ಬಾಗಲಕೋಟೆ: ಅಂಜುಮನ್ ರಿಫಾಯೆ ಆಮ್ ಹಾಗೂ ಸೀರತ್ ಕಮಿಟಿಯ ಸಹಯೋಗದಲ್ಲಿ ಪ್ರವಾದಿ ಮಹಮ್ಮದರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸೀರತ್ ಕಮಿಟಿ ಅಧ್ಯಕ್ಷ ಜಿ.ಎ. ಡಾಲಾಯತ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.14ರಿಂದ 18ರ ವರೆಗೆ ವಿವಿಧ ಭಾವೈಕ್ಯತೆ, ಧಾರ್ಮಿಕ ಪ್ರವಚನ, ರಸಪ್ರಶ್ನೆ, ಮಹಿಳಾ ಗೋಷ್ಠಿ, ರಕ್ತದಾನ ಶಿಬಿರ ಹಾಗೂ ವೃದ್ಧಾಶ್ರಮ, ಜಿಲ್ಲಾ ಆಸ್ಪತ್ರೆ ಹಾಗೂ ಅನಾಥ ಆಶ್ರಮದಲ್ಲಿ ಹಣ್ಣು ಹಂಪಲ ವಿತರಣೆ ಮಾಡಲಾಗುವುದು ಎಂದರು.
ಉಪಾಧ್ಯಕ್ಷ ಆರ್.ಎಚ್. ಪೆಂಡಾರ ಮಾತನಾಡಿ, ಸೆ.14ರಂದು ಅರೇಬಿಕ್, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಕಾಲೇಜು ವಿದ್ಯಾರ್ಥಿಗಳಿಂದ ಖುರಾನ್ ಪಠಣ, ನಾತೆಪಾಕ್, ಭಾಷಣ ಹೀಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಸೆ.15 ಬೆಳಿಗ್ಗೆ 9ಕ್ಕೆ 7,8,9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 3ಕ್ಕೆ ಮಹಿಳಾ ಗೋಷ್ಠಿ ನಡೆಯಲಿದ್ದು, ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಉದ್ಘಾಟಿಸುವರು. ಹಾಲಿಮಾ ಸಯ್ಯದ್ ಮುನಿರಾ, ಗುಲ್ಜಾರ ಕಾಜಿಬೂದಿಹಾಳ ಉಪನ್ಯಾಸ ನೀಡುವರು ಎಂದು ಹೇಳಿದರು.
ಸೆ.16ರಂದು ಬೆಳಿಗ್ಗೆ 9ಕ್ಕೆ ಹಳೆ ಅಂಜುಮನ್ ಸಂಸ್ಥೆ ಆವರಣದಿಂದ ನಡೆಯುವ ಭವ್ಯ ಮೆರವಣಿಗೆಗೆ ಶಾಸಕ ಎಚ್.ವೈ. ಮೇಟಿ ಚಾಲನೆ ನೀಡಲಿದ್ದಾರೆ. ಸಂಜೆ 7ಕ್ಕೆ ಪ್ರವಚನ ನಡೆಯಲಿದ್ದು, ಮೌಲಾನ ಮುಫ್ತಿ ಝಹೂರ ಅಹ್ಮದ್ ಕಾಜಿ ಅಶ್ರಫಿ ಹಾಗೂ ನೂರ ಅಹ್ಮದ್ ಬಿಳೇಕುದರಿ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂಜುಮನ್ ಸಂಸ್ಥೆ ಅಧ್ಯಕ್ಷರಾದ ಇಮಾಮ್ ಜಾಫರ್ ಬೇಪಾರಿ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮಹೆಬೂಬ್ ಸರಕಾವಸ ಆಗಮಿಸುವರು.
ಸೆ.17 ರಂದು ಬೆಳಿಗ್ಗೆ 9ಕ್ಕೆ ಅಂಜುಮನ್ ಶಾದಿ ಮಹಲ್ ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಉದ್ಘಾಟಿಸುವರು. ಸೆ.18ರಂದು ಬೆಳಿಗ್ಗೆ 11ಕ್ಕೆ ಅಂಜುಮನ್ ಸಂಸ್ಥೆ ಆವರಣದಿಂದ ಹೊರಡುವ ಭವ್ಯ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಚಾಲನೆ ನೀಡಲಿದ್ದಾರೆ.
ಅಮೀನಸಾಬ್ ರಕ್ಕಸಗಿ, ರಫೀಕಸಾಬ್ ಹನುಮಸಾಗರ, ಅಲ್ತಾಫ್ ಹುಸೇನ ಬೇನೂರ, ಅಲ್ತಾಫ್ ಹುಸೇನ ಯಾದವಾಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.