ಶನಿವಾರ, ಜನವರಿ 29, 2022
17 °C

ಸಿದ್ದರಾಮಯ್ಯ ಬಾದಾಮಿಗೆ ಬಂದು ಹುಲಿ ಆಗಿದ್ದ ನನ್ನ ಇಲಿ ಮಾಡ್ಯಾರ: ಚಿಮ್ಮನಕಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: 'ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಬಂದು ಹುಲಿ ಆಗಿದ್ದ ನನ್ನ ಇಲಿ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ಯೋಗ್ಯತೆ ಇಲ್ಲದಿದ್ದರೆ ಅದನ್ನು ಬಿಟ್ಟು ನಮಗ್ಯಾಕೆ ಗಂಟು ಬೀಳಬೇಕು' ಎಂದು ಕ್ಷೇತ್ರದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಪ್ರಶ್ನಿಸಿದರು.

ಬಾದಾಮಿ ಪಟ್ಟಣದಲ್ಲಿ ಸೋಮವಾರ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಗೌಡ ಪಾಟೀಲ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಎದುರೇ ಚಿಮ್ಮನಕಟ್ಟಿ ತಮ್ಮ ಅಸಮಾಧಾನ ತೋಡಿಕೊಂಡರು. ಚಿಮ್ಮನಕಟ್ಟಿ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ಬಾದಾಮಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು.

ಈ ಬಾರಿ ಮತ್ತೊಮ್ಮೆ ಅಲ್ಲಿಯೇ ಸ್ಪರ್ಧಿಸುವುದಾಗಿ ಬೆಳಿಗ್ಗೆ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಭಾಷಣದಲ್ಲಿ ವಿರೋಧ ವ್ಯಕ್ತಪಡಿಸಿದರು.

ಸಭೆಯಲ್ಲಿ ಚಿಮ್ಮನಕಟ್ಟಿ ಮಾತನಾಡುವಾಗ ಕಾರ್ಯಕರ್ತರೊಬ್ಬರು, 'ನೀವು ಮತ್ತೆ ಹುಲಿ ಆಗ್ತೀರಿ' ಎಂದು ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಿ.ಬಿ.ಚಿಮ್ಮನಕಟ್ಟಿ, 'ಹುಲಿ ಹೋಗಿ ಇಲಿ ಮಾಡಿದ್ದೀರಿ. ಮುಂದಿನ ಸಲ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಹಿಂದಿನ ಚುನಾವಣೆಯಲ್ಲಿ ಅವರ ಪುತ್ರನ ಬಿಟ್ಟು ಸಿದ್ದರಾಮಯ್ಯಗೆ ಆ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದ್ದರೆ ಅವರು ಗೆಲ್ಲುತ್ತಿದ್ದರು. ಪುತ್ರನ ಕಾರಣಕ್ಕೆ ವರುಣಾ ಕ್ಷೇತ್ರ ಬಿಟ್ಟರು. ಅವರು ಅಲ್ಲಿಯೇ ಸ್ಪರ್ಧಿಸಬೇಕಪ್ಪಾ. ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಗೆಲ್ಲಬೇಕು ಎಂದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ಯೋಗ್ಯತೆ ಇಲ್ಲಾಂದ್ರೆ ಯಾಕೆ ಸ್ಪರ್ಧಿಸಬೇಕು.‌‌ ಅದನ್ನ ಬಿಟ್ಟು ನಮಗೆ ಗಂಟು ಬಿದ್ದಾರ. ನಾನೇನು ಮಾಡಬೇಕು' ಎಂದರು.

ಇದರಿಂದ ವೇದಿಕೆಯಲ್ಲಿದ್ದ ಸಿದ್ದರಾಮಯ್ಯಗೆ ಮುಜುಗರ ಉಂಟಾಯಿತು. ಬಿ.ಬಿ.ಚಿಮ್ಮನಕಟ್ಟಿ ಅವರನ್ನು ಸಮಾಧಾನಪಡಿಸುವಂತೆ ಪಕ್ಕದಲ್ಲಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರಿಗೆ ಹೇಳಿದರು. ಈ ವೇಳೆ ಪಕ್ಷದ ಮುಖಂಡ ಎಂ.ಜಿ. ಕಿತ್ತಲಿ ಸಮಾಧಾನಪಡಿಸಲು ಮುಂದಾದರು. ಆಗ ಚಿಮ್ಮನಕಟ್ಟಿ ಮತ್ತಷ್ಟು ಕೋಪಗೊಂಡರು. ಇದು ಸಭೆಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು