ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಮುಂಗಾರು ಬಿತ್ತನೆಗೆ ಸಜ್ಜಾದ ರೈತ

Published 27 ಮೇ 2024, 5:32 IST
Last Updated 27 ಮೇ 2024, 5:32 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕೆಲವೆಡೆ ಬಿತ್ತನೆ ಶುರುವಾಗಿದ್ದರೆ, ಇನ್ನೂ ಕೆಲವೆಡೆ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ.

ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ .54 ಸೆ.ಮೀ. ಮಳೆಯಾಗಬೇಕಿತ್ತು. 8.3 ಸೆ.ಮೀ. ನಷ್ಟು ಮಳೆಯಾಗಿದೆ. ಮೇ ತಿಂಗಳಿನಲ್ಲಿ 2.9 ಸೆ.ಮೀ. ಆಗಬೇಕಿತ್ತು. 6.2 ಸೆ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.82,992 ಹೆಕ್ಟೇರ್ ಗುರಿ ಹೊಂದಲಾಗಿದೆ. ಈ ಪೈಕಿ ಈಗಾಗಲೇ 1.25 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ. ನೀರಾವರಿ ಆಶ್ರಿತವಾಗಿರುವುದರಿಂದ ಕಬ್ಬನ್ನು ಮಳೆಗೆ ಕಾಯದೇ ಕಬ್ಬು ನಾಟಿ ಮಾಡಲಾಗುತ್ತದೆ.

ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಸಜ್ಜೆ, ಹೆಸರು, ತೊಗರಿ ಮುಂತಾದ ಬೆಳೆಗಳ ಬಿತ್ತನೆಗೆ ರೈತರು ಈಗಾಗಲೇ ಮಳೆಯಾಗಿರುವುದರಿಂದ ಭೂಮಿಯನ್ನು ಹದಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿತ್ತನೆ ಬೀಜ ವಿತರಣೆ ಕೇಂದ್ರಗಳ ಮುಂದೆ ಈಗಾಗಲೇ ಬೀಜ, ರಸಗೊಬ್ಬರ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಜೂನ್‌ನಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಬಿತ್ತನೆ ಆರಂಭಿಸುತ್ತಾರೆ.

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ₹1,997 ಕೋಟಿ ಮೊತ್ತದ ಬೆಲೆಯೂ ಹಾಳಾಗಿತ್ತು. ಈಗಾಗಲೇ ಬಹುತೇಕರಿಗೆ ಬರ ಪರಿಹಾರ ಜಮಾ ಆಗಿದ್ದರೆ, ಇನ್ನೂ ಕೆಲವರು ಬರ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಐದು ವರ್ಷಗಳಲ್ಲಿ ಜಿಲ್ಲೆಯನ್ನು ಪ್ರವಾಹ ಅಥವಾ ಬರ ಕಾಡಿಕೊಂಡೇ ಬಂದಿದೆ. 2019 ಹೊರತು ಪಡಿಸಿದರೆ ಉಳಿದ ವರ್ಷಗಳಲ್ಲಿ ಪ್ರವಾಹವೂ ಕೆಲವು ಪ್ರದೇಶಗಳಿಗೆ ಸೀಮಿತವಾಗಿತ್ತು. 2019ರಲ್ಲಿ ಜಿಲ್ಲೆ ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಕಳೆದ ವರ್ಷ ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ಬರ ಪೀಡಿತವಾಗಿದ್ದವು. 

ಮುಂಗಾರಿನಲ್ಲಿ 1,200 ಹೆಕ್ಟೇರ್ ಜೋಳ, 53,900 ಹೆಕ್ಟೇರ್ ಗೋವಿನಜೋಳ, 22,925 ಹೆಕ್ಟೇರ್ ಸಜ್ಜೆ, 37,850 ಹೆಕ್ಟೇರ್ ತೊಗರಿ, 26 ಸಾವಿರ ಹೆಕ್ಟೇರ್ ಹೆಸರು, 15,780 ಹೆಕ್ಟೇರ್ ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು  ಬೆಳೆಯುವ ಗುರಿ ಹಾಕಿಕೊಳ್ಳಲಾಗಿದೆ.

ಬಿತ್ತನೆ ಬೀಜ: ತೊಗರಿ, ಉದ್ದು, ಹೆಸರು, ಸೋಯಾ ಅವರೆ, ಜೋಳ ಸೇರಿದಂತೆ 24,658 ಕ್ವಿಂಟಲ್ ಬೀಜಗಳ ಬೇಕಾಗಿದ್ದು, 18 ಸಾವಿರ ಕ್ವಿಂಟಲ್‌ ಈಗಾಗಲೇ ದಾಸ್ತಾನು ಇದೆ. ಬೇಡಿಕೆಗೆ ಅನುಗುಣವಾಗಿ ಬೀಜ ಬರಲಿದೆ.

ಜಿಲ್ಲೆಯಲ್ಲಿ 18 ರೈತ ಸಂಪರ್ಕ ಕೇಂದ್ರಗಳು, ಬೀಜ ಕೃಷಿ ಪರಿಕರ ಮಳಿಗೆ 303, ಕೀಟನಾಶಕ ಕೃಷಿ ಪರಿಕರ ಮಳಿಗೆ 536, ರಸಗೊಬ್ಬರ ಮಳಿಗೆ (ರಿಟೇಲರ್) 495, ಸಗಟು 76 ಮಳಿಗೆಗಳಿರುತ್ತವೆ. ಚಿಕ್ಕಲಕಿ ಕ್ರಾಸ್, ಗೋಠೆ, ಜಮಖಂಡಿ ಹಾಗೂ ಮುಧೋಳದಲ್ಲಿ ತಲಾ ಒಂದರಂತೆ ಹೆಚ್ಚುವರಿ ನಾಲ್ಕು ಬಿತ್ತನೆ ಬೀಜ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ತೆಗ್ಗಿ ಗ್ರಾಮದ ಬಳಿ ಹೆಸರು ಬಿತ್ತನೆಯಲ್ಲಿ ತೊಡಗಿರುವುದು
ಬಾಗಲಕೋಟೆ ಜಿಲ್ಲೆಯ ತೆಗ್ಗಿ ಗ್ರಾಮದ ಬಳಿ ಹೆಸರು ಬಿತ್ತನೆಯಲ್ಲಿ ತೊಡಗಿರುವುದು
ಹೊಲದ ಬದುವಿನಲ್ಲಿ ಉದ್ಯೋಗ ಖಾತ್ರಿಯಡಿ ನಿರ್ಮಿಸಿದ್ದ ತೆಗ್ಗುಗಳಲ್ಲಿ ಮಳೆಯಿಂದ ಸಂಗ್ರಹವಾಗಿರುವ ನೀರು
ಹೊಲದ ಬದುವಿನಲ್ಲಿ ಉದ್ಯೋಗ ಖಾತ್ರಿಯಡಿ ನಿರ್ಮಿಸಿದ್ದ ತೆಗ್ಗುಗಳಲ್ಲಿ ಮಳೆಯಿಂದ ಸಂಗ್ರಹವಾಗಿರುವ ನೀರು
ಹುನಗುಂದ ತಾಲ್ಲೂಕಿನ ಹೊಲವೊಂದರಲ್ಲಿ ಬಿತ್ತನೆಗೆ ಭೂಮಿ ಹದಗೊಳಿಸಿದರು
ಹುನಗುಂದ ತಾಲ್ಲೂಕಿನ ಹೊಲವೊಂದರಲ್ಲಿ ಬಿತ್ತನೆಗೆ ಭೂಮಿ ಹದಗೊಳಿಸಿದರು
ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮಾಡಿ ಸರಿಯಾಗಿ ಬೀಜೋಪಚಾರ ಮಾಡಬೇಕು. ಯುರಿಯಾ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸದೆ ಸಮತೋಲನದ ರಸಗೊಬ್ಬರ ಬಳಸಬೇಕು. ಪೊಟ್ಯಾಷ್ ಬಳಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ ಇಳುವರಿ ಹೆಚ್ಚಾಗುತ್ತದೆ.
ಲಕ್ಷ್ಮಣ ಕಳ್ಳೇನ್ನವರ ಜಂಟಿ ನಿರ್ದೇಶಕ ಕೃಷಿ ಇಲಾಖೆ

ರಸಗೊಬ್ಬರ ಲಭ್ಯ

ಜಿಲ್ಲೆಗೆ 40 ಸಾವಿರ ಮೆಟ್ರಿಕ್‌ ಟನ್‌ನಷ್ಟು ಗೊಬ್ಬರ ಬೇಕಿದೆ. ಕಳೆದ ವರ್ಷ ತರಿಸಿದ ರಸಗೊಬ್ಬರ ಬಳಕೆಯಾಗದ್ದರಿಂದ 71 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಲಭ್ಯವಿದೆ. ಯೂರಿಯಾ 34795 ಮೆ.ಟನ್ ಡಿಎಪಿ 6302 ಮೆ.ಟನ್ ಕಾಂಪ್ಲೆಕ್ಸ್ 19388 ಮೆ.ಟನ್ ಎಂ.ಒ.ಪಿ 2546 ಹಾಗೂ ಎಸ್.ಎಸ್.ಪಿ 1641 ಮೆ. ಟನ್ ರಸಗೊಬ್ಬರ ಸಂಗ್ರಹವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT