ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಸೂರ್ಯಕಾಂತಿ: ನೋಂದಣಿಗೆ ರೈತರ ನಿರಾಸಕ್ತಿ

Published 8 ಡಿಸೆಂಬರ್ 2023, 5:47 IST
Last Updated 8 ಡಿಸೆಂಬರ್ 2023, 5:47 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಮಾಡಲಾಗುತ್ತಿದೆ. ಆದರೆ, ಅದಕ್ಕೆ ರೈತರು ನಿರಾಸಕ್ತಿ ತೋರಿದ್ದಾರೆ.

ಜಿಲ್ಲೆಯಲ್ಲಿ ಸೂರ್ಯಕಾಂತಿ ಖರೀದಿಗಾಗಿ 8 ಕಡೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿತ್ತು. ನಾಲ್ಕು ಕೇಂದ್ರಗಳಲ್ಲಿ ಕೇವಲ 231 ರೈತರು ಹೆಸರು ನೋಂದಾಯಿಸಿದ್ದರೆ, ನಾಲ್ಕು ಕೇಂದ್ರಗಳಲ್ಲಿ ಯಾರೂ ಹೆಸರು ನೋಂದಾಯಿಸಿಲ್ಲ.

ಪ್ರತಿ ಕ್ವಿಂಟಲ್‍ಗೆ ₹ 6,760 ಖರೀದಿಸಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 4,500 ರಿಂದ ₹ 5,450ರವರೆಗೆ ಮಾರಾಟವಾಗುತ್ತಿದೆ. ಹೆಚ್ಚಿನ ಬೆಲೆಗೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದ್ದರೂ, ರೈತರು ಬೆಂಬಲ ಬೆಲೆಯಡಿ ಮಾರಾಟ ಮಾಡುತ್ತಿಲ್ಲ.

ಪ್ರತಿ ಎಕರೆಗೆ 3 ಕ್ವಿಂಟಲ್‍ದಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಖರೀದಿ ಮಾಡಲಾಗುವುದು ಎಂದು ತಿಳಿಸಲಾಗಿತ್ತು. 231 ರೈತರು 2,660 ಕ್ವಿಂಟಲ್‌ ಮಾರಾಟ ಮಾಡಲು ಮುಂದೆ ಬಂದಿದ್ದಾರೆ.

ಎಫ್‌.ಎ.ಕ್ಯು. ಗುಣಮಟ್ಟದ ಸೂರ್ಯಕಾಂತಿ ಖರೀದಿ ಮಾಡಲಾಗುತ್ತಿದೆ. ಸರಿಯಾಗಿ ಮಳೆಯಾಗದ್ದರಿಂದ ಬಹಳಷ್ಟು ರೈತರ ಸೂರ್ಯಕಾಂತಿಯ ಗುಣಮಟ್ಟವು ಎಫ್‌.ಎ.ಕ್ಯು. ಮಟ್ಟದಲ್ಲಿರಲಿಲ್ಲ. ಆದ್ದರಿಂದ ರೈತರ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಡಿ ಮಾರಾಟಕ್ಕೆ ತಂದರೂ ಖರೀದಿಯಾಗಲಿಲ್ಲ.

ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸದ್ದರಿಂದಲೂ ರೈತರು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಮೊದಲ ಬಾರಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಕೆಲವು ರೈತರ ಬೆಳೆ ಬೆಳೆದಿರುವುದು ದಾಖಲಾಗಿರಲಿಲ್ಲ.

ಸೂರ್ಯಕಾಂತಿ ಬೆಳೆ ರಾಶಿಯಾಗಿ ಬಹಳ ದಿನಗಳ ನಂತರ ಖರೀದಿ ಆರಂಭಿಸಲಾಯಿತು. ಆ ವೇಳೆಗಾಗಲೇ ರೈತರು ಸೂರ್ಯಕಾಂತಿ ಮಾರಾಟ ಮಾಡಿದ್ದರು.

‘ಇನ್ನು ಒಂದಷ್ಟು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಲ್ಲ. ಹಾಗಾಗಿ, ಅವರಿಗೆ ಬೆಂಬಲ ಬೆಲೆಯಡಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ’ ಎಂದು ಕರ್ನಾಟಕ ಎಣ್ಣೆ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದ ಮ್ಯಾನೇಜರ್‌ ಆರ್.ಎಂ. ನಾಡಗೌಡ.

ನೋಂದಣಿ ಮಾಡಿದ ಬಹಳಷ್ಟು ರೈತರ ಸೂರ್ಯಕಾಂತಿ ಈಗಾಗಲೇ ಖರೀದಿ ಮಾಡಲಾಗಿದೆ.
–ಆರ್‌.ಎಂ. ನಾಡಗೌಡ, ವ್ಯವಸ್ಥಾಪಕ, ಕೆಒಎಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT