ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆಯಲ್ಲಿ ಸೈಕಲ್ ತುಳಿದು ಪ್ರತಿಭಟನೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್‌ ತೀವ್ರ ವಿರೋಧ
Last Updated 29 ಜೂನ್ 2020, 13:58 IST
ಅಕ್ಷರ ಗಾತ್ರ

ಬೀದರ್: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ನಗರದಲ್ಲಿ ಸೋಮವಾರ ಸೈಕಲ್ ತುಳಿದು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಸೈಕಲ್ ಮೇಲೆ ಬಂದು ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಮೇಲಿಂದ ಮೇಲೆ ತೈಲ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದೆ ಎಂದು ಪಕ್ಷದ ಮುಖಂಡರು ಆರೋಪಿಸಿದರು.

ಕೋವಿಡ್‌ 19 ಸೋಂಕಿನ ಪ್ರಯುಕ್ತ ವಿಧಿಸಲಾದ ಲಾಕ್‌ಡೌನ್‌ನಿಂದ ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಣ್ಣಪುಟ್ಟ ವ್ಯಾಪಾರ ನಡೆಸುವವರು ಹೈರಾಣಾಗಿದ್ದಾರೆ. ಖಾಸಗಿ ನೌಕರರು ಕೆಲಸವಿಲ್ಲದೆ ಬೀದಿಗೆ ಬಂದಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಸುತ್ತ ಆಘಾತಗಳ ಮೇಲೆ ಆಘಾತ ನೀಡುತ್ತಿದೆ ಎಂದು ದೂರಿದರು.

ತೈಲ ಬೆಲೆ ಹೆಚ್ಚಳದಿಂದ ಸರಕು ಸಾಗಣೆ ವೆಚ್ಚ ದುಬಾರಿಯಾಗಲಿದೆ. ಇದು, ಸಾರ್ವಜನಿಕರ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬೀರಲಿದೆ ಎಂದು ಆಪಾದಿಸಿದರು.

ತೈಲ ಬೆಲೆ ಹೆಚ್ಚಳವನ್ನು ಕೂಡಲೇ ವಾಪಸ್ ಪಡೆಯಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ. ಸಮಿ, ಮುಖಂಡರಾದ ವಿಜಯಕುಮಾರ ಕೌಡಿಯಾಳ, ಶಿವರಾಜ ಹಾಸನಕರ್, ರೋಹಿದಾಸ ಘೋಡೆ, ರಾಜಶೇಖರ ಪಾಟೀಲ ಅಷ್ಟೂರ, ಶಂಕರ ದೊಡ್ಡಿ, ವೆಂಕಟರಾವ್ ಶಿಂಧೆ, ಮಹಮ್ಮದ್ ಯುಸೂಫ್, ಲಿಯಾಖತ್ ಉಲ್ಲಾ ಖಾನ್, ಸುನೀಲ ಬಚ್ಚನ್ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT