ಬಾಗಲಕೋಟೆ: ‘ನಮ್ಮ ಊರು ನಮ್ಮ ಪೊಲೀಸ್, ನಮ್ಮ ಬೀಟ್ ಮೊಬೈಲ್ ನಂಬರ್’ ಯೋಜನೆ ಮೂಲಕ ಪೊಲೀಸ್ ಇಲಾಖೆಯು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಅಪರಾಧ ಪ್ರಕರಣಗಳ ಬಗ್ಗೆ ಕೂಡಲೇ ಮಾಹಿತಿ ಪಡೆಯಲು ಹಾಗೂ ಅವುಗಳಿಂದಾಗುವ ಅನಾಹುತಗಳನ್ನು ಪ್ರಾರಂಭಿಕ ಹಂತದಲ್ಲಿ ತಡೆಯಲು ಯೋಜಿಸಿದೆ.
ಜಿಲ್ಲೆಯಲ್ಲಿ 627 ಗ್ರಾಮಗಳಿದ್ದು, ಅವುಗಳಲ್ಲಿ 313 ಪೊಲೀಸ್ ಬೀಟ್‍ಗಳನ್ನು ಮಾಡಲಾಗಿದೆ. 795 ವಾಟ್ಸ್ ಆ್ಯಪ್ ಗ್ರೂಪ್‍ಗಳನ್ನು ರಚಿಸಲಾಗಿದೆ. ಈ ಗ್ರೂಪ್‍ಗಳಲ್ಲಿ 13,515 ಸಾರ್ವಜನಿಕರನ್ನು ಸೇರ್ಪಡೆ ಮಾಡಲಾಗುತ್ತದೆ. ಆ ಮೂಲಕ ಜನರೊಂದಿಗೆ ಬೆಸುಗೆಯನ್ನು ಬಿಗಿಗೊಳಿಸುವ ಕೆಲಸಕ್ಕೆ ಮುಂದಾಗಿದೆ.
ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ಈ ಯೋಜನೆಯ ಕುರಿತು ಪೋಸ್ಟರ್‌ಗಳನ್ನು ಹಚ್ಚಲಾಗಿದೆ. ಅದರಲ್ಲಿ ಮೊಬೈಲ್ ನಂಬರ್‌ಗಳನ್ನು ನೀಡಲಾಗಿದೆ. ಊರಿನಲ್ಲಿ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ವಿವರವನ್ನು ಗೋಪ್ಯವಾಗಿ ಇಡಲಾಗುತ್ತದೆ.
ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿರಬಹುದಾದ ಅಹಿತಕರ ಘಟನೆಯು ಮುಂದೊಂದು ದಿನ ದೊಡ್ಡದಾಗಬಹುದು. ಇದರ ಬಗ್ಗೆ ಪೊಲೀಸರಿಗೆ ಸಂದೇಶ, ವಿಡಿಯೊ ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಿದರೆ, ಕೂಡಲೇ ಇಲಾಖೆ ಸ್ಪಂದಿಸುತ್ತದೆ.
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಯೂ ಗ್ರಾಮಕ್ಕೆ ನಿಗದಿ ಪಡಿಸಿದ ನಂಬರ್‌ಗಳ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿದೆ. ಅದರಲ್ಲಿ ಗ್ರಾಮದ ಕೆಲವರನ್ನು ಸೇರ್ಪಡೆ ಮಾಡಲಾಗಿದೆ. ಅವರು ಸಹ ಮಾಹಿತಿ ನೀಡಬಹುದು.
ವ್ಯಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಸಂದೇಶ, ವಿಡಿಯೊಗಳ ವೀಕ್ಷಣೆಗೆ ಸೋಷಿಯಲ್ ಮಿಡಿಯಾ ಮಾನಿಟರಿಂಗ್ ತಂಡ ರಚಿಸಲಾಗಿದೆ. ಅವರು ಸದಾ ನಿಗಾ ಇಟ್ಟಿರುತ್ತಾರೆ. ಸಂದೇಶ ಬರುತ್ತಿದ್ದಂತೆಯೇ ಅದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಲಾಗುತ್ತದೆ. ಅಲ್ಲಿನ ಸಿಬ್ಬಂದಿ ಕೂಡಲೇ ಗ್ರಾಮಕ್ಕೆ ತೆರಳಿ, ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಾರೆ.
‘ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಘಟನೆಗಳು ನಡೆದಾಗ ಅದನ್ನು ಅಲ್ಲಿಯೇ ಶಮನಗೊಳಿಸಲು ಯತ್ನಿಸಲಾಗುತ್ತದೆ. ಅದು ಮುಂದೆ ದೊಡ್ಡದಾದಾಗ ಅನಾಹುತ ಆಗಬಹುದು. ಗಮನಕ್ಕೆ ತಂದರೆ, ಕೂಡಲೇ ಪೊಲೀಸರು ಸ್ಪಂದಿಸಿ, ಸಮಸ್ಯೆ ಪರಿಹರಿಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.
ಜನರು ಹಾಗೂ ಪೊಲೀಸರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಹಾಗೂ ಅಪರಾಥ ಪ್ರಕರಣಗಳಿಗೆ ಕಡಿವಾಣ ಹಾಕಲು ಯೋಜನೆ ಜಾರಿಗೆ ತರಲಾಗಿದೆಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.