂದಿನ ತಿಂಗಳು ಹಣ ಜಮಾ ಆಗಲಿದೆ’ ಎಂದೂ ತಿಳಿಸಿದ್ದಾರೆ.
ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರೆ ವಿವರಗಳನ್ನು https://ahara.kar.nic.in/status2/status_of_dbt.aspx ಪಡೆಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.