ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ರಸ್ತೆ ಸರಿಪಡಿಸದಿದ್ದರೆ ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ ಜಾನಕಿ ಸೂಚನೆ

Published 11 ಜುಲೈ 2023, 16:06 IST
Last Updated 11 ಜುಲೈ 2023, 16:06 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಇತರೆ ಸಾವು-ನೋವುಗಳಿಗಿಂತ ರಸ್ತೆ ಅಪಘಾತದ ಸಾವಿನ ಸಂಖ್ಯೆ ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಸ್ತೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಎಲ್ಲಿಯೂ ರಾಜಿ ಮಾಡಿಕೊಳ್ಳುವಂತಿಲ್ಲ. ಅವೈಜ್ಞಾನಿಕ ತಿರುವುಗಳು ಮತ್ತು ರಸ್ತೆ ನಿರ್ಮಾಣದಿಂದ ಅಮಾಯಕರ ಜೀವಹಾನಿತಾದ ವರದಿಗಳು ಇವೆ. ಅವುಗಳ ತೆರವಿಗೆ ಕ್ರಮಕೈಗೊಳ್ಳಬೇಕು’ ಎಂದರು.

‘ಅಪಘಾತಗಳನ್ನು ತಡೆಯಲು ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಾಣ, ಗುಣಮಟ್ಟದ ಹೈ ಮಾಸ್ಟ್ ದೀಪಗಳು, ರಿಫ್ಲೆಕ್ಟರ್ ಹಾಗೂ ಸೈನ್ ಬೋರ್ಡ್ ಅಳವಡಿಸುವ ಕಾರ್ಯಗಳು ಆಗಬೇಕು’ ಎಂದು ಹೇಳಿದರು.

‘ಹುನಗುಂದ ತಾಲ್ಲೂಕಿನ ಬಾಣಂತಿಕೊಳ್ಳದಲ್ಲಿ ಹೆಚ್ಚು ಅಪಘಾತಗಳಾಗಿರುವ ವರದಿ ಇದ್ದು, ಅಲ್ಲಿನ ರಸ್ತೆ  ಸರಿಪಡಿಸಬೇಕು. ಹೆಚ್ಚು ಅಪಘಾತವಾದ ರಸ್ತೆಗಳ ಪಟ್ಟಿಮಾಡಿ, ಆದ್ಯತೆ ಮೇರೆಗೆ ಸರಿಪಡಿಸಬೇಕು. ಇಲ್ಲದಿದ್ದಲ್ಲಿ, ಆಯಾ ರಸ್ತೆ ಪ್ರಾಧಿಕಾರದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು’ ಎಂದು ಎಚ್ಚರಿಸಿದರು.

‘ಜನರಲ್ಲಿ ರಸ್ತೆ ಸುರಕ್ಷತೆಯ ಅರಿವು ಕಡಿಮೆ ಇದ್ದು, ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಹೇಳಿದರು.

ಡಿವೈಎಸ್‍ಪಿ ಪ್ರಸನ್ನ ದೇಸಾಯಿ ಮಾತನಾಡಿ, ‘ಜಿಲ್ಲೆಯಲ್ಲಿ 2021ರಲ್ಲಿ 802 ರಸ್ತೆ ಅಪಘಾತಗಳು ಸಂಭವಿಸಿದ್ದು, 343 ಜನ ಮೃತರಾದರೆ, 1,069 ಜನ ಗಾಯಾಳುಗಳಾಗಿದ್ದಾರೆ. 2022ರಲ್ಲಿ 900 ರಸ್ತೆ ಅಪಘಾತಗಳಾಗಿದ್ದು, 379 ಮೃತರಾಗಿದ್ದು, 1,280 ಜನ ಗಾಯಗೊಂಡಿದ್ದಾರೆ.2023ರ ಜೂನ್ ಅಂತ್ಯದವರೆಗೆ 449 ರಸ್ತೆ ಅಪಘಾತಗಳು ಸಂಭವಿಸಿ, 195 ಜನ ಮೃತರಾಗಿದ್ದು, 673 ಗಾಯಾಳುಗಳಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಲೋಕಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಕಡಿವಾಲ, ಆರ್‌ಟಿಒ ಆರ್.ಎಲ್. ಹೊಸಮನಿ ಇದ್ದರು.

ಎರಡೂವರೆ ವರ್ಷದಲ್ಲಿ 915 ಜನರ ಸಾವು ಜನರಲ್ಲಿ ಜಾಗೃತಿ ಮೂಡಿಸಲು ನಿರ್ದೇಶನ ಅಪಘಾತ ತಡೆಗೆ ಕ್ರಮವಹಿಸಲು ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT