ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ತೋಟಗಾರಿಕೆ ಬೆಳೆಗಳಿಗೆ ಬೇಕಿದೆ ಮಾರುಕಟ್ಟೆ

ರಸ್ತೆ ಬದಿಗಳಲ್ಲಿ ಮಾರಾಟ ಮಾಡಬೇಕಾದ ಸ್ಥಿತಿ
Published 4 ಫೆಬ್ರುವರಿ 2024, 5:02 IST
Last Updated 4 ಫೆಬ್ರುವರಿ 2024, 5:02 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಲ್ಲಿ ಹೆಸರು ಮಾಡಿದೆ. ದಾಳಿಂಬೆ, ಸಪೋಟ, ಅರಿಸಿನ, ಪೇರಲ, ಪಪ್ಪಾಯಿ, ಲಿಂಬೆ, ವೀಳ್ಯದೆಲೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ, ಸೂಕ್ತ ಮಾರುಕಟ್ಟೆ ದೊರೆಯದ್ದರಿಂದ ರಸ್ತೆ ಬದಿ ನಿಂತು ಮಾರಾಟ ಮಾಡುವ ಸ್ಥಿತಿ ಇದೆ.

ಕಲಾದಗಿ ಗ್ರಾಮದ ಸುತ್ತ ದಾಳಿಂಬೆ ಹಾಗೂ ಸಪೋಟ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ದಾಳಿಂಬೆ ಬೆಳೆಗೆ ತಗಲುವ ವಿವಿಧ ರೋಗಗಳನ್ನು ನಿಭಾಯಿಸಲಾಗದೇ ಸಾಕಷ್ಟು ರೈತರು ದಾಳಿಂಬೆ ಬೆಳೆಯಿಂದ ದೂರ ಸರಿಯುತ್ತಿದ್ದಾರೆ. ಹೊಸ ಬೆಳೆಗಾರರು ಸೇರ್ಪಡೆಗೊಳ್ಳುತ್ತಿದ್ದಾರೆಯಾದರೂ, ಒಟ್ಟಾರೆ ಬೆಳೆಯುವ ಪ್ರಮಾಣದಲ್ಲಿ ಕಡಿಮೆ ಆಗಿದೆ.

ಕಲಾದಗಿಯಲ್ಲಿ ಕೆಲ ವರ್ಷಗಳ ಹಿಂದೆ ಹಣ್ಣು ಬೆಳೆಗಾರರ ಸಂಘ ಆರಂಭಿಸಲಾಗಿದೆ. ಅದು ಲಾಭದಲ್ಲಿಯೂ ನಡೆಯುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಣ್ಣು ಖರೀದಿಯಲ್ಲಿ ಹಿಂದೆ ಬಿದ್ದು, ಅನ್ಯ ಚಟುವಟಿಕೆಗಳು ನಡೆಯುತ್ತಿವೆ. ಭಾಗವಾನ ಗ್ರೂಪ್‌ ಮರ್ಚಂಟ್ಸ್ ಹೆಸರಿನ ಸಂಘ ತಲೆ ಎತ್ತಿದ್ದು, ಅಲ್ಲಿ ಖರೀಯಾಗುತ್ತಿದೆ. ಜಿಲ್ಲೆಯ ರೈತರನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆ ಸ್ಥಾಪಿಸುವ ಕೆಲಸ ಆಗಿಲ್ಲ. ಇ–ಟೆಂಡರ್‌ ಮೂಲಕ ಮಾರಾಟ ಮಾಡುವಂತಹ ವ್ಯವಸ್ಥೆಯಾದರೆ ಉತ್ತಮ ಬೆಲೆ ದೊರೆಯಬಹುದು.

ಇಲ್ಲಿನ ಲಿಂಬೆಯನ್ನು ಪ್ರತಿ ಮಂಗಳವಾರ, ಶುಕ್ರವಾರ ಬೆಳಗಾವಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಪೇರಲಕ್ಕೆ ಗದಗ ಜಿಲ್ಲೆಯ ಕೊಣ್ಣೂರಿನಲ್ಲಿ ಮಾರುಕಟ್ಟೆಯಿದೆ. ಆದರೆ, ಅಲ್ಲಿಗೆ ಒಯ್ಯಲು ಸಾಧ್ಯವಾಗದವರು ಸ್ಥಳೀಯ ಸಂತೆಗಳಲ್ಲಿಯೇ ಮಾರಾಟ ಮಾಡುತ್ತಾರೆ. ಹಣ್ಣು ಹಾಗೂ ಜ್ಯೂಸ್‌ ಅಂಗಡಿಗಳವರಿಗೂ ಮಾರುತ್ತಾರೆ.

ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ರೈತರು ಒಣ ಮೆಣಸಿನಕಾಯಿ ಬೆಳೆಯಲಾರಂಭಿಸಿದ್ದಾರೆ. 11 ಸಾವಿರ ಎಕರೆ ಪ್ರದೇಶದಲ್ಲಿ ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿಯ ವಿವಿಧ ತಳಿಗಳನ್ನು ಕಾಣಬಹುದಾಗಿದೆ.  ಹುನಗುಂದ ತೋಟಗಾರಿಕಾ ರೈತ ಉತ್ಪಾದಕ ಸಂಸ್ಥೆಯ ಮೂಲಕ ಕೆಲವರು ಮೆಣಸಿನಕಾಯಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. 

ಬಾಗಲಕೋಟೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಖರೀದಿಸುವ ಯತ್ನ ಮಾಡಲಾಯಿತು. ಆದರೆ, ಅದಕ್ಕೆ ಉತ್ತಮ ಸ್ಪಂದನೆ ದೊರೆಯಲಿಲ್ಲ. ಮುಂದಿನ ವರ್ಷದೊಳಗೆ ಆದರೂ ರೈತರು ಹಾಗೂ ಖರೀದಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಖರೀದಿ ಮಾಡುವ ಕೆಲಸ ಆರಂಭವಾಗಬೇಕಿದೆ. ಇದರಿಂದ ರೈತರು ಸಾರಿಗೆ ವೆಚ್ಚ ಉಳಿಯಲಿದೆಯಲ್ಲದೇ, ಸ್ಥಳೀಯವಾಗಿ ಉತ್ತಮ ಬೆಲೆಯಿದ್ದಾಗ ಮಾರಾಟ ಮಾಡಬಹುದಾಗಿದೆ.

ತೋಟಗಾರಿಕೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದಲೇ ಇಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯವು ರೈತರೊಂದಿಗೆ ಮಾಡಿದ ಕಾರ್ಯಕ್ರಮಕ್ಕಿಂತ ನೇಮಕಾತಿ ಸಂದರ್ಭದಲ್ಲಿ ಉಂಟಾದ ವಿವಾದದಿಂದಲೇ ಹೆಚ್ಚು ಸದ್ದು ಮಾಡಿದೆ. ಕೆಲವು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಆಗಾಗ ರೈತರಿಗಾಗಿ ಬೆಳೆ ಕ್ಷೇತ್ರೋತ್ಸವ, ತರಬೇತಿ, ಕಾರ್ಯಾಗಾರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ರೈತರ ಬೆಳೆಗಳ ಮೌಲ್ಯವರ್ಧನೆಯ ಕೆಲಸ ಆಗಿಲ್ಲ. ಸಂಶೋಧನೆಯ ಲಾಭವೂ ರೈತರಿಗೆ ದಕ್ಕಿಲ್ಲ.

ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದಿರುವುದರಿಂದ ಬಹುತೇಕರು ಈಗಲೂ ಬ್ಯಾಡಗಿ ಅಥವಾ ಹುಬ್ಬಳ್ಳಿ ಮಾರುಕಟ್ಟೆಗೆ ಮೆಣಸಿಕಾಯಿ ತೆಗೆದುಕೊಂಡು ಹೋಗಬೇಕಾಗಿದೆ
- ಶಿವಾನಂದ ಹಡಗಲಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT