ಹುನಗುಂದ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ)ಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಜಡಿಯಪ್ಪಗೌಡ ಮತ್ತು ಉಪಾಧ್ಯಕ್ಷರಾಗಿ ಪ್ರಭಾಕರ ನಾಗರಾಳ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಚಿಕ್ಕಆದಾಪೂರ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಿವನಗೌಡ ಭೀಮನಗೌಡ ಜಡಿಯಪ್ಪಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಮೀನಗಡ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪ್ರಭಾಕರ ಸಿದ್ರಾಮಪ್ಪ ನಾಗರಾಳ ನಾಮಪತ್ರ ಸಲ್ಲಿಸಿದರು.
ಬೇರೆ ಯಾರೂ ನಾಮಪತ್ರ ಸಲ್ಲಿಸದ್ದರಿಂದ ನಾಮಪತ್ರ ಸಲ್ಲಿಸಿದ ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಮುರುಳೀಧರ ದೇಶಪಾಂಡೆ ಘೋಷಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹತ್ತು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು. ಅವುಗಳಲ್ಲಿನ 3-4 ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಇರಲಿಲ್ಲ. ಇನ್ನುಳಿದ ಕಡೆ ನಾಮಪತ್ರ ಸಲ್ಲಿಸಿದವರು ಹಿಂಪಡೆದರು. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಗತಿ ಎಲ್ಲಿಗೆ ಬಂದಿದೆ ಎಂಬುದು ತಿಳಿಯುತ್ತದೆ’ ಎಂದು ಹೇಳಿದರು.
‘ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ ಅವರು ರೈತರಿಗೆ ನ್ಯಾಯ ಕೊಡುವ ಕೆಲಸ ಮಾಡಲಿಲ್ಲ. ರೈತರ ಷೇರುಗಳನ್ನು ತಗೆದು ಹಾಕುವುದು, ರೈತರಿಗೆ ಒಂದು ರೂಪಾಯಿ ಲಾಭ ಕೊಟ್ಟಿಲ್ಲ’ ಎಂದರು.
ಶಿಥಿಲಾವ್ಯವಸ್ಥೆಯಲ್ಲಿರುವ ಬ್ಯಾಂಕಿನ ಕಟ್ಟಡವನ್ನು ಸರ್ಕಾರದಿಂದ ಅನುದಾನ ತಂದು ಹೊಸ ಕಟ್ಟಡ ನಿರ್ಮಿಸುವುದಾಗಿ ಭರವಸೆ ನೀಡಿದರು.
ಗಂಗಾಧರ ದೊಡ್ಡಮನಿ, ಚನ್ನಪ್ಪಗೌಡ ನಾಡಗೌಡ್ರ, ಮುತ್ತಣ್ಣ ಕಲಗೋಡಿ, ಬಿ.ಎ. ಆವಟಿ, ಮಾಧವ ದೇಶಪಾಂಡೆ, ಸಿದ್ಧು ಭದ್ರಶೆಟ್ಟಿ, ಸಂಗಣ್ಣ ಚೂರಿ ಹಾಗೂ ಪಿಎಲ್ ಡಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಿದ್ದರು.