ಇಳಕಲ್: ‘ವಸತಿ ನಿಲಯದ ಅವ್ಯವಸ್ಥೆ, ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಾರ್ಡನ್‌ಗೆ ಹೇಳಿದರೆ, ಅವರು ಅನಗತ್ಯವಾಗಿ ನಮ್ಮ ಚಾರಿತ್ರ್ಯ ವಧೆ ಮಾಡುತ್ತಾರೆ. ನಮ್ಮಗಳ ಮನೆಗೆ ಕರೆ ಮಾಡಿ, ನಮ್ಮ ತಂದೆ-ತಾಯಿಗೆ ಸುಳ್ಳು ಹೇಳುತ್ತಾರೆ. ಅಪವಾದ ಹೊರಿಸುತ್ತಾರೆ’ ಎಂದು ನಗರದ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಆರೋಪಿಸಿದರು.
ನಗರದ ಹೊರವಲಯದಲ್ಲಿರುವ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭಾನುವಾರ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಅಳಲು ತೊಡಿಕೊಂಡರು.
‘ಫ್ಯಾನ್ ಕೆಟ್ಟು ಹೋಗಿದೆ ಮಾಡಿಸಿ ಎಂದು ಮನವಿ ಮಾಡಿದರೆ, ಒಂದು ತಿಂಗಳು ರಿಪೇರಿ ಮಾಡಸಲಾಗುವುದಿಲ್ಲ ಎನ್ನುತ್ತಾರೆ. ಇಲ್ಲಿಯ ಸಮಸ್ಯೆಗಳ ಬಗ್ಗೆ ಹೇಳಿ ಸಾಕಾಗಿದೆ. ಸುಮ್ಮನೆ ಇರಬೇಕಾದ ಸ್ಥಿತಿ ಬಂದಿದೆ. ಊಟವು ಕಳಪೆಯಾಗಿರುತ್ತದೆ. ನೀರಿನ ತೊಂದರೆ ಇದೆ. ಕೊಠಡಿಗಳಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ’ ಎಂದು ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ತೆಗೆದ ಫೋಟೊಗಳನ್ನು ಶಾಸಕರಿಗೆ ತೋರಿಸಿದರು.
‘ನಮಗೆಲ್ಲಾ ತೊಂದರೆ ನೀಡುತ್ತಿರುವ ವಾರ್ಡನ್ ಅವರನ್ನು ಬದಲಾವಣೆ ಮಾಡಿ, ನಮಗೆ ನೆಮ್ಮದಿಯಿಂದ ಇರಲು ಹಾಗೂ ಓದಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿಕೊಂಡರು.
ವಿದ್ಯಾರ್ಥಿನಿಯರ ಅಹವಾಲುಗಳನ್ನು ಆಲಿಸಿದ ಶಾಸಕರು, ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿ, ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸುವುದು, ಸಮಸ್ಯೆಗಳನ್ನು ಬಗೆ ಹರಿಸುವುದು ಅಧಿಕಾರಿಗಳ ಕೆಲಸ, ಕೇವಲ ಕಚೇರಿಗಳಲ್ಲಿ ಕುಳಿತುಕೊಳ್ಳುವುದು ಹಾಗೂ ಸಮಸ್ಯೆಗಳು ಕಂಡು ಕಾಣದಂತಿರುವುದು ಸರಿಯಲ್ಲ. ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ಬದಲಿಸಿ. ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆಗೆ ಕಾರಣವಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ. ಆದಷ್ಟು ಬೇಗ ಹಾಸ್ಟೇಲ್ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.