ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಕವಿ ಬನಹಟ್ಟಿ: ಅಧಿಕ ಆದಾಯ ತಂದ ಬದನೆ

Published 7 ಜುಲೈ 2023, 4:59 IST
Last Updated 7 ಜುಲೈ 2023, 4:59 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಯೋಜನೆ, ಶಿಸ್ತು ಬದ್ಧ, ಮಾರುಕಟ್ಟೆಯ ಅಧ್ಯಯನ ಮತ್ತು ಒಂದೇ ಬೆಳೆಗೆ ಅಂಟಿಕೊಳ್ಳದೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸುತ್ತಮುತ್ತಲಿನ ರೈತರಿಗೂ ಮಾರ್ಗದರ್ಶನ ನೀಡುತ್ತ ಕೃಷಿ ಮಾಡುತ್ತಿರುವವರು ಬನಹಟ್ಟಿಯ ಪ್ರಗತಿಪರ ರೈತ ದೇವರಾಜ ರಾಠಿ.

ಸದ್ಯ ಅವರು ತಮ್ಮ ಜಗದಾಳದ ತೋಟದಲ್ಲಿ ನಾಲ್ಕೂವರೆ ಎಕರೆ ಭೂ ಪ್ರದೇಶದಲ್ಲಿ ಜವಾರಿ ಮತ್ತು ಸೂಪರ್ 10 ಬದನೆ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ.

ಈ ಹಿಂದೆ ಗ್ಯಾಲನ್ ತಳಿ ಬದನೆ, ಗುಲಾಬಿ ಹೂ, ಪಪ್ಪಾಯಿ ಬೆಳೆಗಳನ್ನು ಬೆಳೆದು, ಇದೀಗ ಬದನೆಯಿಂದಲೂ ಸಾಕಷ್ಟು ಲಾಭ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ಧಾರೆ.

‘ನಾಲ್ಕೂವರೆ ಎಕರೆ ಭೂ ಪ್ರದೇಶದಲ್ಲಿ 20 ಗುಂಟೆಯಲ್ಲಿ ಜವಾರಿ ಬದನೆ ಬೆಳೆದಿದ್ದು, ನಿತ್ಯ 15 ಟ್ರೇ ಇಳುವರಿ ಬರುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಟ್ರೇ ಬದನೆಕಾಯಿ ಬೆಲೆ ₹ 600 ರಿಂದ ₹700 ದರ ಇದೆ. ಸೂಪರ್ 10 ತಳಿಯ ಬದನೆಯನ್ನು ನಾಲ್ಕು ಎಕರೆಯಲ್ಲಿ ಬೆಳೆದಿದ್ದು, ನಿತ್ಯ ಒಂದು ಟನ್ ಇಳುವರಿ ಬರುತ್ತಿದೆ. ಈ ಬದನೆಯನ್ನು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಮಾರುಕಟ್ಟೆಗೆ ಕಳುಹಿಸುತ್ತೇವೆ. ಮಾರುಕಟ್ಟೆಯಲ್ಲಿ ಒಂದು ಟ್ರೇಗೆ ₹250 ರಿಂದ ₹300 ದರ ಇದೆ. ಕೆಲವು ಬಾರಿ ಹೆಚ್ಚಿನ ಬೆಲೆಗೂ ಮಾರಾಟವಾಗುತ್ತದೆ’ ಎಂದು ರಾಠಿ ತಿಳಿಸಿದರು.

‘ಏಪ್ರಿಲ್ ಮೊದಲ ವಾರದಲ್ಲಿ ನಾಟಿ ಮಾಡಿದ್ದು, ಎರಡು ತಿಂಗಳ ನಂತರ ಕಾಯಿ ಬರಲು ಆರಂಭವಾಯಿತು.
ಈಗ ಒಂದು ತಿಂಗಳಿನಿಂದ ಬದನೆಯನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದೇವೆ. ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಮುಂದಿನ ಐದು ತಿಂಗಳ ಕಾಲ ಬದನೆ ಪಡೆಯಬಹುದು’ ಎನ್ನುತ್ತಾರೆ
ಅವರು.

‘ಬದನೆ ಕೃಷಿಗೆ ₹1.50 ಲಕ್ಷ ಖರ್ಚಾಗಿದೆ. ಸೂಪರ್ 10 ತಳಿಯ ಬದನೆಯ ಸಸಿಯನ್ನು ಜಗದಾಳದ ಪ್ರವಿರಾಮ ಹೈಟೆಕ್ ನರ್ಸರಿಯಿಂದ ₹ 1ಕ್ಕೆ ಒಂದು ಸಸಿ ಖರೀದಿಸಿದೆ. ಮುಂದಿನ ದಿನಗಳಲ್ಲಿ ತೇವಾಂಶದ ವಾತಾವರಣ ನಿರ್ಮಾಣಗೊಂಡರೆ ಇನ್ನಷ್ಟು ಉತ್ತಮ ರೀತಿಯ ಬದನೆಯನ್ನು ಪಡೆದುಕೊಳ್ಳಬಹುದು’ ಎನ್ನುತ್ತಾರೆ ದೇವರಾಜ ರಾಠಿ.

ಮೂರು ದಶಕಗಳಿಂದ ಕೃಷಿಯಲ್ಲಿ ಹೊಸ ಪ್ರಯೋಗಳನ್ನು ಮಾಡುತ್ತ ವಿಶೇಷ ಸಾಧನೆ ಮಾಡುತ್ತಿರುವ ದೇವರಾಜ ರಾಠಿ ರಾಜ್ಯದ ಮತ್ತು ಬೇರೆ ರಾಜ್ಯಗಳಿಂದ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT