ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಸಂಕಷ್ಟದಲ್ಲಿ ಖಾದಿ ನೇಯ್ಗೆ ಕುಟುಂಬ

Published 3 ಆಗಸ್ಟ್ 2023, 4:28 IST
Last Updated 3 ಆಗಸ್ಟ್ 2023, 4:28 IST
ಅಕ್ಷರ ಗಾತ್ರ

ಬಸವರಾಜ ಹವಾಲ್ದಾರ

ಬಾಗಲಕೋಟೆ: ಮಾರುಕಟ್ಟೆ ಅಭಿವೃದ್ಧಿ ಸಹಾಯಧನ (ಎಂಡಿಎ) ಮತ್ತು ಪ್ರೋತ್ಸಾಹ ಮಜೂರಿ ಪಾವತಿಯಾಗದೇ ಸಾವಿರಾರು ನೇಯ್ಗೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಖಾದಿ ಪ್ರೋತ್ಸಾಹಿಸಲು ಬಟ್ಟೆ ನೇಯ್ಗೆ ಮಾಡುವ ಕಾರ್ಮಿಕರಿಗೆ ಪ್ರತಿ ಲಡಿಗೆ (ನೂಲಿನ ಉಂಡೆ) ₹3 ಹಾಗೂ ಮೀಟರ್ ಬಟ್ಟೆ ನೇಯ್ಗೆಗೆ ₹7 ಪ್ರೋತ್ಸಾಹ ಧನ ಕೊಡಲಾಗುತ್ತದೆ. ಆದರೆ, 2022–23ನೇ ಸಾಲಿನ ₹2 ಕೋಟಿ ಮೊತ್ತ ಬಿಡುಗಡೆಯಾಗಿಲ್ಲ. ಸಹಾಯಧನವೂ ಪಾವತಿಯಾಗಿಲ್ಲ.

‘ಪ್ರತಿ ಲಡಿಗೆ ₹10 ಹಾಗೂ ಬಟ್ಟೆ ಮೀಟರ್‌ಗೆ ₹28 ಕೂಲಿ ನೀಡಲಾಗುತ್ತದೆ. ಇದರೊಂದಿಗೆ ಶೇ 10ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತದೆ. ದಿನಕ್ಕೆ 8 ರಿಂದ 12 ಲಡಿ ಸಿದ್ಧಪಡಿಸಬಹುದಾಗಿದೆ.ಇಲ್ಲವೇ ನಾಲ್ಕಾರು ಮೀಟರ್ ಬಟ್ಟೆಯನ್ನೂ ನೇಯಬಹುದು. ಆದರೆ ದಿನದ ಕೂಲಿ ₹150 ಅನ್ನು ದಾಟುವುದಿಲ್ಲ’ ಎನ್ನುತ್ತಾರೆ ನೇಯ್ಗೆಗೆ ಬರುವ ಶಂಕ್ರಮ್ಮ ಕಟ್ಟಿಮನಿ.

ಎಂಡಿಎ ಹಾಗೂ ಪ್ರೋತ್ಸಾಹ ಮಜೂರಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಶಿವಾನಂದ ಮಠಪತಿ, ಕಾರ್ಯದರ್ಶಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆ, ಹುಬ್ಬಳ್ಳಿ

ಇತ್ತೀಚಿನ ದಿನಗಳಲ್ಲಿ ಕೃಷಿ, ಕಟ್ಟಡ ನಿರ್ಮಾಣ, ನರೇಗಾ ಕೆಲಸಕ್ಕೆ ಹೋದರೂ ₹300ಕ್ಕೂ ಹೆಚ್ಚು ಕೂಲಿ ಸಿಗುತ್ತದೆ. ಇಲ್ಲಿ ಕೂಲಿ ₹150 ದಾಟದಿರುವುದರಿಂದ ಖಾದಿ ನೇಯ್ಗೆಗೆ ಬರುವವರ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ. ಮುರನಾಳ ಪುನರ್‌ ವಸತಿ ಕೇಂದ್ರದಲ್ಲಿ ಹಂಜಿಯಿಂದ ನೂಲು ತೆಗೆಯುವವರು ಮಾತ್ರ ಬರುತ್ತಿದ್ದು, ನೇಯ್ಗೆ ಮಾಡುವವರು ಬಾರದ್ದರಿಂದ ಮಗ್ಗಗಳು ಹಾಳು ಬಿದ್ದಿವೆ.

ಕೂಲಿ ಹಣದ ಜತೆಗೆ ಶೇ 10ರಷ್ಟು ಪ್ರೋತ್ಸಾಹ ಧನ, ಶೇ 12 ಕುಶಲಕರ್ಮಿಗಳ ಕಲ್ಯಾಣ ನಿಧಿಗೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯು ಪಾವತಿ ಮಾಡುತ್ತದೆ. ಕುಟುಂಬದ ಅವಶ್ಯಕತೆ ಆಧರಿಸಿ ಈ ಮೊತ್ತವನ್ನು ಕಾರ್ಮಿಕರು ಮರಳಿ ಪಡೆಯಬಹುದಾಗಿದೆ.

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಉಪಕೇಂದ್ರಗಳು ತುಳಸಿಗೇರಿ, ಗದ್ದನಕೇರಿ, ಜಾಲಿಹಾಳ ಸೇರಿದಂತೆ 20 ಕಡೆಗಳಲ್ಲಿವೆ. ಇಲ್ಲಿ ರಾಷ್ಟ್ರಧ್ವಜಕ್ಕೆ ಬೇಕಾದ ನೂಲು, ಬಟ್ಟೆಯ ನೇಯ್ಗೆ ಮಾಡಲಾಗುತ್ತದೆ. ಇದಲ್ಲದೆ ಚಾದರ, ಜಮಖಾನಾ, ಅಂಗಿ, ಟವೆಲ್‌ ಸೇರಿದಂತೆ ಹಲವು ಬಗೆಯ ಬಟ್ಟೆಗಳನ್ನು ಉತ್ಪಾದಿಸಲಾಗುತ್ತದೆ.

ಹುಬ್ಬಳ್ಳಿಯಲ್ಲಿರುವ ಸಂಯುಕ್ತ ಸಂಸ್ಥೆಗೆ ರಾಷ್ಟ್ರಧ್ವಜದ ಬಟ್ಟೆ ಬಾಗಲಕೋಟೆ ಜಿಲ್ಲೆಯಿಂದಲೇ ಹೋಗುತ್ತದೆ. ಅದು ರಾಷ್ಟ್ರಧ್ವಜ ನಿರ್ಮಾಣಕ್ಕೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್‌)ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯಾಗಿದೆ.

ಧ್ವಜ ವಹಿವಾಟು ಕಡಿಮೆ ನಿರೀಕ್ಷೆ

2020–21ರಲ್ಲಿ ₹1.50 ಕೋಟಿ, 21–22ರಲ್ಲಿ ₹2.52 ಕೋಟಿ ಮೊತ್ತದ ರಾಷ್ಟ್ರಧ್ವಜಗಳು ಮಾರಾಟವಾಗಿದ್ದವು. ಕಳೆದ ವರ್ಷ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವವಾದ ಹಿನ್ನಲೆಯಲ್ಲಿ ಮನೆ, ಮನೆಗಳ ಮೇಲೆ ಧ್ವಜ ಹಾರಿಸಿದ್ದರಿಂದ ದಾಖಲೆ ಪ್ರಮಾಣದ ₹3.98 ಕೋಟಿ ಮೊತ್ತದ ವಹಿವಾಟು ನಡೆದಿತ್ತು.

‘ಈ ಬಾರಿ ಜೂನ್ ಅಂತ್ಯದವರೆಗೆ ₹1 ಕೋಟಿ ಮೊತ್ತದ ವಹಿವಾಟು ನಡೆದಿದೆ. ಕಳೆದ ಬಾರಿಯಷ್ಟು ವಹಿವಾಟು ಆಗುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT