ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ ಗ್ರಂಥಾಲಯ ಬೀಳುವುದೊಂದೇ ಬಾಕಿ

ಹೊಸ ಕಟ್ಟಡ ನಿರ್ಮಾಣದ ನಿರೀಕ್ಷೆ; ಕಿತ್ತುಹೋದ ಚಾವಣಿ
Published 6 ಸೆಪ್ಟೆಂಬರ್ 2023, 6:28 IST
Last Updated 6 ಸೆಪ್ಟೆಂಬರ್ 2023, 6:28 IST
ಅಕ್ಷರ ಗಾತ್ರ

ಕಾಶಿನಾಥ ಸೋಮನಕಟ್ಟಿ

ಬೀಳಗಿ: ಬೀಳಗಿಯ ಮಧ್ಯ ಭಾಗದಲ್ಲಿರುವ ಶಾಖಾ ಗ್ರಂಥಾಲಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಕಟ್ಟಡದ ಚಾವಣಿ ತುಂಡಾಗಿ ಓದುಗರ ಮೇಲೆ ಬೀಳುತ್ತವೆ. ಕೆಲವು ದಿನಗಳ ಹಿಂದೆ ನಿರಂತರ ಮಳೆಯಾಗುತ್ತಿರುವುದರಿಂದ ಗ್ರಂಥಾಲಯದ ಕಟ್ಟಡ ಸಂಪೂರ್ಣ ಸೋರುತ್ತಿದೆ.

ಓದಿನ ದಾಹ ತಣಿಸುವ ಬೆಲೆಬಾಳುವ ಗ್ರಂಥಗಳು ತೊಯ್ದು ಹಾಳಾಗುತ್ತಿವೆ. ಕಟ್ಟಡದ ಚಾವಣಿಯ ಮೇಲೆ ತಗ್ಗು ದಿಣ್ಣೆಗಳಾಗಿರುವುದರಿಂದ ಮಳೆಯ ನೀರು ಹೊರಗಡೆ ಬೀಳದೆ, ಗೋಡೆಯಿಂದ ಇಳಿಯುತ್ತಿದ್ದು, ಗೋಡೆ ಬಿರುಕು ಬಿಟ್ಟಿದೆ. ಇದರಿಂದ ವಿದ್ಯುತ್ ಅರ್ಥ್‌ ಆಗುವ ಸಂಭವವೂ ಇರುತ್ತದೆ.

ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಬಾಡಿಗೆ ಕಟ್ಟಡಕ್ಕೆ ಅಥವಾ ಖಾಲಿ ಇರುವ ಯಾವುದಾದರೂ ಸರ್ಕಾರಿ ಕಟ್ಟಡಕ್ಕೆ ಗ್ರಂಥಾಲಯವನ್ನು ಸ್ಥಳಾಂತರಿಸಬೇಕು ಎಂಬುದು ಓದುಗರ ಆಗ್ರಹ.

ಪ್ರಸ್ತುತ ಕಟ್ಟಡ 1996–97ರಲ್ಲಿ ಆಗಿನ ಜನಸಂಖ್ಯೆಗೆ ಅನುಗುಣವಾಗಿ ಕಟ್ಟಿಸಲಾಗಿದೆ. ಕಟ್ಟಡ ಊರಿನ ಮಧ್ಯಭಾಗ ಮತ್ತು ಸಾರ್ವಜನಿಕರು ನಡೆದಾಡುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವುದರಿಂದ ಸಾಕಷ್ಟು ಜನ ಗ್ರಂಥಾಲಯಕ್ಕೆ ಓದಲು ಬರುತ್ತಾರೆ.

ಮುಳುಗಡೆ ಗ್ರಾಮಗಳಾದ ಕೊರ್ತಿ, ಹೆಗ್ಗೂರ, ಟಕ್ಕಳಕಿ, ಮುತ್ತಲದಿನ್ನಿ, ಗೋವಿನದಿನ್ನಿ, ಗುಂಡನಪಲ್ಲೆ, ಢವಳೇಶ್ವರ, ಲಿಂಗಾಪುರ ಎಸ್ ಆರ್, ಮತ್ತು ಮುತ್ತಲದಿನ್ನಿ ತಾಂಡಾ, ಗರಡದಿನ್ನಿ ಗ್ರಾಮಗಳು ಬೀಳಗಿ ಪಟ್ಟಣಕ್ಕೆ ಸ್ಥಳಾಂತರವಾಗಿರುವುದರಿಂದ ಈ ಗ್ರಾಮಗಳ ಸಾರ್ವಜನಿಕರು ಗ್ರಂಥಾಲಯಕ್ಕೆ ಓದಲು ಬರುತ್ತಾರೆ. ಗ್ರಂಥಾಲಯದಲ್ಲಿ ಕೆಲವೊಮ್ಮೆ ಕುಳಿತು ಓದಲು ಆಸನ ಸಿಗದೇ ನಿಂತುಕೊಂಡು ಓದುವ ಪ್ರಸಂಗ ಬರುತ್ತದೆ.

1996 ರಲ್ಲಿ ಈ ಕಟ್ಟಡ ನಿರ್ಮಾಣವಾದಾಗ ಜೆ.ಟಿ ಪಾಟೀಲರೇ ಶಾಸಕರಾಗಿದ್ದರು. ಪ್ರಸ್ತುತ ಅವರೇ ಕ್ಷೇತ್ರದ ಶಾಸಕರಾಗಿದ್ದು ಹೊಸ ಗ್ರಂಥಾಲಯ ಕಟ್ಟಡ ನಿರ್ಮಿಸಲು ಗಮನಹರಿಸಬೇಕೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಸ್ತುತ 25,000 ಕ್ಕಿಂತ ಹೆಚ್ಚು ಪುಸ್ತಕಗಳು ಗ್ರಂಥಾಲಯದಲ್ಲಿವೆ. ದಿನಾಲೂ ನೂರಾರು ಜನ ವಿದ್ಯಾರ್ಥಿಗಳು, ಶಿಕ್ಷಕರು, ಹಿರಿಯರು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಗ್ರಂಥಾಲಯಕ್ಕೆ ಬಂದು ಓದುತ್ತಾರೆ.

ಗ್ರಂಥಾಲಯದ ಒಳಭಾಗದಲ್ಲಿ ಕಟ್ಟಡದ ಮೇಲ್ಚಾವಣಿಯ ಪದರು ಹಾಳಾಗಿರುವುದು
ಗ್ರಂಥಾಲಯದ ಒಳಭಾಗದಲ್ಲಿ ಕಟ್ಟಡದ ಮೇಲ್ಚಾವಣಿಯ ಪದರು ಹಾಳಾಗಿರುವುದು
ಸ್ಥಳಾವಕಾಶದ ಕೊರತೆಯಿಂದ ಬೀಳಗಿಯ ಸಾರ್ವಜನಿಕ ಗ್ರಂಥಾಲಯದ ಪುಸ್ತಕಗಳು ಮೂಲೆಗುಂಪಾಗಿರುವುದು
ಸ್ಥಳಾವಕಾಶದ ಕೊರತೆಯಿಂದ ಬೀಳಗಿಯ ಸಾರ್ವಜನಿಕ ಗ್ರಂಥಾಲಯದ ಪುಸ್ತಕಗಳು ಮೂಲೆಗುಂಪಾಗಿರುವುದು
ಗ್ರಂಥಾಲಯ ಶಿಥಿಲಾವಸ್ಥೆಯಲ್ಲಿರುವ ವಿಚಾರವನ್ನು ಬೀಳಗಿ ಶಾಸಕರು ತಹಶೀಲ್ದಾರ್‌ ಹಾಗೂ ತಾ.ಪಂ ಇಒ ಅವರಿಗೆ ಪತ್ರದ ಮೂಲಕ ಗಮನಕ್ಕೆ ತರಲು ಬೀಳಗಿ ಗ್ರಂಥಾಲಯದ ಸಹಾಯಕ ಗ್ರಂಥಪಾಲಕರಿಗೆ ಸೂಚಿಸಿದ್ದೇನೆ –
ಯಮನೂರಪ್ಪ ಮುಖ್ಯಗ್ರಂಥಾಲಯ ಅಧಿಕಾರಿ ಜಿಲ್ಲಾ ಕೇಂದ್ರ ಬಾಗಲಕೋಟೆ
ಗ್ರಂಥಾಲಯದ ಪುಸ್ತಕಗಳು ಸ್ಥಳಾವಕಾಶದ ಕೊರತೆಯಿಂದ ಕಟ್ಟಡದಲ್ಲಿ ಜೋಡಿಸಿಡಲು ಆಗುತ್ತಿಲ್ಲ. ತಾತ್ಕಾಲಿಕ ಕಟ್ಟಡದ ಅವಶ್ಯಕತೆ ಇದೆ
–ಯಲ್ಲಪ್ಪ ತಳವಾರ ಬೀಳಗಿ ಸಾರ್ವಜನಿಕ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT