ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಮಾಧ್ಯಮ ಶಾಲೆ ಸ್ಥಳಾಂತರ

ಬಾದಾಮಿ: ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಸುಹಾಸ ಇಂಗಳೆ ಹೇಳಿಕೆ
Last Updated 21 ಡಿಸೆಂಬರ್ 2021, 5:19 IST
ಅಕ್ಷರ ಗಾತ್ರ

ಬಾದಾಮಿ; ಮ್ಯುಸಿಯಂ ಸಮೀಪದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಮಾದರಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಶೀಘ್ರದಲ್ಲಿ ಸ್ಥಳಾಂತರ ಮಾಡಲಾಗುವುದು ಎಂದು ತಹಶೀಲ್ದಾರ್ ಸುಹಾಸ ಇಂಗಳೆ ಹೇಳಿದರು.

ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಭಾನುವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಹಿಂದಿನಿಂದ ಎಲ್ಲ ಕೋಮಿನವರು ಇಲ್ಲಿ ಸೌಹಾರ್ದದಿಂದ ಇದ್ದಾರೆ. ಬೇರೆ ಊರಿನವರು ಬಂದು ಇಲ್ಲಿ ಶಾಂತಿ ಕದಡುವುದು ಬೇಡ. ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಸಾರ್ವಜನಿಕರನ್ನು ವಿನಂತಿಸಿದರು.

ಪಟ್ಟಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮತ್ತು ಮೌಲಾನಾ ಆಜಾದ್ ಶಾಲೆಯ ಕುರಿತು ಎರಡು ಸಂಘಟನೆಗಳು ಈಚೆಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಾಂತಿ ಸಭೆಯನ್ನು ಕರೆಯಲಾಗಿತ್ತು.

ಮೌಲಾನಾ ಶಾಲೆಯಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡುತ್ತಿಲ್ಲ. ಪ್ರಭಾರ ಕ್ಷೇತ್ರ ಶಿಕ್ಷಣ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಕನ್ನಡ ಶಾಲೆ ಉಳಿಸಿ ಹೋರಾಟ ಸಮಿತಿ ವಿವಿಧ ಸಂಘಟನೆಗಳ ಸದಸ್ಯರು ಡಿಡಿಪಿಐಗೆ ಒತ್ತಾಯಿಸಿದರು.

ಶಾಲೆಯ ಆರಂಭದಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹೇಳಲೇಬೇಕು. ರಾಷ್ಟ್ರಗೀತೆ ಹೇಳದಿದ್ದರೆ ಅಲ್ಲಿನ ಶಿಕ್ಷಕರನ್ನು ಅಮಾನತು ಮಾಡುವುದಾಗಿ ಶಿಕ್ಷಣ ಇಲಾಖೆಯ ಡಿಡಿಪಿಐ ಶ್ರೀಶೈಲ ಬಿರಾದಾರ ಸಭೆಯಲ್ಲಿ ಹೇಳಿದರು.

ಮೌಲಾನಾ ಆಜಾದ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಕುರಿತು ನಿರ್ಣಯಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕ ಎಂ.ಎನ್ ಮೇಲಿನಮನಿ ಹೇಳಿದರು. ಸಿಪಿಐ ರಮೇಶ ಹಾನಾಪೂರ, ಪಿಎಸ್ಐ ನೇತ್ರಾವತಿ ಪಾಟೀಲ ಪಟ್ಟಣದಲ್ಲಿ ಎರಡೂ ಕೋಮಿನ ಜನರು ಶಾಂತಿ ಸೌಹಾರ್ದವನ್ನು ಕಾಪಾಡಬೇಕು. ಶಾಂತಿ ಭಂಗ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಶಾಂತಿ ಸಭೆಯಲ್ಲಿ ಕನ್ನಡ ಶಾಲೆಯನ್ನು ಉಳಿಸಿ ಹೋರಾಟದ ವಿವಿಧ ಸಂಘಟನೆಗಳ ಸದಸ್ಯರು ಮತ್ತು ಶಾಲೆಯ ಪೋಷಕರು ಮಾತ್ರ ಇದ್ದರು. ಇನ್ನೊಂದು ಸಂಘಟನೆಯ ಸದಸ್ಯರು ಯಾರೂ ಇರಲಿಲ್ಲ.

ಪ್ರಭಾರ ಬಿಇಒ ಎಂ.ಪಿ. ಮಾಗಿ ಮತ್ತು ಶಿಕ್ಷಣ ಸಂಯೋಜಕ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಮುಖ್ಯ ಶಿಕ್ಷಕಿ ಅಮಾನತು ಇಲ್ಲ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯ ಅಮಾನತು ವದಂತಿ ಬಗ್ಗೆ ಡಿಡಿಪಿಐ ಶ್ರೀಶೈಲ ಬಿರಾದಾರ ಅವರನ್ನು ಪ್ರಶ್ನಿಸಿದಾಗ ಘಟನೆಗೂ ಮುಖ್ಯ ಶಿಕ್ಷಕಿಗೂ ಯಾವುದೇ ಸಂಬಂಧವಿಲ್ಲ, ನಾವು ಯಾರನ್ನೂ ಅಮಾನತು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT