ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ರೈತರಿಂದ ಬ್ಯಾರಲ್ ಸೇತುವೆ ನಿರ್ಮಾಣ

ಮೂರು ದಶಕಗಳ ಕನಸು ನನಸು ಮಾಡಿಕೊಂಡ ರೈತರು
Published 28 ಸೆಪ್ಟೆಂಬರ್ 2023, 23:28 IST
Last Updated 28 ಸೆಪ್ಟೆಂಬರ್ 2023, 23:28 IST
ಅಕ್ಷರ ಗಾತ್ರ

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಕೃಷ್ಣಾ ನದಿ ದಾಟಿ ಬರಲು ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಬೇಡಿದರೂ ಸರ್ಕಾರದಿಂದ ಸ್ಪಂದನೆ ಸಿಗದ ಕಾರಣ ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದ ರೈತರೇ ವಂತಿಗೆ ಸಂಗ್ರಹಿಸಿ ಸುಮಾರು ₹25 ಲಕ್ಷ ವೆಚ್ಚದಲ್ಲಿ ಬ್ಯಾರಲ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಆಲಮಟ್ಟಿಯಲ್ಲಿ ನಮ್ಮ ಮನೆ ಮುಳುಗಿದ್ದು, ನಮ್ಮ ಜಮೀನು ಕಂಕಣವಾಡಿ ನಡುಗಡ್ಡೆಯಲ್ಲಿದೆ. ನದಿಯನ್ನು ಮೊದಲು ಈಜಿ ದಾಟುತ್ತಿದ್ದ ರೈತರು ಈಗ ದೋಣಿಯಲ್ಲಿ ಸಾಗುತ್ತಾರೆ. ಎಂಜಿನಿಯರ್‌ಗಳ ನೆರವಿಲ್ಲದೇ ಶ್ರಮದಾನದ ಮೂಲಕ ಬ್ಯಾರಲ್ ಸೇತುವೆ ನಿರ್ಮಾಣ ಕಾರ್ಯ ನಡೆದಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ಎರಡೂ ಕಡೆ 20 ಅಡಿ ಎತ್ತರದ ಮಣ್ಣಿನ ಬದು ಮಾಡಿಕೊಂಡಿದ್ದು, ಅಲ್ಲಿಂದ 600 ಅಡಿ ಉದ್ದ ಮತ್ತು 8 ಅಡಿ ಅಗಲ ಬ್ಯಾರಲ್ ಸೇತುವೆ ನಿರ್ಮಾಣ ನಡೆಯುತ್ತಿದೆ. ಸೇತುವೆ ಪೂರ್ಣವಾದಲ್ಲಿ, 600 ಅಡಿ ಅಗಲದ ನದಿಯನ್ನು 5 ನಿಮಿಷದಲ್ಲಿ ದಾಟಬಹುದು.

‘20 ಅಡಿಯಂತೆ ಒಟ್ಟು 30 ಕಬ್ಬಿಣದ ಆಂಗಲ್‌ಗಳನ್ನು ನಟ್ ಬೋಲ್ಟ್ ಮೂಲಕ ಜೋಡಿಸಿದ್ದೇವೆ. ಎರಡು ಸಾಲಿನಂತೆ ಒಟ್ಟು 300 ಬ್ಯಾರಲ್‌ಗಳನ್ನು ಜೋಡಿಸಿ, ಅದರ ಮೇಲೆ ಹಾದು ಹೋಗಲು ಎರಡೂ ಬದಿಗೆ ಕಟ್ಟಿಗೆಯ ಪಳಿಗಳನ್ನು ಹಾಕಿ ನಡುವೆ ಕಬ್ಬಿಣದ ಪಟ್ಟಿ ಹಾಕಿದ್ದೇವೆ. ಎರಡೂ ಬದಿಗೆ ಕಟಾಂಜಲಿ ನಿರ್ಮಿಸಿ ಒಟ್ಟು 13 ಟನ್ ಕಬ್ಬಿಣದಲ್ಲಿ ತಯಾರಾಗುತ್ತಿದೆ. ಗಾಳಿಗೆ ಹಾಗೂ ನೀರಿನ ರಭಸಕ್ಕೆ ಹರಿದು ಹೋಗದಂತೆ ದಪ್ಪ ಹಗ್ಗವನ್ನು ಹಾಕಿ ಎರಡು ಬದಿಗೆ ಕಟ್ಟಿದ್ದೇವೆ. ಸೇತುವೆ ಅಲ್ಲಾಡದಂತೆ ದಪ್ಪ ಕಲ್ಲುಗಳನ್ನು ನದಿಯಲ್ಲಿ ಬಿಡಲು ಸಿದ್ಧತೆ ನಡೆಸಿದ್ದೇವೆ’ ಎಂದು ರೈತರು ತಿಳಿಸಿದರು.

‘ಮಳೆಗಾಲ ಅಥವಾ ನದಿಯಲ್ಲಿ ಒಳಹರಿವು ಹೆಚ್ಚಳವಾದಾಗ ಸೇತುವೆ ಬಿಚ್ಚಿಡಬಹುದು. ಉಳಿದ ಅವಧಿಯಲ್ಲಿ ಬೈಕ್ ಮೇಲೆ 3 ರಿಂದ 4 ಕ್ವಿಂಟಲ್‌ಗಳವರೆಗೆ ಭಾರ ಒಯ್ಯಬಹುದು’ ಎಂದು ರೈತ ರಾಮಪ್ಪ ಜಗದಾಳ ತಿಳಿಸಿದರು.

‘ನಡುಗಡ್ಡೆಯಲ್ಲಿ 600 ಎಕರೆ ಫಲವತ್ತಾದ ಜಮೀನಿನಲ್ಲಿ ಕಬ್ಬು, ಬಾಳೆ, ಗೋವಿನ ಜೋಳ ಬೆಳೆಯುತ್ತೇವೆ. ಕಾಳು ಕಡಿಗಳನ್ನು ತರಲು ಬೋಟ್ ಒಂದೇ ಆಸರೆ. ಹಾವು ಕಡಿಸಿಕೊಂಡ ಸಂದರ್ಭದಲ್ಲಿ ನಾಲ್ವರು ಸಕಾಲಕ್ಕೆ ನದಿದಾಟಲು ಸಾಧ್ಯವಾಗದೇ ಮತ್ತು ಚಿಕಿತ್ಸೆ ಪಡೆಯಲಾಗದೇ ಮೃತಪಟ್ಟಿದ್ದಾರೆ’ ಎಂದು ರೈತ ಈಶ್ವರ ಕರಬಸಪ್ಪನವರ ಹೇಳಿದರು.

‘200 ಕುಟುಂಬ ಮತ್ತು 250ಕ್ಕೂ ಅಧಿಕ ಜಾನುವಾರುಗಳಿವೆ. ನಿತ್ಯ 1,500 ಲೀಟರ್ ಹಾಲು ಹೊತ್ತು ನದಿ ದಾಟಬೇಕು.. 40ಕ್ಕೂ ಹೆಚ್ಚು ಮಕ್ಕಳಿದ್ದು, ದೋಣಿ ಬಾರದಿದ್ದರೆ ಅವರು ಶಾಲೆಗೆ ಹೋಗಲು ಆಗುವುದಿಲ್ಲ’ ಎಂದು ರೈತ ಮಲ್ಲಪ್ಪ ಸಿದ್ದನ್ನವರ ತಿಳಿಸಿದರು.

ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಿಂದ ನಡುಗಡ್ಡೆಗೆ ಕೃಷ್ಣಾ ನದಿ ದಾಟಲು ನಿರ್ಮಾಣ ಹಂತದಲ್ಲಿರುವ ಬ್ಯಾರಲ್ ಸೇತುವೆ
ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಿಂದ ನಡುಗಡ್ಡೆಗೆ ಕೃಷ್ಣಾ ನದಿ ದಾಟಲು ನಿರ್ಮಾಣ ಹಂತದಲ್ಲಿರುವ ಬ್ಯಾರಲ್ ಸೇತುವೆ
ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಿಂದ ನಡುಗಡ್ಡೆಗೆ ಕೃಷ್ಣಾ ನದಿ ದಾಟಲು ನಿರ್ಮಾಣ ಹಂತದಲ್ಲಿರುವ ಬ್ಯಾರಲ್ ಸೇತುವೆ
ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಿಂದ ನಡುಗಡ್ಡೆಗೆ ಕೃಷ್ಣಾ ನದಿ ದಾಟಲು ನಿರ್ಮಾಣ ಹಂತದಲ್ಲಿರುವ ಬ್ಯಾರಲ್ ಸೇತುವೆ
ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಿಂದ ನಡುಗಡ್ಡೆಗೆ ಕೃಷ್ಣಾ ನದಿ ದಾಟಲು ನಿರ್ಮಾಣ ಹಂತದಲ್ಲಿರುವ ಬ್ಯಾರಲ್ ಸೇತುವೆ
ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗ್ರಾಮದಿಂದ ನಡುಗಡ್ಡೆಗೆ ಕೃಷ್ಣಾ ನದಿ ದಾಟಲು ನಿರ್ಮಾಣ ಹಂತದಲ್ಲಿರುವ ಬ್ಯಾರಲ್ ಸೇತುವೆ

ಸೇತುವೆ ನಿರ್ಮಾಣಕ್ಕೆ ರೈತರಿಂದ ಪ್ರತಿ ಎಕರೆಗೆ ₹ 1 ಸಾವಿರ ಹಣ ಸಂಗ್ರಹಿಸಲಾಗಿದೆ. ಹೆಚ್ಚು ಜಮೀನುವುಳ್ಳವರು ಸ್ವಲ್ಪ ಹೆಚ್ಚು ಹಣ ನೀಡಿದ್ದಾರೆ. ಒಟ್ಟು ₹25 ಲಕ್ಷ ಅಂದಾಜು ವೆಚ್ಚವಾಗುತ್ತದೆ

-ನಿಜಪ್ಪ ಆದೇಪ್ಪನವರ ರೈತ

10 ವರ್ಷಗಳಿಂದ ಸ್ಥಳೀಯ ಜನಪ್ರತಿನಿಧಿಗಳಿಂದ ಮುಖ್ಯಮಂತ್ರಿಯವರೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅನುದಾನವೂ ನೀಡಿಲ್ಲ. ಅದಕ್ಕೆ ಸೇತುವೆ ನಿರ್ಮಿಸುತ್ತಿದ್ದೇವೆ

-ರಾಮಪ್ಪ ಜಗದಾಳ ರೈತ

ರೈತರಿಂದ ನಿರ್ಮಾಣ ಕಳೆದ ವರ್ಷ ಕಂಕಣವಾಡಿ ಗ್ರಾಮಸ್ಥರು ನಡುಗಡ್ಡೆಯಿಂದ ಎರಡು ದೋಣಿಗಳಿಗೆ ಕಬ್ಬಿಣದ ರಾಡ್‌ಗಳನ್ನು ಜೋಡಿಸಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ ಅನ್ನು ಸಾಗಿಸಿದ್ದರು. ಅದು ಸಫಲವಾಗಿದ್ದರಿಂದ ಈ ಸೇತುವೆ ಮಾಡಲು ಮುಂದಾಗಿದ್ದಾರೆ. ತಾಲ್ಲೂಕಿನ ಚಿಕ್ಕಪಡಸಲಗಿ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ರೈತರು ಶ್ರಮದಾನದ ಮೂಲಕ ವಂತಿಗೆ ಸಂಗ್ರಹಿಸಿ ಏಷ್ಯಾ ಖಂಡದಲ್ಲಿಯೇ ಪ್ರಥಮ ಬ್ಯಾರೇಜ್‌ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT