ಭಾನುವಾರ, ಸೆಪ್ಟೆಂಬರ್ 19, 2021
24 °C
₹ 50 ಕೋಟಿ ತುರ್ತು ಅನುದಾನಕ್ಕೆ ಬೇಡಿಕೆ

ಪ್ರವಾಹ ಪರಿಸ್ಥಿತಿ: ಬೆಳಗಾವಿ ವಿಭಾಗದಲ್ಲಿ ₹550 ಕೋಟಿ ನಷ್ಟ -ಡಿಸಿಎಂ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕಳೆದೊಂದು ವಾರದಿಂದ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಬೆಳಗಾವಿ ವಿಭಾಗದಲ್ಲಿ ಲೋಕೋಪಯೋಗಿ ಇಲಾಖೆಗೆ ₹ 550 ಕೋಟಿ ಹಾನಿಯಾಗಿದೆ. ಇಲಾಖೆಗೆ ಸಂಬಂಧಿಸಿದಂತೆ ಹಾನಿಯಾಗಿರುವ ಕಟ್ಟಡ, ರಸ್ತೆ, ಸೇತುವೆಗಳ ತಾತ್ಕಾಲಿಕ ದುರಸ್ತಿಗೆ ತಕ್ಷಣ ₹ 50 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವುದಾಗಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಮುಧೋಳ ತಾಲ್ಲೂಕಿನ ಮಿರ್ಜಿಯಲ್ಲಿ ಶನಿವಾರ ಘಟಪ್ರಭಾ ನದಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಯ ಆಸ್ತಿಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಅವುಗಳ ತುರ್ತು ನಿರ್ವಹಣೆಗಾಗಿಯೇ ₹ 120 ಕೋಟಿ ಅಗತ್ಯವಿದೆ ಎಂದರು.

ಈವರೆಗೆ ರಾಜ್ಯದಲ್ಲಿ ಪ್ರವಾಹದಿಂದಾಗಿ 101 ಕಟ್ಟಡ, 1,400 ಕಿ.ಮೀ ರಸ್ತೆ ಹಾನಿಯಾಗಿದೆ. 259 ಸಿಡಿ ಕಾಮಗಾರಿ ಮತ್ತು 294 ಇತರೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಅದಕ್ಕಾಗಿ ಇಲಾಖೆಯಿಂದ ತುರ್ತು ಅನುದಾನಕ್ಕೆ ಕೋರಲಾಗಿದೆ ಎಂದು ತಿಳಿಸಿದರು.

2019ರಲ್ಲಿ ಪ್ರವಾಹ ಉಂಟಾದಾಗ ಇಲಾಖೆಗೆ ₹ 8 ಸಾವಿರ ಕೋಟಿ ನಷ್ಟವಾಗಿತ್ತು, 2020ರಲ್ಲಿ ₹ 3,500 ಕೋಟಿ  ನಷ್ಟ ಉಂಟಾಗಿತ್ತು ಎಂದರು.

ಮಳೆಯಿಂದಾಗಿ ಬೆಳಗಾವಿಯಲ್ಲಿ 70ಕ್ಕೂ ಅಧಿಕ ರಸ್ತೆ, 36 ಸೇತುವೆಗಳು ಜಲಾವೃತಗೊಂಡಿವೆ. 6 ಮಿಲಿಮೀಟರ್ ಆಗಬೇಕಾದ ಜಾಗದಲ್ಲಿ 66 ಮಿಲಿಮೀಟರ್ ಮಳೆ ಆಗಿದೆ. ಇದರಿಂದ ಪ್ರವಾಹ ಸೃಷ್ಟಿಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಪ್ರವಾಹ ಸನ್ನಿವೇಶ ನಿರ್ಮಾಣವಾಗಿರುವುದರಿಂದ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.

ಮನೆಗಳು, ಜನ-ಜಾನುವಾರುಗಳಿಗೆ ಹಾನಿಯಾದರೆ ತಕ್ಷಣ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ನಿಯಮಾವಳಿಯಂತೆ ಪರಿಹಾರಧನ ನೀಡಲು ಸೂಚಿಸಲಾಗಿದೆ. ಯಾವುದೇ ಜೀವನ ಹಾನಿಯಾಗದಂತೆ ಕ್ರಮವಹಿಸಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು