ಮಂಗಳವಾರ, ನವೆಂಬರ್ 30, 2021
20 °C
ನೀರು ಸರಬರಾಜು ಕಾಮಗಾರಿ ವಿಳಂಬ: ಸಚಿವ ಬೈರತಿ ಬಸವರಾಜ ಹೇಳಿಕೆ

ಜೈನ್ ಗುತ್ತಿಗೆ ಕಂಪನಿ ಕಪ್ಪುಪಟ್ಟಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಬಾಗಲಕೋಟೆ ನಗರಕ್ಕೆ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಧೋರಣೆ ತಾಳಿರುವ ಜೈನ್ ಇರಿಗೇಶನ್ ಸಿಸ್ಟಮ್ಸ್ ಲಿಮಿಟೆಡ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೈಗೊಂಡ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ 2016 ಮಾರ್ಚ್ ತಿಂಗಳಲ್ಲಿ ₹72 ಕೋಟಿ ವೆಚ್ಚದ ಟೆಂಡರ್ ಜೈನ್ ಕಂಪನಿಗೆ ನೀಡಿದ್ದು, 2021ಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಪ್ರಗತಿ ಮಂದಗತಿಯಲ್ಲಿ ನಡೆದಿದೆ. ಹೀಗಾಗಿ ಅದನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಈಗಾಗಲೇ ಜೈನ್ ಕಂಪನಿಗೆ ನೀಡಿದ ಕಾಮಗಾರಿ ಕೈಬಿಡುವ ಕುರಿತು ಧಾರವಾಡದ ರಾಜ್ಯ ನಗರ ನೀರು ಸರರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ಅವರಿಗೆ ಪ್ರಸ್ತಾವ ನೀಡಲಾಗಿದೆ. ಅಲ್ಲದೇ ಕಾಮಗಾರಿ ವಿಳಂಬ ನೀತಿಯಿಂದ ಗುತ್ತಿಗೆದಾರರಿಗೆ ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಂದ ನೋಟಿಸ್ ನೀಡಿ ವಿವರಣೆ ನೀಡಲು ನಿರ್ದೇಶನ ನೀಡಿದ್ದು, ತಪ್ಪಿದಲ್ಲಿ ಗುತ್ತಿಗೆ ರದ್ದುಪಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿನ ಕುಡಿಯುವ ನೀರು ಮತ್ತು ಒಳಚರಂಡಿ ನಿರ್ಮಾಣಕ್ಕೆ ಕೈಗೊಂಡ ಕಾಮಗಾರಿ ಮುಂದಿನ 2-3 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯ ಜನರಿಗೆ ಸಮರ್ಪಕ ನೀರು ಪೂರೈಕೆಯಾಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಬಾದಾಮಿ, ಕೆರೂರ ಹಾಗೂ ಗುಳೇದಗುಡ್ಡ ನಗರ ಹಾಗೂ 18 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿಯಿಂದ ನೀರು ತರಲು ₹220 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಸಮಪರ್ಕವಾಗಿ ನೀರು ಪೂರೈಕೆಯಾಗಲಿದೆ ಎಂದರು.

ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ಎರಡು ತಿಂಗಳು ಬಿಟ್ಟು ಪುನಃ ಜಿಲ್ಲೆಗೆ ಬಂದು ಕಾಮಗಾರಿ ಪ್ರರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮುಧೋಳ ನಗರ ಮತ್ತು ಮಹಾಲಿಂಗಪುರ ಪಟ್ಟಣಕ್ಜೆ ಘಟಪ್ರಭಾ ನದಿಯಿಂದ ಸಮರ್ಪಕವಾರಿ ನೀರು ಪೂರೈಸಲು ಸಾಧ್ಯವಾಗದ ಕಾರಣ ಶಾಶ್ವತವಾಗಿ ನೀರು ಪೂರೈಸುವ ನಿಟ್ಟಿನಲ್ಲಿ ಕೃಷ್ಣಾ ನದಿಯಿಂದ ನೀರು ತರಲು ₹80 ಕೋಟಿ ವೆಚ್ಚವಾಗಲಿದೆ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಕಮತಗಿ ಮತ್ತು ಅಮೀನಗಡ ಪಟ್ಟಣಕ್ಕೆ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಡಿಪಿಆರ್ ತಯಾರಿಸಿ ಕಳುಹಿಸಲು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ ಅವರು ವಿವಿಧ ಬೇಡಿಕೆಗಳನ್ನು ಸಚಿವರ ಮುಂದೆ ಪ್ರಸ್ತಾಪಿಸಿದರು.

ಜಿಲ್ಲಾ ನಗರಾಭಿವೃದ್ದಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಎಸ್.ಸಿ.ಓಣಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಂಡ ಕಾಮಗಾರಿಗಳ ಪ್ರಗತಿ ವರದಿಯನ್ನು ವಿವರವಾಗಿ ಸಭೆಯ ಮುಂದಿಟ್ಟರು.

ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು