ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ‘ಲಂಚದ ಹೊರೆ ಇಳಿಸಿ; ಶೋಷಣೆ ತಪ್ಪಿಸಿ’

ಶಾಸಕರಿಗೆ ಪತ್ರ ಬರೆದು ಗೋಳು ತೋಡಿಕೊಂಡ ಶಿಕ್ಷಕರು
Last Updated 20 ಮೇ 2020, 20:00 IST
ಅಕ್ಷರ ಗಾತ್ರ

ಬಾಗಲಕೋಟೆ: ಅನುದಾನಿತ ಶಾಲೆಗಳ ಶಿಕ್ಷಕರು ಗಳಿಕೆ ರಜೆ ನಗದೀಕರಣಕ್ಕೆ ಅಧಿಕಾರಿಗಳಿಗೆ ₹1500 ಲಂಚ ಕೊಡಬೇಕು. ಮೂಲಸೌಕರ್ಯ ಕಲ್ಪಿಸಲು 30 ಸರ್ಕಾರಿ ಪ್ರೌಢಶಾಲೆಗಳಿಗೆ ತಾಲ್ಲೂಕು ಪಂಚಾಯ್ತಿಯಿಂದ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಪ್ರತಿ ಶಾಲೆಯಿಂದ ₹12 ಸಾವಿರ ಲಂಚ ಪಡೆಯಲಾಗಿದೆ. ಇದಕ್ಕೆ ದೈಹಿಕ ಶಿಕ್ಷಕರೊಬ್ಬರು ಮಧ್ಯವರ್ತಿ!

ಅತಿಥಿ ಶಿಕ್ಷಕರಾಗಿ ಕೆಲಸ ಮಾಡದವರಿಗೂ ಸಂಬಳ ಬಟವಾಡೆ ಮಾಡಲಾಗಿದೆ. ಶಿಕ್ಷಕರು ವರ್ಗಾವಣೆ ಇಲ್ಲವೇ ಬಡ್ತಿಯ ಚಾಲನಾ ಆದೇಶ ಪಡೆಯಲು ₹5 ಸಾವಿರ ಕೊಡಬೇಕಿದೆ.

ಹೀಗೆ ಹಲವು ಆರೋಪಗಳನ್ನೊಳಗೊಂಡ ಪತ್ರವೊಂದನ್ನು ಬಾದಾಮಿ ತಾಲ್ಲೂಕಿನ ಶಿಕ್ಷಕರ ಹೆಸರಿನಲ್ಲಿ ಶಾಸಕ ಸಿದ್ದರಾಮಯ್ಯ ಅವರಿಗೆ ಬರೆಯಲಾಗಿದೆ. ’ತಾಲ್ಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಲಂಚಗುಳಿತನ ಮಿತಿಮೀರಿದೆ. ಇದರಲ್ಲಿ ಬಿಇಒ ಕಚೇರಿಯ ಕೆಲವರ ಪಾತ್ರವಿದೆ. ಅದನ್ನು ಸಹಿಸಲು ಆಗುತ್ತಿಲ್ಲ. ನೀವಾದರೂ ಮಧ್ಯಪ್ರವೇಶಿಸಿ ವ್ಯವಸ್ಥೆ ಸರಿಪಡಿಸಿ‘ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

’ಅತಿಥಿ ಶಿಕ್ಷಕಿಯಾಗಿ ನೇಮಕ ಪತ್ರ ಪಡೆಯುವಾಗಲೂ ಸಂಬಂಧಿಸಿದವರಿಗೆ ₹5 ಸಾವಿರ ಲಂಚ ಕೊಟ್ಟಿದ್ದೆನು. ಈಗ ಗೌರವಧನವೂ ಬಿಡುಗಡೆ ಆಗಿಲ್ಲ. ಕೊರೊನಾ ಲಾಕ್‌ಡೌನ್‌ನ ಸಂಕಷ್ಟದಲ್ಲಿ ಬದುಕುವುದೇ ಕಷ್ಟವಾಗಿದೆ‘ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕಿಯೊಬ್ಬರು ’ಪ್ರಜಾವಾಣಿ‘ ಎದುರು ಅಳಲು ತೋಡಿಕೊಂಡರು.

’ಹಿಂದಿನ ಎರಡು ವರ್ಷ ಕೆಲಸ ಮಾಡಿದಾಗ ಗೌರವಧನ ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು. ಈ ಬಾರಿ ಎಸ್‌ಡಿಎಂಸಿ ಖಾತೆಗೆ ಹಾಕಿದ್ದಾರೆ. ಕೆಲವು ಶಾಲಾಭಿವೃದ್ಧಿ ಸಮಿತಿಯವರು ಅದರಲ್ಲಿ ₹2 ಸಾವಿರ ಕಡಿತಗೊಳಿಸಲು ಮುಂದಾಗಿದ್ದರು. ಆ ಬಗ್ಗೆ ಕೇಳಿದರೆ, ಸರ್ಕಾರ ಮಾರ್ಚ್ 31ರವರೆಗೂ ಗೌರವಧನ ಬಟವಾಡೆ ಮಾಡಿದೆ. ಆದರೆ ಮಾರ್ಚ್ 22ರವರೆಗೆ ಮಾತ್ರ ಶಿಕ್ಷಕರು ಕೆಲಸ ಮಾಡಿದ್ದಾರೆ. ಹೀಗಾಗಿ ಉಳಿದ ಎಂಟು ದಿನಗಳ ಗೌರವಧನ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದರು. ಅದಕ್ಕೆ ನಾವು ಒಪ್ಪಲಿಲ್ಲ. ಹೀಗಾಗಿ ಅಷ್ಟೂ ಮೊತ್ತ ಕೊಟ್ಟರು. ಸರ್ಕಾರ ಕೇಳಿದರೆ ವಾಪಸ್ ಕೊಡುವುದಾಗಿ ನಮ್ಮ ಬಳಿ ಪತ್ರ ಬರೆಸಿಕೊಂಡಿದ್ದಾರೆ’ ಎಂದು ಅತಿಥಿ ಶಿಕ್ಷಕರೊಬ್ಬರು ತಿಳಿಸಿದರು.

ಆರೋಪಗಳೆಲ್ಲವೂ ಸತ್ಯಕ್ಕೆ ದೂರ: ಬಿಇಒ
‘ನಮ್ಮ ತಾಲ್ಲೂಕಿನಲ್ಲಿ ಇಂತಹ ಯಾವುದೇ ಲಂಚ ಪ್ರಕರಣ ನಡೆದಿಲ್ಲ. ಶಿಕ್ಷಕರ ಹೆಸರಲ್ಲಿ ಶಾಸಕರಿಗೆ ಪತ್ರ ಬರೆದ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಆರೋಪಗಳೆಲ್ಲವೂ ಸತ್ಯಕ್ಕೆ ದೂರ. ರಜೆ ನಗದೀಕರಣ, ಶಾಲೆಗೆ ಅನುದಾನ ಬಿಡುಗಡೆ ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ. ಹಣ ಪಡೆಯುವ ಪ್ರಶ್ನೆಯೇ ಇಲ್ಲ. ನನ್ನ ಹೆಸರಲ್ಲಿ ಯಾರಾದರೂ ಪಡೆದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವೆ’ ಎಂದು ಬಾದಾಮಿ ಬಿಇಒ ರುದ್ರಪ್ಪ ಹುರಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅತಿಥಿ ಶಿಕ್ಷಕರ ನೇಮಕ ಜೂನ್ ತಿಂಗಳಲ್ಲಿ ಆಗಿದೆ. ಆಗ ನಾನು ಇಲ್ಲಿ ಇರಲಿಲ್ಲ. ಆದೇಶ ಪತ್ರ ನೀಡಲು ಲಂಚ ಪಡೆದ ವಿಷಯ ಗೊತ್ತಿಲ್ಲ. ತಾಲ್ಲೂಕಿನಲ್ಲಿ 243 ಅತಿಥಿ ಶಿಕ್ಷಕರ ಗೌರವಧನ ಬಿಡುಗಡೆಯಾಗಿದೆ. ಹೆಚ್ಚುವರಿಯಾಗಿ ನೇಮಕಗೊಂಡಿದ್ದ 15 ಮಂದಿಗೆ ಬಿಡುಗಡೆ ಆಗಬೇಕಿದೆ. ಇನ್ನೊಂದು ವಾರದಲ್ಲಿ ಅವರಿಗೂ ಕೊಡಲಾಗುವುದು’ ಎಂದರು.

*
ನನಗೂ ಸಾಕಷ್ಟು ದೂರು ಬಂದಿವೆ. ಎಲ್ಲರೂ ಮೌಖಿಕವಾಗಿ ಹೇಳುತ್ತಾರೆ. ಆದರೆ ಲಿಖಿತವಾಗಿ ಯಾರೂ ದೂರು ಕೊಟ್ಟಿಲ್ಲ. ಬರೀ ಮೌಖಿಕವಾಗಿ ಹೇಳಿದರೆ ಕ್ರಮ ಕೈಗೊಳ್ಳಲು ಆಗುವುದಿಲ್ಲ
-ಶ್ರೀಶೈಲ ಬಿರಾದಾರ,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

*
ಶಿಕ್ಷಕರ ದೂರಿನ ಪತ್ರ ನನಗೆ ತಲುಪಿದೆ. ಆ ಬಗ್ಗೆ ತನಿಖೆ ನಡೆಸುವಂತೆ ಹಾಗೂ ತಪ್ಪು ನಡೆದಿರುವುದು ಸಾಬೀತಾದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡುವೆ
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT