ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಬಿತ್ತನೆ ಬೀಜ ಬೆಲೆ ಹೆಚ್ಚಳ; ರೈತರಿಗೆ ಹೊರೆ

Published 23 ಮೇ 2024, 6:30 IST
Last Updated 23 ಮೇ 2024, 6:30 IST
ಅಕ್ಷರ ಗಾತ್ರ

ಬಾಗಲಕೋಟೆ/ಹುನಗುಂದ: ಮುಂಗಾರು ಪೂರ್ವ ಉತ್ತಮ ಮಳೆ ಆಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಆದರೆ, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಿಸುವ ಬಿತ್ತನೆ ಬೀಜಗಳ ಬೆಲೆ ಹೆಚ್ಚಿಸಿದ್ದು ಸಂಕಷ್ಟಕ್ಕೆ ದೂಡಿದೆ.

ಬಿತ್ತನೆ ಬೀಜದಿಂದ ಬೀಜಕ್ಕೆ ದರ ಹೆಚ್ಚಳದಲ್ಲಿ ವ್ಯತ್ಯಾಸವಿದ್ದು, ಪ್ರತಿ ಕೆಜಿಗೆ ₹14 ರಿಂದ ₹61ರವರೆಗೆ ಹೆಚ್ಚಳವಾಗಿದೆ. ಆದರೆ, ರೈತರಿಗೆ ನೀಡುವ ರಿಯಾಯಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವರುಣನ ಅವಕೃಪೆಗೆ ತುತ್ತಾಗಿದ್ದ ರೈತರಿಗೆ, ಈಗ ಬೀಜಗಳ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.

ತೊಗರಿ, ಹೆಸರು ಮುಂತಾದ ಬೀಜಗಳು 5 ಕೆಜಿ ಚೀಲ ಬರುತ್ತಿದ್ದು, ಅವುಗಳ ದರ ನೂರಾರು ರೂಪಾಯಿ ಏರಿಕೆ ಆಗಿದೆ. 5 ಎಕರೆವರೆಗೆ ಮಾತ್ರ ರಿಯಾಯ್ತಿ ನೀಡಲಾಗುತ್ತಿದ್ದು, ಉಳಿದ ಬೀಜಗಳನ್ನು ಮಾರುಕಟ್ಟೆ ದರದಲ್ಲೇ ಖರೀದಿಸಬೇಕು.

ಸೂರ್ಯಕಾಂತಿ ಬೀಜದ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಪ್ರತಿ ಕೆಜಿಗೆ ₹ 940ಕ್ಕೆ ನೀಡಲಾಗುತ್ತಿದೆ. ಸೋಯಾ ಅವರೆ ಬೆಲೆಯಲ್ಲಿ ಪ್ರತಿ ಕೆಜಿಗೆ ₹6, ಹೈಬ್ರಿಡ್ ಜೋಳ ₹7 ಕಡಿಮೆ ಆಗಿದೆ. ಉಳಿದ ಎಲ್ಲ ಬೀಜಗಳ ಬೆಲೆಯಲ್ಲಿ ಏರಿಕೆ ಆಗಿದೆ.

ಸಾಮಾನ್ಯ ರೈತರಿಗೆ ಹೆಸರು, ಉದ್ದು, ತೊಗರಿ, ಸಜ್ಜೆ, ಸೋಯಾ ಅವರೆ ಪ್ರತಿ ಕೆಜಿಗೆ ₹25, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ₹37.50, ಮೆಕ್ಕೆಜೋಳ ಸಾಮಾನ್ಯ ರೈತರಿಗೆ ₹20, ಪರಿಶಿಷ್ಟ ಜಾತಿ, ಪಂಗಡದವರಿಗೆ ₹30, ಸೂರ್ಯಕಾಂತಿ ಸಾಮಾನ್ಯ ರೈತರಿಗೆ ₹80, ಎಸ್‌ಸಿ, ಎಸ್‌ಟಿ ರೈತರಿಗೆ ₹120, ಶೇಂಗಾ ಸಾಮಾನ್ಯ ರೈತರಿಗೆ ₹14, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ₹21 ರಿಯಾಯಿತಿ ನೀಡಲಾಗುತ್ತದೆ.

ಕಳೆದ ವರ್ಷ ಸ್ಪ್ರಿಂಕ್ಲರ್ ಪೈಪ್ ಮತ್ತು ಉಪಕರಣಗಳ ದರ ಹೆಚ್ಚಿಸಲಾಗಿತ್ತು. ಈಗ ಬಿತ್ತನೆ ಬೀಜಗಳ ಬೆಲೆ ಹೆಚ್ಚಿಸಲಾಗಿದೆ. ಮುಂದೆ ಮಳೆ ಹೇಗೂ ಎನ್ನುವ ರೈತರಿಗೆ ಬೆಲೆ ಹೆಚ್ಚಳ ಹೊಸ ಹೊರೆಯಾಗಿಸಿದೆ.

‘ಬರಗಾಲದಿಂದ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಬೀಜಗಳ ದರ ಹೆಚ್ಚಳ ಮಾಡಿರುವುದು ರೈತರ ಸಂಕಷ್ಟ ಹೆಚ್ಚಿಸಲಿದೆ. ಸರ್ಕಾರ ಕೂಡಲೇ ಬೀಜಗಳ ದರವನ್ನು ಕಡಿಮೆ ಮಾಡಬೇಕು’ ಎಂದು ನವ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಹೊಂಗಲ್‌ ಆಗ್ರಹಿಸಿದರು.

ಬಿತ್ತನೆ ಬೀಜಗಳ ದರ ನಿಗದಿ ನಮ್ಮ ಹಂತದಲ್ಲಿ ಆಗುವುದಿಲ್ಲ. ರಾಜ್ಯ ಮಟ್ಟದಲ್ಲಿ ಆಗುತ್ತದೆ. ಟೆಂಡರ್ ಕರೆದು ದರ ನಿಗದಿ ಮಾಡಲಾಗುತ್ತದೆ.
–ಸೋಮಲಿಂಗಪ್ಪ ಅಂಟರಠಾಣಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಹುನಗುಂದ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT