ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಮೂಲ ಸೌಲಭ್ಯಗಳದ್ದೆ ಸವಾಲು

Published 20 ಜುಲೈ 2023, 6:27 IST
Last Updated 20 ಜುಲೈ 2023, 6:27 IST
ಅಕ್ಷರ ಗಾತ್ರ

ಎಚ್.ಎಸ್.ಘಂಟಿ

ಗುಳೇದಗುಡ್ಡ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 20ಕ್ಕೂ ಹೆಚ್ಚು ಹಳ್ಳಿಗಳ  ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಹೊಸ ಕೋರ್ಸ್‌ಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದರೂ ಮೂಲಸೌಲಭ್ಯಗಳ ಕೊರತೆಯಿಂದ ಹೊಸ ಕೋರ್ಸ್‌ಗಳ ಆರಂಭಿಸಲು ಕಾಲೇಜು ಹಿಂದೇಟು ಹಾಕುತ್ತಿದೆ.

ಮುಖ್ಯ ಬಸ್ ನಿಲ್ದಾಣದ ಹಿಂದಿರುವ ಬಾಲಕರ ಸರ್ಕಾರಿ ಪ್ರೌಢಶಾಲೆ ಹಾಗೂ ಪಿ.ಯು ಕಾಲೇಜ್ ಕ್ಯಾಂಪಸ್‍ನಲ್ಲಿ ಈ ಕಾಲೇಜು 2019ರ ಜೂನ್ ತಿಂಗಳಲ್ಲಿ ಪ್ರಾರಂಭವಾಗಿ 4 ವರ್ಷ ಗತಿಸಿದರೂ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ.

ಪ್ರಸ್ತುತ ಪ್ರಥಮ, ದ್ವಿತೀಯ, ತೃತಿಯ ವರ್ಷದ ಕಲಾ ಪದವಿಯಲ್ಲಿ ಓದಲು ಮಾತ್ರ ಅವಕಾಶವಿದ್ದು ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವರಿಗೆ ವಿಷಯಾನುಸಾರ ಕನಿಷ್ಠ 10 ವರ್ಗ ಕೋಣೆಗಳ ಅವಶ್ಯಕತೆ ಇದೆ. ಆದರೆ ಈಗ ಇರುವುದು ಕೇವಲ 5 ವರ್ಗ ಕೋಣೆಗಳು ಮಾತ್ರ ಇವೆ. ಅದರಲ್ಲಿಯೂ ಪ್ರಯೋಗಾಲಯ ಮತ್ತು ಗ್ರಂಥಾಲಯಗಳನ್ನು ಮಾಡಲಾಗಿದೆ. ಕಾಯಂ ಪ್ರಾಧ್ಯಾಪಕರು, ಅತಿಥಿ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದರಿಂದ ಅಧ್ಯಾಪಕರ ಕೊರತೆ ಇಲ್ಲ. ಆದರೆ ಸ್ವಂತ ಕಟ್ಟಡ ಇಲ್ಲದೆ ಇರುವುದರಿಂದ ಗುಣಾತ್ಮಕ ಶಿಕ್ಷಣ ನಿರಿಕ್ಷಿಸಲು ಹೇಗೆ ಸಾಧ್ಯ ಎಂಬುದು ವೀರಣ್ಣ ಅಲದಿ ಪ್ರಶ್ನಿಸುತ್ತಾರೆ.

ವಾಣಿಜ್ಯ ಮತ್ತು ವಿಜ್ಞಾನ ಪದವಿ ಕೋರ್ಸ ಆರಂಭಿಸಲು ಹಿಂದೆಟು: ಕನ್ನಡ, ಇಂಗ್ಲೀಷ್ ಐಚ್ಚಿಕ ವಿಷಯಗಳು ಹಾಗೂ ವಾಣಿಜ್ಯ ಮತ್ತು ವಿಜ್ಞಾನ ಪದವಿ ಕೋರ್ಸಗೆ ಉನ್ನತ ಶಿಕ್ಷಣ ಇಲಾಖೆ ವಾರದ ಹಿಂದೆಯಷ್ಟೆ ಅನುಮತಿ ನೀಡಿದೆ. ಆದರೆ ಪ್ರಸ್ತುತ ವರ್ಷ ಕನ್ನಡ ಮತ್ತು ಇಂಗ್ಲಿಷ್ ಐಚ್ಚಿಕ ವಿಷಯವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದ ವಾಣಿಜ್ಯ ಮತ್ತು ವಿಜ್ಞಾನ ವಿಭಾಗವನ್ನು ಕೊಠಡಿಗಳ ಕೊರತೆಯಿಂದ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸರ್ಕಾರ ನಿವೇಶನ ನೀಡಿದೆ. ಕಟ್ಟಡಗಳನ್ನು ಒದಗಿಸಿ ಕೊಡಲು ಸಾರ್ವಜನಿಕರು ಆಗ್ರಹಿಸುತ್ತಾರೆ.

ವಿಜ್ಞಾನ ಮತ್ತು ವಾಣಿಜ್ಯ ಕೋರ್ಸಗಳಿಗೆ ತುಂಬಾ ಬೇಡಿಕೆ ಇರುವುದರಿಂದ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ಹೆಚ್ಚು ಶುಲ್ಕ ಇರುವುದರಿಂದ ಈ ವಿಭಾಗಗಳನ್ನು ಆರಂಭಿಸಲು ವಿದ್ಯಾರ್ಥಿಗಳು ಹಾಗೂ ಸುತ್ತಲಿನ ಹಳ್ಳಿಗಳ ಪೋಷಕರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

‘ಕನ್ನಡ ಹಾಗೂ ಇಂಗ್ಲಿಷ್ ಐಚ್ಚಿಕ ವಿಷಯಗಳು ವಾಣಿಜ್ಯ ಹಾಗೂ ವಿಜ್ಞಾನ ಪದವಿ ವಿಭಾಗವನ್ನು ಸರ್ಕಾರ ನೀಡಿದ್ದು, ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದರೆ ಈ ವರ್ಷವೇ ಆರಂಭಿಸಿ ಮೂಲಸೌಲಭ್ಯವನ್ನು ಒದಗಿಸಬೇಕು’ ಎಂದು ವಿದ್ಯಾರ್ಥಿ ಮಹಾಂತೇಶ ತೂಗುಣಸಿ ಒತ್ತಾಯಿಸಿದ್ದಾರೆ.

ಪಟ್ಟಣದ ಬಹುದಿನದ ಬೇಡಿಕೆಯಾದ ಪದವಿ ಕಾಲೇಜುಗಾಗಿ ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಮನವಿ ಮಾಡಿದ್ದರು. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಇರದಿರುವುದರಿಂದ ಅದನ್ನು ಗುಳೇದಗುಡ್ಡಕ್ಕೆ 2019 ಜೂನ್ ತಿಂಗಳಲ್ಲಿ ನಿಯಮಾನುಸಾರ ಸ್ಥಳಾಂತರಿಸಲಾಯಿತು.

ಹೊಸ ಸಮಿತಿಗೆ ಮನವಿ: ಸರ್ಕಾರ ಬದಲಾದಂತೆ ಕಾಲೇಜಿನ ಅಭಿವೃದ್ಧಿ ಸಮಿತಿಗಳು ಬದಲಾಗುತ್ತದೆ. ಶಾಸಕರ ಅಧ್ಯಕ್ಷತೆಯಲ್ಲಿ ಹೊಸದಾಗಿ ನೇಮಕ ಮಾಡಲು ಶಾಸಕರಾದ ಭೀಮಸೇನ ಚಿಮ್ಮನಕಟ್ಟಿಯವರಿಗೆ ಪ್ರಾಚಾರ್ಯರು ಮನವಿ ಮಾಡಿದ್ದಾರೆ.

ಸೌಲಭ್ಯವುಳ್ಳ ಕಟ್ಟಡದ ಅಗತ್ಯ: ಕನ್ನಡ ಹಾಗೂ ಇಂಗ್ಲಿಷ್ ಐಚ್ಚಿಕ ವಿಷಯಗಳು ವಾಣಿಜ್ಯ ಹಾಗೂ ವಿಜ್ಞಾನ ಪದವಿ ವಿಭಾಗವನ್ನು 2023-24 ನೇ ಸಾಲಿನಿಂದ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಅನುಮತಿಸಿದೆ. ಈ ವರ್ಷ 2023-24ನೇ ಸಾಲಿಗೆ ಐಚ್ಛಿಕ ಕನ್ನಡ ಇಂಗ್ಲಿಷ್ ವಿಷಯ ಆರಂಭಿಸಲಾಗುತ್ತಿದೆ. ವರ್ಗಕೋಣೆ ಕೊರತೆ ಇರುವುದರಿಂದ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳನ್ನು 2024-25 ರಲ್ಲಿ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ಕಾಲೇಜಿನ ಹೆಸರಿಗೆ ನಿವೇಶನ ನೀಡಿದೆ. ಅದಕ್ಕೆ ಕಟ್ಟಡ ಒದಗಿಸಲು ಮನವಿ ಮಾಡಲಾಗಿದೆ. ಕಾಲೇಜು ಮುನ್ನಡೆಸಲು ಉತ್ತಮ ಸೌಲಭ್ಯವಿರುವ ಕಟ್ಟಡ ಸಿಗುತ್ತಿಲ್ಲ -ಫಕೀರಪ್ಪ ಚನ್ನಪ್ಪಗೌಡ್ರ ಪ್ರಾಚಾರ್ಯಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಳೇದಗುಡ್ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT