ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಕವಿ ಬನಹಟ್ಟಿ | ಲೋಕಸಭೆ ಚುನಾವಣೆ: ಮತಗಟ್ಟೆಗೆ ಮೆರುಗು ತಂದ ವರ್ಲಿ ಕಲೆ

ರಾಮಪುರದ ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
Published 5 ಮೇ 2024, 5:04 IST
Last Updated 5 ಮೇ 2024, 5:04 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಪ್ರತಿಯೊಂದು ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳನ್ನು ನಿರ್ಮಾಣ ಮಾಡಿದೆ.

ಈ ಮತಗಟ್ಟೆಗಳನ್ನು ಸುಂದರವಾದ ಚಿತ್ರಕಲೆಯ ಮೂಲಕ ಆಕರ್ಷಕವಾಗಿ ಮಾಡುವಲ್ಲಿ ಆಯಾ ಕ್ಷೇತ್ರದ ಚಿತ್ರಕಲಾ ಪಾತ್ರ ಬಹಳಷ್ಟು ಮಹತ್ವದ್ದಾಗಿದೆ. ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ಬೇರೆ ಬೇರೆ ಶಾಲೆಗಳ ಚಿತ್ರಕಲಾ ಶಿಕ್ಷಕರು ಹತ್ತಾರು ದಿನಗಳ ಕಾಲ ಶ್ರಮ ವಹಿಸಿ ಮತಗಟ್ಟೆಗಳನ್ನು ಅಲಂಕಾರಗೊಳಿಸಿದ್ದಾರೆ.

ತಾಲ್ಲೂಕಿನ ರಾಮಪುರದ ಮತಗಟ್ಟೆ ಸಂಖ್ಯೆ 109 ಅತ್ಯಂತ ವಿಶೇಷವಾಗಿದ್ದು, ಇಲ್ಲಿಯ ಚಿತ್ರಕಲಾ ಶಿಕ್ಷಕರಾದ ಐ.ಬಿ.ತೇರಣಿಯವರು ವರ್ಲಿ ಕಲೆಯ ಮೂಲಕ ಮತಗಟ್ಟೆಗೆ ವಿಶೇಷ ಮೆರುಗನ್ನು ತಂದುಕೊಟ್ಟಿದ್ದಾರೆ. ಕಂದು ಬಣ್ಣದ ಮೇಲೆ ಬಿಳಿ ಬಣ್ಣದಿಂದ ಹತ್ತಾರು ಕಲೆಗಳನ್ನು ಬಿಡಿಸಿದ್ದಾರೆ. ಜೊತೆಗೆ ನೀವು ಮತದಾನ ಮಾಡಿ, ಇತರರನ್ನೂ ಮತದಾನ ಮಾಡುವಂತೆ ಪ್ರೋತ್ಸಾಹಿಸಿ, ಒಂದು ಕ್ಯಾಂಡಲ್ ನಿಮ್ಮ ಒಂದು ರಾತ್ರಿ ಬೆಳಗುತ್ತದೆ, ನಿಮ್ಮ ಮತ ನಿಮ್ಮ ಜೀವನ ಬೆಳಗುತ್ತದೆ, ಚುನಾವಣೆಯ ಪ್ರಜಾಪ್ರಭುತ್ವದ ಹಬ್ಬ ಬನ್ನಿ ಮತದಾನ ಮಾಡಿ ಎಂಬ ಘೋಷಣೆಗಳನ್ನು ಕೂಡಾ ಬರೆಯಲಾಗಿದೆ.

ಮತಗಟ್ಟೆ ಸಂಖ್ಯೆ 111 ನ್ನು ಸಾಂಪ್ರದಾಯಿಕವಾಗಿ ನಿರ್ಮಾಣ ಮಾಡಲಾಗಿದೆ. ರಬಕವಿ ಬನಹಟ್ಟಿಯಲ್ಲಿ ನೇಕಾರಿಕೆಯ ಉದ್ಯೋಗ ಇರುವುದರಿಂದ ಇಲ್ಲಿ ಕೈಮಗ್ಗ ನೇಕಾರರ ಹಾಗೂ ನೇಕಾರಿಕೆಗೆ ಅಗತ್ಯವಾಗಿರುವ ಪೂರಕ ಕೆಲಸಗಳ ಚಿತ್ರಗಳನ್ನು ಬಿಡಿಸಲಾಗಿದೆ. ಪಟ್ಟದಕಲ್ಲು ದೇವಸ್ಥಾನವನ್ನು ಚಿತ್ರವನ್ನು ಬಿಡಿಸಿದ್ದು ಇದು ಅತ್ಯಾಕರ್ಷಕವಾಗಿದೆ.

ಕಂದು, ನೀಲಿ ಮತ್ತು ಬಿಳಿಯ ಬಣ್ಣಗಳಿಂದ ಆಕರ್ಷಕವಾದ ಚಿತ್ರಗಳನ್ನು ಚಿತ್ರಕಲಾ ಶಿಕ್ಷಕರಾದ ಈರಣ್ಣ ತೇರಣಿ, ವಿ.ಬಿ. ಕಡಲಾಸ್ಕರ್, ಎ.ಸಿ.ಬಾಗಲಕೋಟ, ಲಕ್ಷ್ಮಣ ಬಡಿಗೇರ, ರಾಜು ಪಾತ್ರೋಟ, ಮಂಜುಳಾ ಇಳಕಲ್, ಶೋಭಾ ಮಿಳ್ಳಿ, ಪಿ.ಬಿ.ಮನವಾಡ ಮತ್ತು ಪಡಸಲಗಿ ಬಿಡಿಸಿದ್ದಾರೆ. ಇಂಥ ಮತಗಟ್ಟೆಗಳನ್ನು ನಿರ್ಮಾಣ ಮಾಡಿದ ಶಿಕ್ಷಕರು ಅಭಿನಂದನಾರ್ಹರು.

ಮತಗಟ್ಟೆಗಳನ್ನು ಸುಂದರವಾದ ಚಿತ್ರಕಲೆಯ ಮೂಲಕ ಅಲಂಕರಿಸಲಾಗಿದೆ. ಇದು ನಮಗೆ ಹೆಚ್ಚಿನ ಖುಷಿಯನ್ನು ತಂದಿದೆ. ಇದು ಕೂಡಾ ದೇಶ ಸೇವೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡಿದರೆ ನಮ್ಮ ಸೇವೆ ಸಾರ್ಥಕವಾಗುತ್ತದೆ ಎನ್ನುತ್ತಾರೆ ರಬಕವಿಯ ಚಿತ್ರಕಲಾ ಶಿಕ್ಷಕ ಈರಣ್ಣ ತೇರಣಿ.

ರಬಕವಿ ಬನಹಟ್ಟಿ ನಗರ ವ್ಯಾಪ್ತಿಯಲ್ಲಿ ಚಿತ್ರಕಲಾ ಶಿಕ್ಷಕರು ಸುಂದರ ಕಲೆಯ ಮೂಲಕ ಮತಗಟ್ಟೆಗಳನ್ನು ಆಕರ್ಷಕ ಮಾಡಿದ್ದು ಮತದಾರರು ದಿನನಿತ್ಯ ಬಂದು ನೋಡಿ ಹೋಗುತ್ತಿದ್ದಾರೆ.
–ಗಿರೀಶ ಸ್ವಾದಿ, ತಹಶೀಲ್ದಾರ್ ರಬಕವಿ ಬನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT