ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲದ ಸಂಸ್ಥೆ ಹೆಸರಲ್ಲಿ ಬಿಲ್ ಸೃಷ್ಟಿ!

ವಿಜಯಪುರದ ಜಾರಿ ಅಧಿಕಾರಿಗಳಿಂದ ₹55 ಲಕ್ಷ ಮೌಲ್ಯದ ಹಿತ್ತಾಳೆ ಸ್ಕ್ರ್ಯಾಪ್ ವಶ
Last Updated 2 ಜನವರಿ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಅಸ್ತಿತ್ವದಲ್ಲಿಯೇ ಇಲ್ಲದ ಸಂಸ್ಥೆ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸಿ ಬೆಂಗಳೂರಿನಿಂದ ಗುಜರಾತ್‌ನ ಜಾಮ್‌ ನಗರಕ್ಕೆ ಒಯ್ಯುತ್ತಿದ್ದ ₹55 ಲಕ್ಷ ಮೌಲ್ಯದ 20 ಟನ್ ಹಿತ್ತಾಳೆಯ ಗುಜರಿ ಸಾಮಗ್ರಿಗಳನ್ನು (ಸ್ಕ್ರ್ಯಾಪ್) ವಾಣಿಜ್ಯ ತೆರಿಗೆ ಇಲಾಖೆ ವಿಜಯಪುರ ಜಾರಿ ವಿಭಾಗದ ಅಧಿಕಾರಿಗಳು ವಶ‍ಪಡಿಸಿಕೊಂಡಿದ್ದಾರೆ.

ಹಿತ್ತಾಳೆಯನ್ನು ಮಹಾರಾಷ್ಟ್ರದಲ್ಲಿ ಖರೀದಿಸಿ ಅಲ್ಲಿಯೇ ಜಿಎಸ್‌ಟಿ ಪಾವತಿಸಿ ಕರ್ನಾಟಕಕ್ಕೆ ತಂದು ಮತ್ತೆ ಗುಜರಾತ್‌ನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಅಲ್ಲಿಗೆ ಕಳುಹಿಸಿಕೊಡಲಾಗುತ್ತಿದೆ ಎಂಬಂತೆ ನಕಲಿ ಇ–ವೇ ಬಿಲ್‌ಗಳ ದಾಖಲೆ ಸೃಷ್ಟಿಸಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಮತ್ತೆ ಅವರು ತೆರಿಗೆ ಪಾವತಿಸುವ ಅಗತ್ಯವಿರಲಿಲ್ಲ.

ಸಾಗಣೆ ಮಾಡುತ್ತಿದ್ದ ಹಿತ್ತಾಳೆ ಸಾಮಗ್ರಿ ಹಳೆಯ ಕಾಲದ್ದಾಗಿದ್ದು, ಬಹುಶಃ ರಾಜ್ಯದಲ್ಲಿಯೇ ಖರೀದಿ ಮಾಡಲಾಗಿದೆ. ಬೆಂಗಳೂರಿನ ಜಾಲಿ ಮೊಹಲ್ಲಾದ ಸೆವೆನ್‌ಹಿಲ್ಸ್ ಟ್ರೇಡಿಂಗ್ ಕಂಪೆನಿ ಹೆಸರಿನಲ್ಲಿ ದಾಖಲೆಗಳನ್ನುಸಿದ್ಧಪಡಿಸಲಾಗಿತ್ತು ಎಂದುವಾಣಿಜ್ಯ ತೆರಿಗೆ ಇಲಾಖೆ ವಿಜಯಪುರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೆಂಗಳೂರಿನಿಂದ ವಿಜಯಪುರ ಮಾರ್ಗವಾಗಿ ಹೊರಟಿದ್ದ ಗುಜರಾತ್ ನೋಂದಣಿ ಸಂಖ್ಯೆ ಹೊಂದಿದ್ದ ಸರಕು ಸಾಗಣೆ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಧಿಕಾರಿಗಳ ತಂಡ ತಡೆದು ತಪಾಸಣೆ ನಡೆಸಿ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಯಾರೂ ಮುಂದೆ ಬರಲಿಲ್ಲ:ಹಿತ್ತಾಳೆ ಸ್ಕ್ರ್ಯಾಪ್ ತಮ್ಮದೆಂದು ಹೇಳಿಕೊಂಡು ಯಾರೂ ಮುಂದೆ ಬರಲಿಲ್ಲ. ಲಾರಿ ಚಾಲಕನಿಂದ ದೊರೆತ ದಾಖಲೆ ಆಧರಿಸಿ ಬೆಂಗಳೂರಿನ ಕಂಪೆನಿಯ ವಿಳಾಸಕ್ಕೆ ತೆರಳಿದರೆ ಅದು ಖೊಟ್ಟಿ ಎಂಬುದು ಗೊತ್ತಾಯಿತು. ಆನ್‌ಲೈನ್‌ನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಗುಜರಾತ್‌ಗೆ ಹಿತ್ತಾಳೆ ಸಾಗಿಸಲು ಲಾರಿ ಬುಕ್ ಮಾಡಲಾಗಿತ್ತು ಎಂಬುದು ತನಿಖೆಯ ವೇಳೆ ಬಯಲಾಗಿದೆ ಎಂದು ಹೇಳುತ್ತಾರೆ.

ಹೆಚ್ಚು ಗಮನ ಹರಿಸುತ್ತೇವೆ:ಜಿಎಸ್‌ಟಿ ಜಾರಿಯಾದ ನಂತರ ಪದೇ ಪದೆತೆರಿಗೆ ವಂಚನೆಯಾಗುವ ಸರಕುಗಳ ಪಟ್ಟಿಯನ್ನು ವಾಣಿಜ್ಯ ತೆರಿಗೆ ಇಲಾಖೆಯಿಂದ ಸಿದ್ಧಪಡಿಸಲಾಗಿದೆ. ಅದರಲ್ಲಿ ಕಬ್ಬಿಣ, ಅಡಿಕೆ, ಸಿದ್ಧ ಉಡುಪು, ಕೊಬ್ಬರಿಯೊಂದಿಗೆ ಹಿತ್ತಾಳೆ ಹಾಗೂ ತಾಮ್ರದ ಸ್ಕ್ರ್ಯಾಪ್‌ ಕೂಡ ಸೇರಿವೆ. ಹೀಗಾಗಿ ಇಂತಹ ಸರಕುಗಳನ್ನು ತಪಾಸಣೆ ಮಾಡುವಾಗ ತುಸು ಹೆಚ್ಚೇ ಗಮನ ಹರಿಸುತ್ತೇವೆ ಎಂದು ಅಧಿಕಾರಿ ಹೇಳುತ್ತಾರೆ.

’ಹಿತ್ತಾಳೆ ಸ್ಕ್ರ್ಯಾಪ್ ಸಾಗಣೆಗೆ ಸಿದ್ಧಪಡಿಸಿದ್ದ ದಾಖಲೆಗಳು ಅನುಮಾನಾಸ್ಪದವಾಗಿ ಕಂಡುಬಂದ ಕಾರಣ ಅವುಗಳ ಖಚಿತತೆಗೆ ತಪಾಸಣೆ ಆರಂಭಿದೆವು. ಆಗ ಸಂಬಂಧಿಸಿದ ಡೀಲರ್‌ನ ಅಸ್ತಿತ್ವವೇ ಇಲ್ಲ ಎಂಬುದು ಗೊತ್ತಾಯಿತು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT