ಬಾಗಲಕೋಟೆ: ಮೋದಿ–ಸಿದ್ದರಾಮಯ್ಯ ಪ್ರತಿಷ್ಠೆ ಮುನ್ನೆಲೆಗೆ

ಬುಧವಾರ, ಏಪ್ರಿಲ್ 24, 2019
23 °C
ಬಾಗಲಕೋಟೆ: ಗದ್ದಿಗೌಡರಿಗೆ ಸೆಡ್ಡು ಹೊಡೆದ ವೀಣಾ ಕಾಶಪ್ಪನವರ

ಬಾಗಲಕೋಟೆ: ಮೋದಿ–ಸಿದ್ದರಾಮಯ್ಯ ಪ್ರತಿಷ್ಠೆ ಮುನ್ನೆಲೆಗೆ

Published:
Updated:

ಬಾಗಲಕೋಟೆ: ನೆತ್ತಿ ಸುಡುವ ಬಿಸಿಲ ಝಳದ ನಡುವೆ ಕೃಷ್ಣೆಯ ನಾಡಿನಲ್ಲಿ ಲೋಕಸಭಾ ಚುನಾವಣೆ ಕಾವು ಪಡೆದಿದೆ. ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಾಗಲಕೋಟೆ ಕ್ಷೇತ್ರ ನಂತರ ಜನತಾ ಪರಿವಾರಕ್ಕೂ ನೆಲೆ ಕಲ್ಪಿಸಿತ್ತು. ಕಳೆದ ಮೂರು ಅವಧಿಯಲ್ಲಿ ಇಲ್ಲಿ ಕಮಲದ ಧ್ವಜ ರಾರಾಜಿಸಿದೆ. ಆದರೆ ಈ ಬಾರಿ ಮಾತ್ರ ಅಭ್ಯರ್ಥಿ, ಪಕ್ಷ ಗೌಣವಾಗಿದೆ. ಅಂತಿಮವಾಗಿ ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆಯೇ ಮುನ್ನೆಲೆಗೆ ಬಂದಿದೆ.

ರಾಜ್ಯ ರಾಜಕಾರಣದ ಅತಿರಥ– ಮಹಾರಥರಾಗಿದ್ದ ವೀರೇಂದ್ರ ಪಾಟೀಲ ಹಾಗೂ ರಾಮಕೃಷ್ಣ ಹೆಗಡೆ ಹಿಂದೆ ಇಲ್ಲಿಂದ ಭವಿಷ್ಯ ಪಣಕ್ಕಿಟ್ಟಿದ್ದರು. 1991ರ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಉರುಳಿಸಿದ್ದ ಜಾತಿ ಸಮೀಕರಣದ ದಾಳದ ಎದುರು ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣ ಕೂಡ ಮಸುಕಾಗಿತ್ತು. ಸಿದ್ದು ನ್ಯಾಮಗೌಡ ಎಂಬ ಹೊಸ ಮುಖದ ಎದುರು ಹೆಗಡೆ ಸೋಲೊಪ್ಪಿದ್ದನ್ನು ಇಲ್ಲಿನ ಜನ ಈಗಲೂ ದಂತಕಥೆಯಂತೆ ಮಾತಾಡುತ್ತಾರೆ. ವಿಶೇಷವೆಂದರೆ ಅಂದು ಸೋತರೂ ಜನತಾ ಪರಿವಾರದ ಮೂಲಕ ಜಿಲ್ಲೆಯಲ್ಲಿ ಹೆಗಡೆ ಮೂಡಿಸಿದ್ದ ಹೆಜ್ಜೆ ಗುರುತಿನ ಬಿಂಬ ಮಾತ್ರ ಇಂದಿಗೂ ಅವರ ಶಿಷ್ಯ ಪಿ.ಸಿ.ಗದ್ದಿಗೌಡರ ರೂಪದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.

ಅದೃಷ್ಟದ ಕೂಸು: ಸಂಸದ ಪಿ.ಸಿ.ಗದ್ದಿಗೌಡರ ಅವರನ್ನು ಜಿಲ್ಲೆಯ ರಾಜಕಾರಣದ ಮಟ್ಟಿಗೆ ಅದೃಷ್ಟದ ಕೂಸು ಎಂದೇ ಬಣ್ಣಿಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳಿಂದ ಮೊದಲ ಬಾರಿಗೆ ವಿಧಾನಪರಿಷತ್‌ಗೆ ಆಯ್ಕೆಯಾದಾಗಲೂ ಅವಿರೋಧ ಆಯ್ಕೆಯ ಶ್ರೇಯ ದೊರಕಿತ್ತು. ಒಮ್ಮೆ ಅಟಲ್‌ ಬಿಹಾರಿ ವಾಜಪೇಯಿ, ಇನ್ನೊಮ್ಮೆ ಬಿ.ಎಸ್.ಯಡಿಯೂರಪ್ಪ, ಮತ್ತೊಮ್ಮೆ ನರೇಂದ್ರ ಮೋದಿ ಅವರ ಅಲೆ ಗದ್ದಿಗೌಡರನ್ನು ಗೆಲುವಿನ ದಡ ಮುಟ್ಟಿಸಿದೆ.

‘ಹೀಗೆ ಶ್ರಮವಿಲ್ಲದೇ ದೊರೆತ ಗೆಲುವು ಅವರನ್ನು ನಿಷ್ಕ್ರಿಯವಾಗಿಸಿದೆ’ ಎಂದು ಅವರ ಪಕ್ಷದವರೇ ದೂರುತ್ತಾರೆ. ಆದರೆ ಸರಳತೆ, ಜನರಿಗೆ ಸುಲಭವಾಗಿ ಸಿಗುವುದು, ಕೆಲಸ ಮಾಡದಿದ್ದರೂ ಕೈ–ಬಾಯಿ ಶುದ್ಧವಾಗಿಟ್ಟುಕೊಂಡಿದ್ದಾರೆ ಎಂಬ ಮಾತನ್ನು ವಿರೋಧಿಗಳೂ ಅಲ್ಲಗಳೆಯುವುದಿಲ್ಲ. ಜನತಾ ಪರಿವಾರದಲ್ಲಿದ್ದಾಗಿನ ನಂಟಿನಿಂದಾಗಿ ಕೆಲವು ಕಾಂಗ್ರೆಸ್‌ ನಾಯಕರೂ ಗೌಡರ ಬೆನ್ನಿಗೆ ನಿಲ್ಲುವುದು ಗುಟ್ಟಾಗೇನೂ ಉಳಿದಿಲ್ಲ. ಹಾಗಾಗಿ ಪ್ರತೀ ಬಾರಿಯೂ ಗೆಲುವಿನ ಅಂತರ ಹೆಚ್ಚುತ್ತಲೇ ಸಾಗಿದೆ. ಜಿಲ್ಲೆಯಲ್ಲಿ ಪಕ್ಷದ ಪ್ರಬಲ ಸಂಘಟನೆ, ಗಾಣಿಗ ಸಮುದಾಯದ ಬಲ ಹಾಗೂ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರೇ ಇರುವುದು ಗೌಡರಿಗೆ ಪೂರಕವಾಗಿದೆ.

ರಣತಂತ್ರ ಬದಲಾವಣೆ: ಸತತ ಮೂರು ಬಾರಿಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಈ ಬಾರಿ ತನ್ನ ಚುನಾವಣಾ ರಣತಂತ್ರ ಬದಲಾಯಿಸಿದೆ. ಇದೇ ಮೊದಲ ಬಾರಿಗೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ವೀಣಾ ಕಾಶಪ್ಪನವರಗೆ ಟಿಕೆಟ್‌ ನೀಡಿದೆ. ಆ ಮೂಲಕ ಕಳೆದ ಮೂರು ಚುನಾವಣೆಗಳಲ್ಲೂ ಲಿಂಗಾಯತ ತಾತ್ವಿಕತೆಯಡಿ ಒಟ್ಟಿಗೆ ಸಾಗಿ ಬಿಜೆಪಿಯ ಕಮಲ ಅರಳಲು ನೆರವಾಗುತ್ತಿದ್ದ ಗಾಣಿಗ– ಪಂಚಮಸಾಲಿ ಸಮುದಾಯಗಳನ್ನು ಬೇರ್ಪಡಿಸಿದೆ. ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಬಲ ಎನಿಸಿರುವ ಕುರುಬರು, ರಡ್ಡಿ, ಮುಸ್ಲಿಮರು ಹಾಗೂ ದಲಿತರು ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ಅವರೊಂದಿಗೆ ಪಂಚಮಸಾಲಿ ಸಮುದಾಯ ಕೈಜೋಡಿಸಿದರೆ ಗೆಲುವು ಸುಲಭ ಎಂಬುದು ಹೈಕಮಾಂಡ್ ಲೆಕ್ಕಾಚಾರ. ಇದು ಬಿಜೆಪಿಯ ನಿದ್ರೆಗೆಡಿಸಿದೆ. 

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ 2 ವರ್ಷ 8 ತಿಂಗಳ ಕಾಲ ನಡೆಸಿದ ಆಡಳಿತದ ಅನುಭವ, ಯುವ ನಾಯಕತ್ವ, ಮೇಲಾಗಿ ಕಾಶಪ್ಪನವರ ಕುಟುಂಬದ ಸೊಸೆ ಎಂಬುದು ವೀಣಾಗೆ ಟಿಕೆಟ್ ಗಿಟ್ಟಿಸಲು ನೆರವಾಗಿದೆ. ಕ್ಷೇತ್ರದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್ ಕೊಡಲಾಗಿದೆ.

ಇಲ್ಲಿಯವರೆಗೂ ಬೇರೆಯವರ ಅಲೆಯಲ್ಲಿ ತೇಲಿ ಬಂದಿರುವ ಸಂಸದರು, ಜಿಲ್ಲೆಗೆ ಏನೂ ಮಾಡಿಲ್ಲ ಎಂಬುದನ್ನೇ ಕಾಂಗ್ರೆಸ್‌ ಪ್ರಚಾರದ ವೇಳೆ ಮುನ್ನೆಲೆಗೆ ತರುತ್ತಿದೆ. ಇದು ಈ ಬಾರಿ ಬಿಜೆಪಿಯವರ ಶ್ರಮ ಹೆಚ್ಚಿಸಿದೆ.

ಒಳಬೇಗುದಿಯದ್ದೇ ಚಿಂತೆ: ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ಗೆ ಒಳಬೇಗುದಿಯದ್ದೇ ಚಿಂತೆ. ವಿಧಾನಸಭೆ ಚುನಾವಣೆ ಸೋಲಿನ ನಂತರ ವೀಣಾ ಪತಿ, ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಹಿರಂಗವಾಗಿ ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು ಬಿಜೆಪಿಗೆ ಪ್ರಬಲ ಅಸ್ತ್ರವಾಗಿ ಸಾಮಾಜಿಕ ಜಾಲ ತಾಣದಲ್ಲೂ ಪ್ರತಿಧ್ವನಿಸುತ್ತಿದೆ. ಇದು ಕಾಂಗ್ರೆಸ್‌ನ ಚಿಂತೆ ಹೆಚ್ಚಿಸಿದೆ. ಪತ್ನಿಗೆ ಟಿಕೆಟ್ ದೊರೆಯುತ್ತಲೇ ತುರ್ತು ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ವಿಜಯಾನಂದ ಕ್ಷಮೆ ಯಾಚಿಸಿದ್ದಾರೆ. ಮುಖಂಡರ ಮನೆಗಳಿಗೆ ತೆರಳಿ ಹಳಸಿದ್ದ ಸಂಬಂಧ ಬೆಸೆದುಕೊಳ್ಳುವ ಕೆಲಸ ಮಾಡಿದ್ದಾರೆ. ಈ ಕೂಡುವಿಕೆ ತೋರಿಕೆಗೆ ಮಾತ್ರವಾದರೆ ವೀಣಾ ಗೆಲುವು ಕಷ್ಟ ಎಂಬ ಮಾತು ಪಕ್ಷದ ಆಂತರ್ಯದಲ್ಲಿಯೇ ಕೇಳಿಬರುತ್ತಿದೆ. ಕುರುಬ ಸಮಾಜದ ಮತ ಸೆಳೆಯಲು ಕೆ.ಎಸ್.ಈಶ್ವರಪ್ಪ ಅವರನ್ನು ಕರೆತಂದು ಜಿಲ್ಲೆಯ ಚುನಾವಣೆ ಉಸ್ತುವಾರಿಯಾಗಿ ಬಿಜೆಪಿ ನೇಮಿಸಿದೆ. ಜೊತೆಗೆ ಕಾಂಗ್ರೆಸ್‌ನ ಹೊಸ ಅಸ್ತ್ರಕ್ಕೆ ಮೋದಿ ಅಲೆಯೇ ಪ್ರತ್ಯುತ್ತರ ಎಂದು ಏಪ್ರಿಲ್ 18ರಂದು ಪ್ರಧಾನಿ ಕಾರ್ಯಕ್ರಮ ಆಯೋಜಿಸಿದೆ.

ಪಕ್ಷದ ಒಳಬೇಗುದಿ ತಣಿಸಲು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಈಗಾಗಲೇ ಪ್ರಯತ್ನ ನಡೆಸಿದ್ದಾರೆ. ಬಾದಾಮಿ ಶಾಸಕರೂ ಆಗಿರುವ ಕಾರಣ ವೀಣಾ ಗೆಲ್ಲಿಸುವುದು ಅವರಿಗೆ ಪ್ರತಿಷ್ಠೆ ಪ್ರಶ್ನೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಜೊತೆಗೆ, ಮೋದಿ ಅಲೆಗೆ ಪ್ರತಿ ತಂತ್ರ ಹೂಡುವ ಸವಾಲು ಎದುರಿಗಿದೆ.

* ಕ್ಷೇತ್ರಕ್ಕೆ ಸಾವಿರಾರು ಕೋಟಿ ಮೊತ್ತದ ಅನುದಾನ ತಂದಿದ್ದೇನೆ. ಕೆಲಸದ ಬಗ್ಗೆ ಪ್ರಚಾರ ಬಯಸಿಲ್ಲ. ನಾಲ್ಕನೇ ಬಾರಿಗೂ ಆಶೀರ್ವದಿಸಲಿದ್ದಾರೆ.

- ಪಿ.ಸಿ.ಗದ್ದಿಗೌಡರ, ಬಿಜೆಪಿ ಅಭ್ಯರ್ಥಿ

* ಜನರಿಗೆ ಹೇಳಲು ಸಂಸದರ ಬಳಿ ಏನೂ ಉಳಿದಿಲ್ಲ. ಹಾಗಾಗಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ನನಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ.

- ವೀಣಾ ಕಾಶಪ್ಪನವರ, ಕಾಂಗ್ರೆಸ್ ಅಭ್ಯರ್ಥಿ

* ಮಹಿಳೆಯರು, ಮಕ್ಕಳ ಸುರಕ್ಷತೆಗೆ ಒತ್ತು ನೀಡುವ ಕಾಳಜಿ ಹೊಂದಿರುವವರನ್ನು ಬೆಂಬಲಿಸಲಿದ್ದೇನೆ.

- ಅರ್ಪಿತಾ ವಡೆ, ವೈದ್ಯಕೀಯ ವಿದ್ಯಾರ್ಥಿನಿ, ಬಾಗಲಕೋಟೆ

* ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ, ಯುವ ಸಮೂಹದ ಬೆಳವಣಿಗೆ ಬಗ್ಗೆ ದೂರದೃಷ್ಟಿ ಹೊಂದಿದವರನ್ನು ಬೆಂಬಲಿಸುವೆ.

- ಹಣಮಂತ ಭೂಷಣ್ಣವರ, ಶಿಕ್ಷಕ, ಜಮಖಂಡಿ

–––

ಪ್ರಜಾವಾಣಿ ವಿಶೇಷ ಸಂದರ್ಶನಗಳು...
ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ
ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ
ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ
ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ
ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್‌
ಬಡವರದ್ದಲ್ಲ, ಕಾಂಗ್ರೆಸ್‌ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ
ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !