ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ಹೆಸರಿಗಷ್ಟೇ ಕಸ ವಿಲೇವಾರಿ

ಬಳಕೆಯಾಗದೇ ಹಾಳುಬಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ
Last Updated 12 ಜನವರಿ 2020, 19:45 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಎರಡನೇ ಅತಿದೊಡ್ಡ ನಗರ ಜಮಖಂಡಿ. ಉದ್ಯಮ ಹಾಗೂ ಶೈಕ್ಷಣಿಕವಾಗಿ ಹೆಸರು ಮಾಡಿರುವ ಊರು. ಕೃಷ್ಣೆಯ ಕಣಿವೆಯಲ್ಲಿ ನೆಮ್ಮದಿಯ ಬದುಕು ಕಂಡುಕೊಳ್ಳಲು ಇಚ್ಚಿಸುವವರು ವಾಸಕ್ಕೆ ಆಯ್ಕೆ ಮಾಡಿಕೊಳ್ಳುವ ಮೊದಲ ನಗರ. ಆದರೆ ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಇನ್ನೂ ಕನಸಿನ ಮಾತೇ ಆಗಿದೆ. ಸರ್ಕಾರ ಎಲ್ಲ ಸವಲತ್ತು ಒದಗಿಸಿದರೂ ಅದನ್ನು ಬಳಸಿ ನಗರವನ್ನು ಆರೋಗ್ಯವಾಗಿ ಇಡಬೇಕಾದ ಅಧಿಕಾರಿಗಳು ಆ ವಿಚಾರದಲ್ಲಿ ಎಡವಿದ್ದಾರೆ. ಆ ಬಗ್ಗೆ ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ..

ಜಮಖಂಡಿ: ಇಲ್ಲಿನ ಜಂಬಗಿ ರಸ್ತೆಯಲ್ಲಿ ನಗರದಿಂದ 2 ಕಿ.ಮೀ. ದೂರದಲ್ಲಿರುವ ನಗರಸಭೆ ಘನತ್ಯಾಜ್ಯ ಸಂಗ್ರಹ ಘಟಕದಲ್ಲಿ ಕಸ ವಿಲೇವಾರಿಯಾಗದೇ ವ್ಯರ್ಥ ತಾಣವಾಗಿ ಮಾರ್ಪಟ್ಟಿದೆ.

ಸುತ್ತಲಿನ ಪ್ರದೇಶದಲ್ಲಿ ನಿಲ್ಲಲು ಸಾಧ್ಯವಾಗದಷ್ಟು ದುರ್ವಾಸನೆ, ಸೊಳ್ಳೆ, ನೊಣಗಳು, ಹಂದಿ, ನಾಯಿಗಳ ಕಾಟ ಆ ಪ್ರದೇಶವನ್ನು ಅಸಹನೀಯವಾಗಿದೆ.

ಘಟಕದ 20 ಎಕರೆ ಸ್ಥಳ ಸಂಪೂರ್ಣ ಕಸದಿಂದ ತುಂಬಿಕೊಂಡಿದೆ, ವಿಲೇವಾರಿ ಮಾಡುವ ಯಂತ್ರಗಳಿದ್ದರೂ, ಅವು ಉಪಯೋಗವಾಗುತ್ತಿಲ್ಲ. ಹೀಗಾಗಿ ಅವೆಲ್ಲಾ ಹಾಳಾಗಿವೆ. ವಿಲೇವಾರಿಗೊಂಡು ಕಸದ ಗುಡ್ಡೆ ಕರಗುವ ಬದಲು ದಿನದಿಂದ ದಿನಕ್ಕೆ ಬೆಳೆಯುತ್ತಿದೆ.

ಪ್ಲಾಸ್ಟಿಕ್ ದೊಡ್ಡ ಸಮಸ್ಯೆ: ಬಳಕೆ ನಿಷೇಧವಿದ್ದರೂ ನಗರದಲ್ಲಿಪ್ಲಾಸ್ಟಿಕ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರಸಭೆ ಅಧಿಕಾರಿಗಳು ಕೆಲ ಕಾಲ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಂಡರೂ ನಂತರ ಕಾರ್ಯಾಚರಣೆ ನಿಲ್ಲಿಸಿದ್ದಾರೆ. ಇದರಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಾಣಸಿಗುತ್ತಿದೆ. ನಗರದಲ್ಲಿ ಸಂಗ್ರಹವಾದ ಕಸವನ್ನು ನಗರಸಭೆ ವಾಹನಗಳ ಮೂಲಕ ಒಯ್ದು ಜಂಬಗಿ ರಸ್ತೆಯ ಕಸ ಸಂಗ್ರಹ ಸ್ಥಳದಲ್ಲಿ ಹಾಕಲಾಗುತ್ತಿದ್ದು, ಅದರಲ್ಲಿ ಸಿಂಹಪಾಲು ಪ್ಲಾಸ್ಟಿಕ್ ಇರುತ್ತದೆ. ಪ್ಲಾಸ್ಟಿಕ್ ಪ್ರತ್ಯೇಕಿಸದೇ ಇರುವುದರಿಂದ ಕಸದ ರಾಶಿಯಲ್ಲಿ ಎಲ್ಲಿ ನೋಡಿದರೂ ಪ್ಲಾಸ್ಟಿಕ್ ತ್ಯಾಜ್ಯವೇ ಕಾಣಸಿಗುತ್ತಿದೆ.

ಕಸ ವಿಲೇವಾರಿ ಅಗತ್ಯ: ಕಸದಲ್ಲಿರುವ ಪ್ಲಾಸ್ಟಿಕ್ ಹಾಗೂ ಕೊಳೆಯದಿರುವ ವಸ್ತುಗಳನ್ನು ಸಿಮೆಂಟ್ ತಯಾರಿಕಾ ಕಾರ್ಖಾನೆಗಳಿಗೆ ಕಳಿಸಿ, ಕೊಳೆತ ಕಸವನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿಸಿ ರೈತರಿಗೆ, ಗೊಬ್ಬರ ತಯಾರಿಕಾ ಕಂಪನಿಗಳಿಗೆ ನೀಡಬೇಕಿದೆ. ಆದರೆ ಅದು ಆಗುತ್ತಿಲ್ಲ. ಹಲವು ವರ್ಷಗಳಿಂದ ಕಸವನ್ನು ಅಲ್ಲಿಯೇ ಹಾಕುತ್ತಿರುವುದರಿಂದ ಆ ಕಸದ ಗುಡ್ಡೆಗಳ ಮೇಲೆ ಹಸಿರು ಬೆಳೆದಿದೆ. ಮಳೆ–ಚಳಿಗಾಲದಲ್ಲಿ ಸುತ್ತಮುತ್ತಲಿನ ನಿವಾಸಿಗಳು ದುರ್ವಾಸನೆಯಿಂದ ನರಕ ಯಾತನೆ ಅನುಭವಿಸಬೇಕಿದೆ. ಜೊತೆಗೆ ಆ ರಸ್ತೆಯಲ್ಲಿ ಹಾದು ಹೋಗುವವರು ಮೂಗು ಮುಚ್ಚಿಕೊಂಡೇ ಹೋಗುತ್ತಾರೆ.

ಕಸ ಕರಗಿಸಿ ಕಾಂಪೋಸ್ಟ್ ಮಾಡಲು ತಲಾ ₹15 ಲಕ್ಷ ಮೌಲ್ಯದ ಎರಡು ಯಂತ್ರಗಳಿದ್ದು, ಒಂದು ಪ್ಲಾಸ್ಟಿಕ್ ಕರಗಿಸುತ್ತದೆ. ಇನ್ನೊಂದು 4ಎಂ.ಎಂ, 8ಎಂ.ಎಂ ಗೊಬ್ಬರ, ಕಲ್ಲುಗಳನ್ನು ಪ್ರತ್ಯೇಕ ಮಾಡುತ್ತಿದೆ. ಆದರೆ ಅಧಿಕಾರಿಗಳ ಹೊಣೆಗೇಡಿತನದಿಂದ ಅವು ಕಾರ್ಯಾಚರಿಸದೇ ಹಾಗೇ ಬಿದ್ದಿವೆ.

ನಗರದ 31ವಾರ್ಡುಗಳಲ್ಲಿನ ಕಸ ತುಂಬಲು ಮತ್ತು ಮುಖ್ಯ ಸ್ಥಳಗಳಲ್ಲಿ ಕಸ ಗುಡಿಸಲು 99 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಳು ಟಾಟಾ ಏಸ್ ವಾಹನ, ಮೂರು ಟ್ರಾಕ್ಟರ್, ವಾಹನಗಳಿದ್ದರೂ ಅವುಗಳ ಬಳಕೆ ಸರಿಯಾಗಿ ಆಗುತ್ತಿಲ್ಲ. ಕೆಲಸ ಮಾಡುವ ಸಿಬ್ಬಂದಿಗೆ ಕೈಗವಸು, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದ ಕಾರಣ ರೋಗಗಳಿಗೆ ತುತ್ತಾಗುವುದು ಸಾಮಾನ್ಯವಾಗಿದೆ.

ವಿದ್ಯುತ್ ವ್ಯವಸ್ಥೆ ಇಲ್ಲ: ಕಸ ಕರಗಿಸಲು ಯಂತ್ರಗಳನ್ನು ಅಳವಡಿಸಿದ್ದರೂ ಅವುಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ತುಕ್ಕು ಹಿಡಿದ ತೂಕದ ಸೇತುವೆ: ಕಸವನ್ನು ಘನತ್ಯಾಜ್ಯ ಸಂಗ್ರಹ ಘಟಕಕ್ಕೆ ತಂದಾಗ ಮತ್ತು ಗೊಬ್ಬರವನ್ನಾಗಿ ಪರಿವರ್ತಿಸಿ ಹೊರಗೆ ಕಳುಹಿಸುವಾಗ ಕಡ್ಡಾಯವಾಗಿ ತೂಕ ಮಾಡಬೇಕು. ಆದರೆ ಅದು ಪಾಲನೆಯಾಗುತ್ತಿಲ್ಲ. ಹೀಗಾಗಿ ಘಟಕದಲ್ಲಿನ ತೂಕದ ಸೇತುವೆ (ವೇ ಬ್ರಿಜ್) ತುಕ್ಕು ಹಿಡಿಯುತ್ತಿದೆ.

‘ಕಸದ ಯಂತ್ರಗಳನ್ನು ಈಗ ಪ್ರಾರಂಭ ಮಾಡಿದರೂ ಅಲ್ಲಿ ಸಂಗ್ರಹವಾಗಿರುವ ಕಸ ಪ್ರತ್ಯೇಕಿಸಲು ಹಾಗೂ ಕರಗಿಸಲು ಕನಿಷ್ಠ ಒಂದು ವರ್ಷವಾದರೂ ಸಮಯ ಬೇಕಿದೆ. ಮಳೆಗಾಲದಲ್ಲಿ ಕೆಲಸ ಸರಾಗವಾಗಿ ಆಗುವುದಿಲ್ಲ. ಈಗ ಚಳಿಗಾಲ ಮತ್ತು ಬೇಸಿಗೆಯಲ್ಲಿ ಕಸ ಒಣಗಿರುತ್ತದೆ. ಬೇರ್ಪಡಿಸಲು ಅನೂಕೂಲವಾಗುತ್ತದೆ. ಹಾಗಾಗಿ ಕೂಡಲೇ ಆ ಕೆಲಸ ಪ್ರಾರಂಭಿಸಬೇಕು’ ಎಂಬುದು ಸ್ಥಳೀಯರ ಒತ್ತಾಯ.

ಉಪಯೋಗಕ್ಕೆ ಬಾರದ ವಸ್ತುಗಳನ್ನು ಹಾಕಿ ಮುಚ್ಚಲು ಪ್ರತ್ಯೇಕ ಹೊಂಡ ನಿರ್ಮಿಸಿ, ಅದಕ್ಕೆ ಪ್ಲಾಸ್ಟಿಕ್ ಕಾಗದ ಹಾಕಿದ್ದರು. ಆದರೆ ಯಾವುದೇ ವಸ್ತುಗಳನ್ನು ಹಾಕದಿರುವುದರಿಂದ ಪ್ಲಾಸ್ಟಿಕ್ ಹರಿದು ಹೋಗಿ ಹೊಂಡದ ಸುತ್ತಲೂ ಕಸ ಶೇಖರಣೆಗೊಂಡಿದೆ.

ನಗರದಿಂದ ಘನತ್ಯಾಜ್ಯ ಸಂಗ್ರಹ ಘಟಕಕ್ಕೆ ವಾಹನದಲ್ಲಿ ಕಸ ಒಯ್ಯುವಾಗ ಅದಕ್ಕೆ ಹಸಿರು ಹೊದಿಕೆ (ಗ್ರೀನ್ ಶೀಟ್) ಹಾಕಬೇಕು. ಆದರೆ ಅದು ಕಾರ್ಯಗತ ಆಗದಿರುವುದಕ್ಕೆ ರಸ್ತೆಯಲ್ಲೇ ಕಸ ಬೀಳುತ್ತಿದೆ. ವಾಹನದ ಹಿಂದೆ ಹೋದರೆ ಗಬ್ಬು ವಾಸನೆ ಬೀರುತ್ತದೆ. ಇದು ಜಂಬಗಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಸಹಿಸಲಾಗದ ಅನುಭವವಾಗಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಕಸ ಸಂಗ್ರಹಣೆ ಹಾಗೂ ವಿಲೇವಾರಿ ವ್ಯವಸ್ಥೆ ಸುಧಾರಣೆ ಮಾಡುತ್ತಾರೆಯೇ ಎಂಬುದು ನಗರದ ನಿವಾಸಿಗಳ ಪ್ರಶ್ನೆ.

**

ಜಮಖಂಡಿ: ಜಿಲ್ಲೆಯ ಎರಡನೇ ಅತಿದೊಡ್ಡ ನಗರಸಭೆ
ಜನಸಂಖ್ಯೆ 1.2 ಲಕ್ಷ (2011ರ ಜನಗಣತಿ ಅನ್ವಯ)
ಒಟ್ಟು ಮನೆಗಳು: 13,893
ಪ್ರತಿದಿನ ಸಂಗ್ರಹವಾಗುವ ಕಸ: 22 ಟನ್

*
ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಯಂತ್ರಗಳು ಕಾರ್ಯಾರಂಭಿಸಿಲ್ಲ. ಸಂಗ್ರಹಾಗಾರದಲ್ಲಿ ಪ್ರವಾಹದ ನೀರು ಬಂದು ಕರೆಂಟ್ ವ್ಯವಸ್ಥೆ ಹಾಳಾಗಿದೆ.
ರಾಮಕೃಷ್ಣ ಸಿದ್ಧನಕೊಳ್ಳ, ನಗರಸಭೆ ಆಯುಕ್ತ

*
ತ್ಯಾಜ್ಯ ವಿಲೇವಾರಿಯಾಗದೇ ಯಂತ್ರಗಳು ತುಕ್ಕುಹಿಡಿಯುತ್ತಿವೆ. ಘನತ್ಯಾಜ್ಯ ಸಂಗ್ರಹದ ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಕೂಡಲೇ ಅಲ್ಲಿಗೆ ಭದ್ರತಾ ಸಿಬ್ಬಂದಿ ನೇಮಿಸಬೇಕು.
–ಪೂಜಾ ವಾಳ್ವೇಕರ, ನಗರಸಭೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT