ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ನೋಡಿಕೊಂಡು ಪರೀಕ್ಷೆ ಸಲ್ಲ

‘ದೇಶಮುಖಿಯಾಗೋಣ’ ಚರ್ಚೆಯಲ್ಲಿ ಹಿರೇಮಗಳೂರು ಕಣ್ಣನ್ ಅಭಿಮತ
Last Updated 28 ಜುಲೈ 2018, 13:17 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಪುಸಕ್ತ ಮುಂದಿಟ್ಟುಕೊಂಡು ಪರೀಕ್ಷೆ ಬರೆಯಿರಿ ಎಂದು ಶಿಕ್ಷಣ ಸಚಿವರೇ ಹೇಳುವಾಗ ದೇಶ ಅಭಿವೃದ್ಧಿಯ ಪಥದತ್ತ ಸಾಗಲು ಹೇಗೆ ಸಾಧ್ಯ’ ಎಂದು ಸಂಸ್ಕೃತಿ ಚಿಂತಕ ಹಿರೇಮಗಳೂರು ಕಣ್ಣನ್ ಪ್ರಶ್ನಿಸಿದರು.

ನಗರದಲ್ಲಿ ಬಿ.ವಿ.ವಿ ಸಂಘದ ವತಿಯಿಂದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ‘ದೇಶಮುಖಿಯಾಗೋಣ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ‘ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಯನ್ನಾಗಿಸಿದರೆ ದೇಶ ಮುನ್ನಡೆಸಲು ಅವರು ಸಶಕ್ತರಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಕರು ವಿದ್ಯಾರ್ಥಿಗಳ ರಕ್ಷಕ ಆಗಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು ಭಿಕ್ಷುಕರಾಗಬೇಕಾಗುತ್ತದೆ. ಇಂದಿನ ಯುವಕರಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕ ಹಾಗೂ ಪೋಷಕರ ಮೇಲಿದೆ. ಇಂದಿನ ಪೋಷಕರು ತಮ್ಮನ್ನು ಮಾದರಿಯಾಗಿಟ್ಟುಕೊಳ್ಳಿ ಎಂದು ಮಕ್ಕಳಿಗೆ ಹೇಳುವ ಸ್ಥಿತಿಯಲ್ಲಿ ಇಲ್ಲದಿರುವುದು ಬೇಸರದ ಸಂಗತಿ’ ಎಂದರು.

‘ಸ್ವಾಮಿ ವಿವೇಕಾನಂದ ಚಿಕಾಗೋದಲ್ಲಿ ಸಹೋದರ, ಸಹೋದರಿ ಎಂಬ ಪದವನ್ನು ಉಚ್ಛರಿಸಿದ್ದಕ್ಕೆ ನೆರೆದಿದ್ದವರು ಮೂರು ನಿಮಿಷ ಚಪ್ಪಾಳೆ ತಟ್ಟಿದ್ದರು. ಅಂದು ಅವರ ಭಾಷಣದ ಬಗ್ಗೆ ವಿಶ್ವವೇ ಮಾತನಾಡಿತು’ ಎಂದರು.

‘ರೈತ ಹಾಗೂ ಸೈನಿಕರು ದೇಶದ ಬೆನ್ನೆಲುಬು. ಒಬ್ಬ ದೇಶ ರಕ್ಷಿಸಿದರೇ ಮತ್ತೋಬ್ಬ ದೇಶಕ್ಕೆ ಅನ್ನ ನೀಡುತ್ತಾನೆ. ಈ ಇಬ್ಬರು ಯಾವುದೇ ಅಪೇಕ್ಷೆ ಇಲ್ಲದೆ, ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಕಾರಣ ದೇಶ ನೆಮ್ಮದಿಯಾಗಿದೆ’ ಎಂದರು.

‘ಭಾರತ ಎಂದರೆ ಕೇವಲ ಭೂಮಿಯ ತುಂಡಲ್ಲ. ಶಕ್ತಿ, ಶಾಂತಿ, ಭಕ್ತಿಗಳ ಸಮ್ಮಿಲನವಾಗಿದೆ. ದೇಶದ ಅನೇಕ ಮಹಾತ್ಮರು, ಯೋಗಿಗಳು, ಸಂತರು ಜಗತ್ತಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ. ಅವರು ಸಾಧನೆ ಮಾಡಲು ಪ್ರೋತ್ಸಾಹಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ’ ಎಂದರು.

ಚಿಕ್ಕಮಗಳೂರಿನ ರೇಖಾ ಪ್ರೇಮಕುಮಾರ ಮಾತನಾಡಿ, ‘ಬೆಳಕಿನ ಪ್ರಜ್ಞೆಯನ್ನು ಇಟ್ಟುಕೊಂಡರೆ, ದೇಶಕ್ಕೆ ಅಂಟಿರುವ ಕತ್ತಲನ್ನು ತೊಲಗಿಸಬಹುದು. ವಿದ್ಯಾರ್ಥಿಗಳು ದೇಶದ ಒಳಿತಾಗಿ ದುಡಿದವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ಮಾಜಿ ರಾಷ್ಟ್ರಪತಿ ಅ.ಪಿ.ಜೆ ಅಬ್ದುಲ್ ಕಲಾಂ ಅವರ ವಿಷನ್ 20–20 ಕನಸನ್ನು ನನಸಾಗಿಸಲು ಪ್ರತಿಯೊಬ್ಬ ಯುವಕ ಶ್ರಮಿಸಬೇಕು’ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಚರಂತಿಮಠದ ಪ್ರಭುಸ್ವಾಮೀಜಿ ವಹಿಸಿದ್ದರು. ಶಾಸಕ ವೀರಣ್ಣ ಚರಂತಿಮಠ, ಚಿಕ್ಕಮಗಳೂರಿನ ಎನ್.ಎಂ.ರಮೇಶ, ಸಾಹಿತಿ ಬೆಳವಾಡಿ ಮಂಜುನಾಥ, ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಪಾಲ್ಗೊಂಡಿದ್ದರು.

35 ಅಂಕ ಪಡೆದರೆ ತಪ್ಪೇನು?

ಚೆನ್ನಾಗಿ ಓದಿ ಉತ್ತಮ ಅಂಕ ಪಡೆಯಿರಿ ಎಂದು ಪೋಷಕರು ಮಕ್ಕಳಿಗೆ ಹೇಳಿದರೆ, 37 ಶಾಸಕರ ಬಲ ಇದ್ದವರೇ ಮುಖ್ಯಮಂತ್ರಿಯಾಗುತ್ತಾರೆ. ನಾವು 35 ಅಂಕ ಪಡೆದರೆ ತಪ್ಪೇನಿದೆ ಎಂದು ಪ್ರಶ್ನಿಸುತ್ತಿದ್ದಾರೆ.

ಕಣ್ಣು ಮಿಟಿಕಿಸುವುದು, ಅಪ್ಪುಗೆಯಿಂದ ದೇಶ ಮುಂದೆ ಬರುವುದಿಲ್ಲ. ದೇಶ ತನ್ನನ್ನು ತಾನೂ ಗುರುತಿಸಿಕೊಳ್ಳುತ್ತದೆ ಎಂಬ ವಿಷಯದ ಮೇಲೆ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಕಾಯಕವೇ ಕೈಲಾಸ ಎಂಬ ಮಾತು ಇದೀಗ ಕೈ ಸೋತು ದಳಕ್ಕೆ ಕಾಯಕ ನೀಡಿದೆ ಎಂದು ರಾಜಕೀಯ ಹಾಗೂ ವಚನದ ಸಮ್ಮಿಲನದೊಂದಿಗೆ ಸ್ವಾರಸ್ಯಕರವಾಗಿ ಕಣ್ಣನ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT