ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಬಿಸಿಲು ಬೀಳಿಸುವ ಛಾವಣಿ, ಬಣ್ಣ ಕಾಣದ ಶಾಲೆ

ಬಾಚಿನಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ
Published 24 ಜೂನ್ 2023, 5:08 IST
Last Updated 24 ಜೂನ್ 2023, 5:08 IST
ಅಕ್ಷರ ಗಾತ್ರ

ಬಾದಾಮಿ: ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ಕೊಠಡಿಗಳಲ್ಲಿ ಬೇಸಿಗೆಯಲ್ಲಿ ಬಿಸಿಲು, ಮಳೆಗಾಲದಲ್ಲಿ ನೀರು ಬರುತ್ತದೆ. ಮಳೆ ನೀರಿನಲ್ಲಿಯೇ ಪಾಠ ಕೇಳಬೇಕಿದೆ.

ತಾಲ್ಲೂಕಿನಲ್ಲಿ ಪ್ರಾಥಮಿಕ ಹಂತದಲ್ಲಿ 226 ಶಾಲೆಗಳಿಗೆ 1,134 ಶಾಲಾ ಕೊಠಡಿಗಳಿದ್ದು,  ಹೆಚ್ಚುವರಿಯಾಗಿ 114 ಶಾಲಾ ಕೊಠಡಿಗಳ ಅವಶ್ಯವಿದೆ. ಛಾವಣಿ ದುರಸ್ತಿ 80, ನೆಲಹಾಸು 41, ಗೋಡೆ ಸೀಲಿಂಗ್ ದುರಸ್ತಿ 97, 116 ಶಾಲಾ ಕೊಠಡಿಗಳು ಸುಣ್ಣ, ಬಣ್ಣ ಕಾಣಬೇಕಿದೆ.

ತಾಲ್ಲೂಕಿನ 33 ಪ್ರೌಢ ಶಾಲೆ ಮತ್ತು 10 ಆರ್‌ಎಂಎಸ್‌ಎ ಶಾಲೆಗಳಿಗೆ 208 ಕೊಠಡಿಗಳಿವೆ. ಇನ್ನೂ 94 ಕೊಠಡಿಗಳ ಅವಶ್ಯಕತೆ ಇದೆ. 

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರುತ್ತದೆ. ಕೆಲವೊಂದು ದುರಸ್ತಿಯಲ್ಲಿವೆ. ದುರಸ್ತಿ ಕೈಗೊಳ್ಳಲು ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗೆ ಪ್ರಸ್ತಾವ ಸಲ್ಲಿಸಲು ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಬಿಇಒ ಆರೀಫ್‌ ಬಿರಾದಾರ ತಿಳಿಸಿದರು.

ತಾಲ್ಲೂಕಿನಲ್ಲಿ 361 ಶಿಕ್ಷಕರ ಕೊರತೆ ಇದೆ. ಪ್ರಾಥಮಿಕ ಶಾಲೆಗಳಿಗೆ 230 ಅತಿಥಿ ಶಿಕ್ಷಕರ ನೇಮಕಾತಿ ನಡೆದಿದೆ. ಪ್ರೌಢ ಶಾಲೆಗಳಿಗೆ 52 ಅತಿಥಿ ಶಿಕ್ಷಕರ ಪೈಕಿ 31 ಶಿಕ್ಷಕನ್ನು ನೇಮಿಸಲಾಗಿದೆ.

2023-24 ನೇ ಸಾಲಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಗಳನ್ನು ವಿತರಿಸಲಾಗಿದೆ. ಶಾಲಾ ಸಮವಸ್ತ್ರವನ್ನು ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಮಾತ್ರ ವಿತರಿಸಲಾಗಿದೆ.

ಸರ್ಕಾರದ ‘ಶಕ್ತಿ´ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿರುವ ಹಿನ್ನಲೆಯಲ್ಲಿ ಬಸ್‌ಗಳು ಸರಿಯಾಗಿ ಸಿಗದೆ ವಿದ್ಯಾರ್ಥಿಗಳು ಶಾಲೆಗಳಿಗೆ ವಿಳಂಬವಾಗಿ ಹೋಗುತ್ತಿದ್ದಾರೆ. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಕೆಲವೊಮ್ಮೆ ಬಸ್‌ ನಿಲ್ಲಿಸದೆ ಹೋಗುತ್ತಾರೆ. ಕೆಲವೊಮ್ಮೆ ಬಸ್‌ಗಳಲ್ಲಿ ಹತ್ತಲೂ ಜಾಗವಿರುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಯರಗೊಪ್ಪ ಎಸ್.ಬಿ. ಮಲ್ಲಾಪೂರ, ನಸಗುನ್ನಿ, ಮಂಗಳೂರು ಗ್ರಾಮಗಳಿಗೆ, ಆದರ್ಶ ಶಾಲೆಗೆ ಹಾಗೂ ಬಾಗಲಕೋಟೆಗೆ ಹೋಗುವ ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಟುವಂತಾಗಿದೆ. 

‘ಬಸ್ ಮತ್ತು ಸಿಬ್ಬಂದಿಯ ಕೊರತೆ ಇದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಜೊತೆ ವಾಹನ ಚಾಲಕರು ಮತ್ತು ನಿರ್ವಾಹಕರಿಗೆ ಸರಿಯಾಗಿ ವರ್ತಿಸಲು ಸೂಚಿಸಲಾಗಿದೆ’ ಎಂದು ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಕೃಷ್ಣ ಚವ್ಹಾಣ ಹೇಳಿದರು.

ಬಾಚಿನಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಛಾವಣಿಯ ಹೆಂಚುಗಳು ಒಡೆದು ಸೂರ್ಯನ ಬಿಸಿಲು ಕೊಠಡಿಯಲ್ಲಿ ಬೀಳುತ್ತದೆ
ಬಾಚಿನಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಛಾವಣಿಯ ಹೆಂಚುಗಳು ಒಡೆದು ಸೂರ್ಯನ ಬಿಸಿಲು ಕೊಠಡಿಯಲ್ಲಿ ಬೀಳುತ್ತದೆ

ಮಳೆ ಬಂದರೆ ಸೋರುವ ಶಾಲೆ ಶತಮಾನ ಕಂಡ ಶಾಲೆಗೆ ಬೇಕಿದೆ ಕಾಯಕಲ್ಪ ತಾಲ್ಲೂಕಿನ 114 ಪ್ರಾಥಮಿಕ, 94 ಪ್ರೌಢಶಾಲೆಗಳಿಗಿದೆ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ

ತಾಲ್ಲೂಕಿನ ಶಾಲಾ ಕೊಠಡಿಗಳ ದುರಸ್ತಿಗೆ ಹಾಗೂ ಹೊಸ ಕೊಠಡಿಗಳ ಬೇಡಿಕೆಯ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ

-ಆರೀಫ್ ಬಿರಾದಾರ ಬಿಇಒ ಬಾದಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT