ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ | ನೈಸರ್ಗಿಕ ಮಾವಿಗೆ ಹೆಚ್ಚಿದ ಬೇಡಿಕೆ

ಜವಾರಿ ಮಾವಿನ ಹಣ್ಣಿನ ಸಂಖ್ಯೆ ಕ್ಷೀಣ: ಕಡಿಮೆ ಇಳುವರಿ, ದರ ಹೆಚ್ಚಳ
ಎಸ್.ಎಂ. ಹಿರೇಮಠ
Published 14 ಮೇ 2024, 4:22 IST
Last Updated 14 ಮೇ 2024, 4:22 IST
ಅಕ್ಷರ ಗಾತ್ರ

ಬಾದಾಮಿ: ನಾಲ್ಕೈದು ದಶಕಗಳ ಹಿಂದೆ ಪಟ್ಟಣದಲ್ಲಿ ಸಂಚರಿಸುವಾಗ ಇಡೀ ಓಣಿಯಲ್ಲಿ ಮಾವಿನ ಹಣ್ಣಿನ ಘಮ ಹರಿದಾಡುತ್ತಿತ್ತು. ಆದರೆ ಈಗ ಅದೆಲ್ಲ ಮಾಯವಾಗಿದೆ.

ಜವಾರಿ ಮಾವಿನ ಹಣ್ಣು ಬಲು ರುಚಿ. ಅಂಥ ಮಾವಿನ ಗಿಡಗಳ ಸಂಖ್ಯೆಯೇ ಇಂದು ವಿರಳವಾಗಿದೆ. ಈಗ ನೀರಾವರಿ ಇದ್ದ ರೈತರು ತಮ್ಮ ಹೊಲದಲ್ಲಿ ಆಪೂಸ್, ಕೇಸರ್, ಮಲ್ಲಿಕಾ, ಗೋವಾ ಮತ್ತಿತರ ತಳಿಯ ಮಾವಿನ ಗಿಡಗಳನ್ನು ನೆಟ್ಟಿದ್ದಾರೆ.

ಮಾವಿನ ಹಣ್ಣಿನ ಮಾರಾಟದ ವರ್ತಕರು ಈಗ ಹೊಸ ತಳಿಯ ಬೇನಿಷ್, ಬದಾಮ್‌, ದಸಗೇರಿ, ಕೇಸರ್, ಆಪೂಸ್, ಮಲ್ಲಿಕಾ ಕಾಯಿಗಳನ್ನು ತಂದು ಹುಲ್ಲಿನಲ್ಲಿ ಅಡವಿ (ಭಟ್ಟಿ) ಹಾಕುತ್ತಿದ್ದಾರೆ. ನೈಸರ್ಗಿಕವಾಗಿ ಹಣ್ಣು ಮಾಡಿ ಗ್ರಾಹಕರಿಗೆ ಕೊಡುತ್ತಿದ್ದಾರೆ.

ಇಲ್ಲಿನ ಮ್ಯುಜಿಯಂ ರಸ್ತೆಯಲ್ಲಿ ಹೋಗುವಾಗ ಮಾವಿನ ಹಣ್ಣಿನ ಘಮಲು ನಮ್ಮ ಗಮನ ಸೆಳೆಯುತ್ತದೆ. ವರ್ತಕ ನೂರಸಾಬ್ ಬಾಗವಾನ ಮನೆಯೊಂದರಲ್ಲಿ ವೈವಿಧ್ಯಮಯ ಮಾವಿನ ಹಣ್ಣುಗಳನ್ನು ಹುಲ್ಲಿನಲ್ಲಿ ಅಡವಿ (ಭಟ್ಟಿ) ಹಾಕಿ ನೈಸರ್ಗಿಕವಾಗಿ ಹಣ್ಣು ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಬಾದಾಮಿ ತಾಲ್ಲೂಕಿನಲ್ಲಿ 92 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹೊಸ ತಳಿಯ ಮಾವಿನ ಗಿಡಗಳನ್ನು ನೆಟ್ಟಿದ್ದಾರೆ. ಅಧಿಕ ಬಿಸಿಲಿನಿಂದ ಈ ಬಾರಿ ಇಳುವರಿ ಕಡಿಮೆ ಬಂದಿದೆ. ಕಾಯಿಯ ಗಾತ್ರವೂ ಚಿಕ್ಕದಾಗಿದೆ.
ಬಾಲನಗೌಡ ಪಾಟೀಲ, ಪ್ರಭಾರ ಸಹಾಯಕ ನಿರ್ದೇಶಕ, ತೋಟಗಾರಿಗೆ ಇಲಾಖೆ

‘ನನ್ನ ತಂದೆ ಲಾಲಸಾಬ್ ಬಾಗವಾನ ಐದು ದಶಕಗಳಿಂದ ಮಾವಿನ ಹಣ್ಣಿನ ಸೀಜನ್‌ನಲ್ಲಿ ಉತ್ತಮ ತಳಿಯ ಮಾವಿನ ಕಾಯಿಯನ್ನು ತಂದು ಹುಲ್ಲಿನಲ್ಲಿ ಭಟ್ಟಿ ಹಾಕಿ ಗ್ರಾಹಕರಿಗೆ ಕೊಡುತ್ತಿದ್ದರು. ಇದೇ ಉದ್ಯೋಗವನ್ನು ನಾವೂ ಮುಂದುರೆಸಿಕೊಂಡು ಬಂದಿದ್ದೇವೆ. ಉತ್ತಮ ವ್ಯಾಪಾರ ಇದೆ’ ಎಂದು ನೂರಸಾಬ್ ಹೇಳಿದರು.

‘ಇಳುವರಿ ಕಡಿಮೆ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಹಣ್ಣಿನ ದರ ಸ್ವಲ್ಪ ಹೆಚ್ಚಾಗಿದೆ. ಹೀಗಿದ್ದರೂ ಖರೀದಿದಾರರೇನು ಕಡಿಮೆಯೇನಿಲ್ಲ’ ಎಂದರು.

‘ವರ್ಸಾ ಮಾವಿನ ಹಣ್ಣು ಇಲ್ಲೇ ತೊಗೊಂತೀವಿ. ಹಣ್ಣು ರುಚಿಕಟ್ಟಾಗಿರತೈತಿ. ಎರಡು ಮೂರು ದಿನ ಇಟ್ಟರೂ ಕೆಡೂದಿಲ್ಲರಿ’ ಎಂದು ಸಂಗಮೇಶ ಚೌದರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT