ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ |ನಗರಸಭೆ ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಯಾರಿಗೆ?

ಬಸವರಾಜ ಹವಾಲ್ದಾರ‌
Published 22 ಆಗಸ್ಟ್ 2024, 4:26 IST
Last Updated 22 ಆಗಸ್ಟ್ 2024, 4:26 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ (ಆ.29) ನಿಗದಿಯಾಗುತ್ತಿದ್ದಂತೆಯೇ ಅಧ್ಯಕ್ಷ, ಉಪಾಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ಸಾಮಾನ್ಯ ಮಹಿಳೆಗೆ ಅಧ್ಯಕ್ಷ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿರಿಸಿರುವುದರಿಂದ ಪೈಪೋಟಿ ಜೋರಾಗಿದೆ. 35 ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ 29 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಐವರು ಕಾಂಗ್ರೆಸ್‌ ಸದಸ್ಯರಿದ್ದಾರೆ. ಪಕ್ಷೇತರರಾಗಿ ಗೆದ್ದಿದ್ದವರೂ ಬಿಜೆಪಿ ಬೆಂಬಲಿಸಿದ್ದಾರೆ. ಇದರಿಂದಾಗಿ ನಗರಸಭೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಹೊಂದಿದೆ.

ಬಿಜೆಪಿಯಲ್ಲಿ 16 ಮಹಿಳಾ ಸದಸ್ಯರಿದ್ದಾರೆ. ಅದರಲ್ಲಿ ಎಂಟು ಸದಸ್ಯರು ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಹಿಂದುಳಿದ ವರ್ಗ ಸೇರಿದಂತೆ ವಿವಿಧ ಮೀಸಲಾತಿ ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದಾರೆ.

ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಕ್ಷೇತ್ರದಿಂದ ಗೆಲುವುದು ಸಾಧಿಸಿರುವ ಏಳು ಸದಸ್ಯರು ಸೇರಿದಂತೆ 30ಕ್ಕೂ ಹೆಚ್ಚು ಜನರು ಆಕಾಂಕ್ಷಿಗಳಾಗಿದ್ದಾರೆ. ತೆರೆಮರೆಯಲ್ಲಿ ಹುದ್ದೆಗೆ ಏರಲು ಕಸರತ್ತು ನಡೆಸಿದ್ದಾರೆ.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಕ್ಷೇತ್ರದಿಂದ ಗೆದ್ದಿರುವ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು ಹೇಳಿದ್ದರಿಂದ ಮೀಸಲು ಕ್ಷೇತ್ರಗಳಿಂದ ಗೆದ್ದವರು ಸ್ಪರ್ಧೆಯ ದಾರಿ ಕಠಿಣವಾಗಿದೆ.

ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಗೆದ್ದಿರುವ ಎಂಟು ಮಂದಿ ಅಧ್ಯಕ್ಷ ಸ್ಥಾನಕ್ಕೆ, ಸಾಮಾನ್ಯ ಕ್ಷೇತ್ರದಿಂದ ಗೆದ್ದಿರುವ ಏಳು ಮಂದಿ ಉಪಾಧ್ಯಕ್ಷ ಸ್ಪರ್ಧೆಯ ಮುಂಚೂಣಿಯಲ್ಲಿದ್ದಾರೆ. 

ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಪಾರ್ವತಿ ಅಕ್ಕಿಮರಡಿ, ಶೋಭಾ ರಾವ್‌, ಶಶಿಕಲಾ ಮಜ್ಜಗಿ, ಸವಿತಾ ಲೆಂಕಣ್ಣವರ, ರೇಖಾ ಕಲಬುರ್ಗಿ, ಶೀವಲೀಲಾ ಪಟ್ಟಣಶೆಟ್ಟಿ, ರತ್ನಾ ಕೆರೂರ, ಭುವನೇಶ್ವರ ಕುಪ್ಪಸ್ತ ಹೆಸರು ಕೇಳಿ ಬರುತ್ತಿವೆ.

ಉಪಾಧ್ಯಕ್ಷ ಸ್ಥಾನಕ್ಕೆ ಚನ್ನವೀರಯ್ಯ ಹಿರೇಮಠ, ಶಿವಬಸವ ಬಳ್ಳಾರಿ, ರಮೇಶ ಕೋಟಿ ಹೆಸರುಗಳು ಕೇಳಿ ಬರುತ್ತಿವೆ. ಆಕಾಂಕ್ಷಿಗಳ ಸಂಖ್ಯೆ ಎಷ್ಟೇ ಇದ್ದರೂ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ತೀರ್ಮಾನ ಅಂತಿಮವಾಗಿರುತ್ತದೆ ಎನ್ನಲಾಗುತ್ತಿದೆ. ಶೀಘ್ರದಲ್ಲಿಯೇ ಸದಸ್ಯರ ಸಭೆ ನಡೆಯುವ ನಿರೀಕ್ಷೆ ಇದೆ.

29ಕ್ಕೆ ಚುನಾವಣೆ
ಬಾಗಲಕೋಟೆ: ಒಂದೂ ವರ್ಷದ ನಂತರ ಬಾಗಲಕೋಟೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆ.29ಕ್ಕೆ ಚುನಾವಣೆ ನಿಗದಿಯಾಗಿದೆ. ಬೆಳಿಗ್ಗೆ 10ಕ್ಕೆ ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು ನಾಮಪತ್ರ ವಾಸಪ್‌ ಪಡೆಯುವ ನಂತರ ಮಧ್ಯಾಹ್ನ 1ಕ್ಕೆ ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT