ಸೋಮವಾರ, ಆಗಸ್ಟ್ 19, 2019
22 °C
ನೂರಾರು ಎಕರೆ ಹೊಲದಲ್ಲಿ ಬೆಳೆದ ಗೋವಿನ ಜೋಳಕ್ಕೆ ಕೀಟಗಳ ಕಾಟ

ಸೈನಿಕ ಹುಳು ಬಾಧೆ; ರೈತರು ಹೈರಾಣ

Published:
Updated:
Prajavani

ಅಮೀನಗಡ: ಬರಗಾಲದಿಂದ ತತ್ತರಿಸಿದ ರೈತರಿಗೆ ಮುಂಗಾರು ಮಳೆ ಸ್ವಲ್ಪ ನೆಮ್ಮದಿ ತಂದಿದೆ.  ಆದರೆ ಸಮೃದ್ಧವಾಗಿ ಬೆಳೆದ ಗೋವಿನಜೋಳ (ಮೆಕ್ಕೆಜೋಳ) ಸೈನಿಕ ಹುಳು ಕಾಟ ಹೆಚ್ಚಾಗಿದ್ದು ರೈತರನ್ನು ಆತಂಕಕ್ಕೀಡು ಮಾಡಿದೆ.

ಸೈನಿಕ ಹುಳು ಬಾಧೆಯಿಂದಾಗಿ ರೈತರಿಗೆ ದಿಕ್ಕುತೋಚದಂತಾಗಿದೆ. ಅಂಬ್ಲಿಕೊಪ್ಪ, ಮುರಡಿ, ಕಡಿವಾಲ, ಮೂಗನೂರ, ಐಹೊಳೆ, ನಿಂಬಲಗುಂದಿ, ಕಳ್ಳಿಗುಡ್ಡ, ಬೇನಾಳ ಪ್ರದೇಶಗಳಲ್ಲಿ ಹುಳು ಬಾಧೆ ವ್ಯಾಪಕವಾಗಿದೆ. ನೂರಾರು ಎಕರೆ ಹೊಲದಲ್ಲಿ ಬೆಳೆದ ಗೋವಿನಜೋಳ ಕೀಟಬಾಧೆಯಿಂದ ನಲುಗಿದೆ. ಸೈನಿಕ ಹುಳು ರಾತ್ರಿ ಹೊತ್ತಿನಲ್ಲಿ ಬೆಳೆಗಳಿಗೆ ದಾಳಿ ಇಟ್ಟು ನಾಶಮಾಡುತ್ತಿದೆ.

ಈಗಾಗಲೇ ಸೈನಿಕ ಹುಳದ ಕಾಟ ಹೊಲದಿಂದ ಹೊಲಕ್ಕೆ ಹಬ್ಬುತ್ತಿದ್ದು ನಿಯಂತ್ರಣವಾಗುತ್ತಿಲ್ಲ. ಇದರಿಂದ ಗೋವಿನಜೋಳದ ಬೆಳೆಯು ಒಣಗಿದ ಕಡ್ಡಿಯ ಗಾತ್ರದಲ್ಲಿ ಕಾಣುತ್ತಿದೆ ಎಂದು ಬಸವನಾಳ ಗ್ರಾಮದ ರೈತ ಸಂಗಣ್ಣ ಅಮರಗೋಳ ಅಳಲು ತೋಡಿಕೊಂಡರು.

‘ಅತಿಯಾಗಿ ಮಳೆಯಾಗಿದ್ದರಿಂದ ಆ ಭಾಗದಲ್ಲಿ ತಂಪು ಹವೆಯಿಂದಾಗಿ ಈ ಹುಳದ ಬಾಧೆ ಹೆಚ್ಚಾಗಿದೆ. ಸೈನಿಕ ಹುಳದ ನಿವಾರಣೆಗೆ ಸ್ಪೈನೋಸೈಡ್ ಕೀಟನಾಶಕ ಪ್ರತಿ ಲೀಟರ್ ನೀರಿಗೆ ಮೂರು ಎಂ.ಎಲ್ ಹಾಕಿ ಸಂಜೆ ಬೆಳೆಯ ಮೇಲೆ ಸಿಂಪಡಿಸಬೇಕು. ಅಲ್ಲದೇ ಎಂಟು ಲೀಟರ್ ನೀರಿಗೆ 250 ಮೀಲಿ ಲೀಟರ್ ಮೊನೋಕ್ರೋಟೊಪಾಸ್ ಮತ್ತು 4 ಕೆ.ಜಿ. ಬೆಲ್ಲ, ಜೊತೆಗೆ 50 ಕೆ.ಜಿ ಅಕ್ಕಿ ಅಥವಾ ಗೋಧಿ ತವಡು ಮಿಶ್ರಣ ಮಾಡಿ ಸಂಜೆ ಹೊತ್ತು ಎಕರೆಗೆ 20 ಕೆ.ಜಿಯಂತೆ ಸಿಂಪಡಿಸುತ್ತಾ ಬಂದರೆ ಸೈನಿಕ ಹುಳು ಬಾಧೆ ನಿಯಂತ್ರಣಕ್ಕೆ ಬರುತ್ತದೆ‘ ಎಂದು ರೈತ ರವಿ ಸಜ್ಜನ ಹೇಳುತ್ತಾರೆ.

ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಕೀಟನಾಶಕ (ಇಮಾಮೆಕ್ಸಿನ್ ಬೆಂಜೋಏಟ್, ಕೊರಾಜಿನ್) ದೊರೆಯುತ್ತಿದ್ದು, ರೈತರು ಅಮೀನಗಡ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಡೆದುಕೊಳ್ಳುವಂತೆ ಕೃಷಿ ಅಧಿಕಾರಿ ಆರ್.ಬಿ.ಚಿಕ್ಕೂರ ತಿಳಿಸುತ್ತಾರೆ.

Post Comments (+)