ಶನಿವಾರ, ಆಗಸ್ಟ್ 13, 2022
22 °C
ನಗರಸಭೆಗೆ ಪದೇ ಪದೇ ಅಲೆದಾಟ ತಪ್ಪಿಸಿ; ಡಿ.ಸಿ .ರಾಜೇಂದ್ರ ಸೂಚನೆ

ಸಾರ್ವಜನಿಕರಿಗೆ ಕಿರುಕುಳ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಸಣ್ಣ ಕೆಲಸಕ್ಕೂ ಸಾರ್ವಜನಿಕರು ಪದೇ ಪದೇ ಅಲೆದಾಡುವುದು ತಪ್ಪಿಸಿ, ಸುಗಮವಾಗಿ ಕೆಲಸ ಮಾಡಿಕೊಡಬೇಕು’ ಎಂದು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಜರುಗಿದ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜನನ, ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಗಿ, ಖಾತೆ ಬದಲಾವಣೆಗೆ ಸಂಬಂಧಿಸಿದ ಕೆಲಸಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಬೇಕು. ನಿಗದಿತ ಅವಧಿಯಲ್ಲಿ ಅವರ ಕೆಲಸಗಳು ಆಗಬೇಕು. ಯಾವುದೇ ರೀತಿಯ ಕಿರುಕುಳ, ಒತ್ತಡ ಹೇರುವಂತಿಲ್ಲ’ ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

‘ಕೆಲಸಗಳಿಗಾಗಿ ಕಚೇರಿಗೆ ಬಂದ ಸಾರ್ವಜನಿಕರ ಮೇಲೆ ವಿನಾಕಾರಣ ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅದು ಸರಿಯಲ್ಲ. ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ವಿನಿಯೋಗವಾಗಬೇಕು. ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳ್ಳಬೇಕು. ಸರ್ಕಾರಕ್ಕೆ ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು. 

ನಗರಸಭೆ ಆಯುಕ್ತ ಮುನಿಸ್ವಾಮಪ್ಪ ಮಾತನಾಡಿ, ನಗರಸಭೆಯಲ್ಲಿ ವಿವಿಧ ಯೋಜನೆಗಳ ಅಡಿ ಬಿಡುಗಡೆಯಾದ ಅನುದಾನದ ವಿವರಗಳನ್ನು ಸಭೆಗೆ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ₹1.79 ಕೋಟಿ ಕರ ವಸೂಲಾತಿ ಬೇಡಿಕೆ ಇದ್ದು, ಈ ಪೈಕಿ ಒಟ್ಟು ₹40.82 ಲಕ್ಷ ವಸೂಲಿ ಆಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಯಶವಂತ ಗುರಿಕಾರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು