ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿ ಕಾಣದ ರಾಘಾಪೂರ ಗ್ರಾಮ

ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗೆ ಬೇಕಿದೆ ಪರಿಹಾರ
ಎಚ್.ಎಸ್.ಘಂಟಿ
Published 20 ಮಾರ್ಚ್ 2024, 7:16 IST
Last Updated 20 ಮಾರ್ಚ್ 2024, 7:16 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ರಾಘಾಪೂರ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 18 ಕಿ.ಮೀ ದೂರದಲ್ಲಿದೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಗ್ರಾಮದಲ್ಲಿ 400ಕ್ಕೂ ಅಧಿಕ ಮನೆಗಳಿವೆ. 3,400 ಜನಸಂಖ್ಯೆ ಹೊಂದಿದೆ.

ಸಮೀಪದ ಹಂಸನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮ ಇದಾಗಿದ್ದು, ಮೂರ್ನಾಲ್ಕು ಜನ ಗ್ರಾ.ಪಂ ಸದಸ್ಯರಿದ್ದಾರೆ ಆದರೂ ಗ್ರಾಮದಲ್ಲಿ ಯಾವುದೇ ಮಹತ್ವದ ಅಭಿವೃದ್ಧಿ ಕೆಲಸಗಳಾಗಿಲ್ಲ.

ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಇವೆ.

ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಒಂದು ವರ್ಷದಿಂದ ಕೆಟ್ಟು ನಿಂತಿದ್ದು, ಇದುವರೆಗೂ ಅದನ್ನು ಸರಿಪಡಿಸಿಲ್ಲ. ಬೇಸಿಗೆ ಬಂದಿದ್ದರಿಂದ ಶುದ್ದ ಕುಡಿಯುವ ನೀರು ಮರೀಚಿಕೆಯಾಗಿದೆ.

ಹದಗೆಟ್ಟ ಸಿಸಿ ರಸ್ತೆಗಳು: ಗ್ರಾಮದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಸಿ ರಸ್ತೆಗಳಿಲ್ಲ. ಗ್ರಾಮದ ಅಗಸಿ ಮತ್ತು ಶಾಲೆಯ ಮುಂದೆ ಮಾಡಿದ ಸಿಮೆಂಟ್ ರಸ್ತೆ ಕಿತ್ತು ಹಾಳಾಗಿದೆ.

ಬಯಲು ಬಹಿರ್ದೆಸೆ ಇನ್ನೂ ಜೀವಂತ: ಇದುವರೆಗೂ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಮಲ, ಮೂತ್ರ ವಿಸರ್ಜನೆಗೆ ಗ್ರಾಮಕ್ಕೆ ಹೊಂದಿಕೊಂಡು ಗುಡ್ಡ ಇರುವುದರಿಂದ ಗುಡ್ಡವನ್ನೇ ಶೌಚಾಲಯಕ್ಕೆ ಆಶ್ರಯಿಸುವುದು ಕಂಡು ಬಂದಿದೆ.

ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆದು ಕೆಲವರು ಶೌಚಾಲಯ ಕಟ್ಟಿಕೊಂಡಿದ್ದರೂ ಬಳಸಲು ಸಾಧ್ಯವಾಗದಂತೆ ಕಟ್ಟಿಕೊಂಡಿದ್ದಾರೆ. 

ಸರಿಯಾದ ಚರಂಡಿಗಳೇ ಇಲ್ಲ: ಗ್ರಾಮದಲ್ಲಿ ಕೆಲವು ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದಾರೆ. ಆದರೇ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ್ದರಿಂದ ನೀರು ನಿಂತು ಗಬ್ಬು ವಾಸನೇ ಬರುತ್ತದೆ. 

ಗ್ರಾಮದಲ್ಲಿ ದಿನಪೂರ್ತಿ ನೀರು ಒದಗಿಸುವ ಜಲಜೀವನ ಮಿಷನ್‌ ಯೋಜನೆ ಅಡಿಯಲ್ಲಿ ಮನೆ, ಮನೆಗೆ ನಲ್ಲಿ ಅಳವಡಿಸಲಾಗಿದ್ದು, ಅದಕ್ಕೆ ಒಂದೇ ಕೊಳವೆಬಾವಿಯಿಂದ ನೀರು ಹರಿಸಲಾಗುತ್ತಿದೆ. ಕೊಳವೆಬಾವಿಯಲ್ಲಿ ಸರಿಯಾಗಿ ನೀರು ಇರದ ಕಾರಣ ಪರಿಪೂರ್ಣವಾಗಿ ನೀರು ಬರುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಎಲ್ಲೆಂದರಲ್ಲಿ ಕಸ: ಗ್ರಾಮದ ರಸ್ತೆ ಪಕ್ಕ, ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸ ಎಸೆಯುತ್ತಾರೆ. ಅದನ್ನು ನಿರ್ವಹಣೆ ಮಾಡಲು ಗ್ರಾ.ಪಂ ಸಿಬ್ಬಂದಿ ಇಲ್ಲದ್ದರಿಂದ ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ಇದೆ.

ಹಾಳಾದ ಅಂಗನವಾಡಿ ಶೌಚಾಲಯ: ಗ್ರಾಮದ ಅಂಗನವಾಡಿ ಮುಂದೆ ಮಕ್ಕಳಿಗಾಗಿ ಶೌಚಾಲಯ ಕಟ್ಟಿಲಾಗಿದೆ ಆದರೆ, ದುರಸ್ತಿಯಲ್ಲಿರುವುದರಿಂದ ಮಕ್ಕಳು ಬಯಲಲ್ಲೇ ಶೌಚ ಮಾಡುವಂತಾಗಿದೆ.

20 ವರ್ಷಗಳಿಂದ ಕೆನಾಲ್‍ಗೆ ನೀರು ಬಂದಿಲ್ಲ: ಗ್ರಾಮದ ಪಕ್ಕ ನೀರಾವರಿಗಾಗಿ 20 ವರ್ಷಗಳ ಹಿಂದೆ ಮಲಪ್ರಭಾ ಎಡದಂಡೆಯ ಮೂಲಕ ಕೆನಾಲ್ ನಿರ್ಮಿಸಿ ನೀರು ಹರಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, 20 ವರ್ಷವಾದರೂ ನೀರು ಬಂದಿಲ್ಲವೆಂದು ಗ್ರಾಮದ ಸಂಗಪ್ಪ ಗಂಜಿಹಾಳ ಹೇಳುತ್ತಾರೆ.

ಗುಳೇ ಹೊರಟ ಜನರು: ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಕಾಪು ಹಾಗೂ ಉಡುಪಿಗೆ ಪ್ರತಿ ವರ್ಷ ಉದ್ಯೋಗ ಅರಸಿ ಗುಳೇ ಹೋಗುತ್ತಾರೆ. ಕೆಲವರು ಗುಳೇ ಹೋದಲ್ಲಿಯೇ ಮನೆ ಮಾಡಿಕೊಂಡು ಶಾಶ್ವತವಾಗಿ ಅಲ್ಲಿಯೇ ವಾಸವಾಗಿದ್ದಾರೆ.

ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ: ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘವಿದೆ. ಅಲ್ಲಿ ಉತ್ತಮವಾದ ಹಾಲನ್ನು ಸಂಗ್ರಹಿಸಲಾಗುತ್ತದೆ. ಹೈನುಗಾರಿಕೆಗೆ ಮಹಿಳೆಯರು ಶ್ರಮಿಸುತ್ತಿರುವುದು ವಿಶೇಷ.

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಮೇರೆ ನೀರು ಹರಿಯಿತು
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಮೇರೆ ನೀರು ಹರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT