ಶನಿವಾರ, ಜನವರಿ 18, 2020
20 °C
ತೋಟಗಾರಿಕೆಯ ಸಮ್ಮೇಳನದಲ್ಲಿ ಕುಲಪತಿ ಡಾ. ಕೆ.ಎಂ.ಇಂದರೇಶ ಸಲಹೆ

ಸಂಶೋಧನೆ ರೈತರನ್ನು ತಲುಪಲಿ : ತೋಟಗಾರಿಕೆ ವಿವಿ ಕುಲಪತಿ ಡಾ.ಇಂದಿರೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ‘ತೋಟಗಾರಿಕೆಯಲ್ಲಿ ಆಗಿರುವ ಹೊಸ ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳು ರೈತರಿಗೆ ತಲುಪಿಸುವ ಮೂಲಕ ತೋಟಗಾರಿಕೆಗೆ ಉತ್ತೇಜನ ನೀಡಬೇಕು’ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ ನುಡಿದರು.

ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಆತಿಥ್ಯದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಡಾ.ಎನ್.ಸಿ.ಹುಲಮನಿ ವೇದಿಕೆಯಲ್ಲಿ ಏರ್ಪಡಿಸಿದ್ದ ‘ತೋಟಗಾರಿಕಾ ಸುಸ್ಥಿರತೆ ಹಾಗೂ ಪೌಷ್ಟಿಕ ಭದ್ರತೆ’ ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪೂರಕವಾದ ಮಣ್ಣು, ಉತ್ತಮ ಹವಾಗುಣವಿದೆ. ವಿಜ್ಞಾನಿಗಳು ತೋಟಗಾರಿಕೆಯ ಬೆಳೆಗಳ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ, ತರಬೇತಿ ಮೂಲಕ ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

‘ತೋಟಗಾರಿಕೆ ವಿಷಯದಲ್ಲಿ ಸಾಕಷ್ಟು ಯುವಕರು ಪದವಿ ಮುಗಿಸಿ, ನೌಕರಿಗಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಸೇರುತ್ತಿದ್ದಾರೆ. ಅದರಿಂದ ಅವರು ಕಲಿತ ಜ್ಞಾನವು ತೋಟಗಾರಿಕೆಗೆ ಸಿಗುತ್ತಿಲ್ಲ, ರೈತರನ್ನೂ ತಲುಪುತ್ತಿಲ್ಲ’ ಎಂದು ವಿಷಾದಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎ.ಪಾಟೀಲ ಮಾತನಾಡಿ, ‘ಬೀಜೋತ್ಪಾದನೆಯು ಅಲಕ್ಷ್ಯವಾಗುತ್ತಿದೆ. ತೋಟಗಾರಿಕೆ ಪದವೀಧರರು ಬೀಜೋತ್ಪಾದನೆಯಲ್ಲಿ ತೊಡಗುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು’ ಎಂದರು.

‘ಭಾರತದಲ್ಲಿ ಮನುಷ್ಯನ ಬದುಕುವ ಅವಧಿಯು ಅಂದಾಜು 67 ವಯಸ್ಸಿದೆ. ಹಣ್ಣು– ತರಕಾರಿಗಳ ಸೇವನೆ ಇದಕ್ಕೆ ಮುಖ್ಯ ಕಾರಣ. ಆ 84 ವಯಸ್ಸು ಆಗಬೇಕಾದರೆ ತೋಟಗಾರಿಕೆ ಬೆಳೆಗಳ ಪೌಷ್ಟಿಕ ಭದ್ರತೆಗೆ ಒತ್ತು ನೀಡುವ ಅಗತ್ಯವಿದೆ’ ಎಂದರು.

‘ಸಿಹಿ ಗೆಣಸು ಮತ್ತು ಆಲೂಗಡ್ಡೆ ಉತ್ಪಾದನೆ’ ಮತ್ತು ‘ಬೀಜ ಸಾಂಬಾರು ಬೆಳೆಗಳ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಡಾ.ಬಿ.ಎಸ್. ಸತ್ಯನಾರಾಯಣ ರೆಡ್ಡಿ, ಡಾ.ಕೆ.ರಾಮಚಂದ್ರ ನಾಯ್ಕ, ಡಾ. ಬಸವರಾಜ ಎನ್, ಡಾ.ವೈ.ಕೆ. ಕೋಟಿಕಲ, ಡಾ. ಎಸ್.ಐ. ಅಥಣಿ, ಡಾ.ಟಿ.ಬಿ.ಅಲ್ಲೋಳಿ, ಡಾ.ಛಾಯಾ ಪಾಟೀಲ, ಡಾ. ಆರ್.ಸಿ. ಜಗದೀಶ ವೇದಿಕೆಯಲ್ಲಿದ್ದರು.

ದೇಶದ ವಿವಿಧೆಡೆಯಿಂದ 200ಕ್ಕೂ ಅಧಿಕ ವಿಜ್ಞಾನಿಗಳು, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
ಮಹಾವಿದ್ಯಾಲಯದ ಡೀನ್ ಡಾ.ನಾಗೇಶ ನಾಯ್ಕ್ ಸ್ವಾಗತಿಸಿದರು, ಶ್ರೀದೇವಿ ನಿರೂಪಿಸಿದರು, ಡಾ. ಸಿ.ಎನ್. ಹಂಚಿನಮನಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು