ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಳಗಿ: ಭಾವೈಕ್ಯ ಸಾರುವ ಬಾಡಗಂಡಿ ದರ್ಗಾ

ಗುರು ಹಜರತ್ ಪೀರ್ ಹಸನಡೋಂಗ್ರಿ ಸಾಹೇಬ್ ದರ್ಗಾ: ಉರುಸ್ ಇಂದು
ಕೆ.ಎಸ್.ಸೋಮನಕಟ್ಟಿ
Published 7 ಜೂನ್ 2024, 6:38 IST
Last Updated 7 ಜೂನ್ 2024, 6:38 IST
ಅಕ್ಷರ ಗಾತ್ರ

ಬೀಳಗಿ: ವಿವಿಧತೆಯಲ್ಲಿ ಏಕತೆಗೆ ಹೆಸರಾದ ನಮ್ಮ ನಾಡಿನ ಗರಿಮೆ ಹೆಚ್ಚಿಸುವ ಸಾಲಿನಲ್ಲಿ ಧಾರ್ಮಿಕ ಕೇಂದ್ರಗಳಾದ ದೇವಾಲಯ, ಮಠ, ಮಸೀದಿ, ದರ್ಗಾಗಳ ಕೊಡುಗೆ ಅಪಾರ. ಸಮೀಪದ ಬಾಡಗಂಡಿ ವ್ಯಾಪ್ತಿಯ ಗುರು ಹಜರತ್ ಪೀರ್ ಹಸನಡೋಂಗ್ರಿ ಸಾಹೇಬ್ ದರ್ಗಾ ಇದೇ ಸಾಲಿನಲ್ಲಿ ಸೇರುತ್ತದೆ.

ಹಿಂದೂ- ಮುಸ್ಲಿಂ ಸಮುದಾಯಗಳ ಪವಿತ್ರ ಕ್ಷೇತ್ರವಾದ ಈ ದರ್ಗಾ ಭಾವೈಕ್ಯದ ಶ್ರದ್ಧಾ ಕೇಂದ್ರವಾಗಿದೆ. ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಬಿಜಾಪುರ ಸುಲ್ತಾನನಾದ ಎರಡನೇ ಬಾದಷಾಹನ ಕಾಲಘಟ್ಟದಲ್ಲಿ ನಿರ್ಮಾಣವಾದ ಈ ದರ್ಗಾ ಇದು. ಎರಡನೇ ಬಾದಷಾಹನ ಸೇನಾಧಿಪತಿ ಹೈದರ್ ಖಾನ್ ಇಲ್ಲಿರುವ ಸೂಫಿ ಸಂತರಿಗೆ ಕೊಟ್ಟ ಮಾತಿನಂತೆ ಒಂದೇ ದಿನದಲ್ಲಿ ಈ ದರ್ಗಾವನ್ನು ತನ್ನ ಸೈನಿಕರ ಸಹಾಯದಿಂದ ನಿರ್ಮಿಸಿದನು ಎನ್ನುತ್ತದೆ ಇತಿಹಾಸ.

ಇಸ್ಲಾಂ ಶೈಲಿಯಲ್ಲಿರುವ ಈ ದರ್ಗಾವನ್ನು ಗಾರೆ, ಗಚ್ಚು, ಬಿಳಿಸುಣ್ಣ ಮತ್ತು ಕೃಷ್ಣಾ ನದಿಯ ನೀರನ್ನು ಬಳಸಿ ನಿರ್ಮಿಸಲಾಗಿದೆ. ದರ್ಗಾದ ಗದ್ದುಗೆಯ ಬಲಭಾಗದಲ್ಲಿ ಅಮ್ಮನ ಗುಡಿಯಂದೇ ಖ್ಯಾತಿ ಪಡೆದ ದೇವಾಲಯದಲ್ಲಿ ಬಾಬರ ಭಕ್ತರಾದ ಹೊನ್ನನಾಯಕ ಮತ್ತು ಅವರ ತಾಯಿ ಅಮಾಜವ್ವಮ್ಮರ ಗದ್ದುಗೆಗಳಿವೆ. ಇಸ್ಲಾಮಿಕ್ ಸಂಪ್ರದಾಯದ ಈ ದರ್ಗಾದಲ್ಲಿ ಬ್ರಹ್ಮ ದೇವರ ಮೂರ್ತಿಯಿದ್ದು ಈ ದೇವರನ್ನು ಬ್ರಹ್ಮದೇವ, ಭರಮದೇವ, ಹಿರೊಡೆಪ್ಪ ಎಂದು ಕರೆಯುತ್ತಾರೆ.

ಸಸ್ಯಹಾರ ನೈವೇದ್ಯ ಹಾಗೂ ಕುಂಕುಮಾರ್ಚನೆ ಸಲ್ಲಿಸುವುದು ಇಲ್ಲಿನ ವಿಶೇಷಗಳಲ್ಲೊಂದು. ಇಲ್ಲಿರುವ ಅಗ್ನಿಕುಂಡವು ಸದಾಕಾಲ ಉರಿಯುತ್ತಿರುತ್ತದೆ. ಅದು ಆರಿರುವುದನ್ನು ಎಂದೂ ಕಂಡಿಲ್ಲವೆಂದು ಭಕ್ತರು ಹೇಳುತ್ತಾರೆ. ಬಾಬಾರ ಗರ್ಭಗುಡಿಯಲ್ಲಿರುವ ಎಂದು ಆರದ ನಂದಾದೀಪ, ಭವಿಷ್ಯ ಹೇಳುವ ಗುಂಡುಕಲ್ಲು, ಮಂತ್ರದಂಡ ಸೋಟ, ಸಕ್ಕರೆ ಗಿಡ, ನಗಾರಿಯ ಸದ್ದು ಈ ದರ್ಗಾದ ವಿಶೇಷತೆಗಳು.

ಹಿಂದೂಗಳಾದ ಬೀಳಗಿಯ ಕಣವಿ ಕುಟುಂಬದವರು ಈ ದರ್ಗಾದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವುದು ಮತ್ತೊಂದು ವಿಶೇಷ. ವಿವಿಧ ಗ್ರಾಮಗಳ ಜನರು ಜಾತಿ ಬೇಧವಿಲ್ಲದೆ ಎಲ್ಲ ಸಮುದಾಯದವರು ಒಟ್ಟಾಗಿ ಉರುಸ್ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಐದು ದಿನಗಳ ಕಾಲ ಬಹು ವಿಜೃಂಭಣೆಯಿಂದ ಉರುಸ್ ಜರುಗಲಿದೆ. ಇದರ ಅಂಗವಾಗಿ ಅನೇಕ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಜೂನ್ 7ರಂದು ಉರುಸ್ ನಡೆಯಲಿದ್ದು, ಆ ದಿನ ಲಕ್ಷ್ಮೇಶ್ವರದ ರೇವಣ್ಣ ನಾಟ್ಯ ಸಂಘದಿಂದ ‘ದುಡ್ಡು ದಾರಿ ಬಿಡಿಸಿತು’ ಎಂಬ ಸಾಮಾಜಿಕ ನಾಟಕ ನಡೆಯಲಿದೆ ಎಂದು ದರ್ಗಾ ಸಮಿತಿ ಮುಖ್ಯಸ್ ಡಿ.ಎಸ್.ಕಣವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT