ಭಾನುವಾರ, ನವೆಂಬರ್ 29, 2020
20 °C

ಅಡವಿ ಹುಲಿಗಳಾದ ಲಂಬಾಣಿಗಳ ಕೆಣಕದಿರಿ; ಕಟೀಲ್‌ಗೆ ಸೋಮಲಿಂಗೇಶ್ವರ ಶ್ರೀ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಲಂಬಾಣಿ ಸಮುದಾಯದವರು ಅಡವಿಯ ಹುಲಿಗಳು. ಒಳ ಮೀಸಲಾತಿಯ ನೆಪ ಮಾಡಿಕೊಂಡು ಅವರನ್ನು ಕೆಣಕಬೇಡಿ. ಪರಿಣಾಮ ಬೇರೆ ಆಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರಿಗೆ ವಿಜಯಪುರ ಜಿಲ್ಲೆ ಕೇಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಶಿರಾ ಉಪಚುನಾವಣೆ ಪ್ರಚಾರದ ವೇಳೆ ನಳಿನ್ ಕುಮಾರ ಕಟೀಲ್, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅದು ಖಂಡನೀಯ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ-ಜಾತಿ ಹಾಗೂ ಸಮಾಜಗಳ ನಡುವೆ ಬೆಂಕಿ ಹಚ್ಚುತ್ತಿರುವ ನಳಿನ್ ಕುಮಾರ ಕಟೀಲ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆದು ಬುದ್ಧಿ ಹೇಳಲಿ. ಇಲ್ಲದಿದ್ದರೆ ನಮ್ಮ ಸಮಾಜದಿಂದ ಬಿಜೆಪಿಯವರಿಗೆ ಬುದ್ಧಿವಾದ ಹೇಳುವ ದಿನಗಳು ಬರಲಿವೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಳಿನ್ ಕುಮಾರ ಕಟೀಲ್ ತಾಂಡಾಗಳಿಗೆ ಬಂದು ನೋಡಲಿ. ನಮ್ಮ ಜನ ಬಡತನವನ್ನೇ ಹಾಸಿ ಹೊದ್ದು ಮಲಗುತ್ತಿದ್ದಾರೆ. ಮಕ್ಕಳನ್ನು ಸಾಕಲಾಗದೇ ಮಾರಾಟ ಮಾಡುತ್ತಿದ್ದಾರೆ. ತಾಂಡಾಗಳು ಸರಿಯಾದ ರಸ್ತೆ, ಕುಡಿಯುವ ನೀರಿನ ಸೌಕರ್ಯವಿಲ್ಲದೇ ಸಮಸ್ಯೆಯ ಕೂಪಗಳಾಗಿವೆ’ ಎಂದರು.

ನಳಿನ್ ಕುಮಾರ್ ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ಜಾರಿಗೊಳಿಸುವುದಾಗಿ ಹೇಳಿ ಪರಿಶಿಷ್ಟರಲ್ಲಿ ಗೊಂದಲ ಮೂಡಿಸಿರುವುದು ಸರಿಯಲ್ಲ. ಅವರು ಮನೆಯಲ್ಲಿ ಕುಳಿತು ರಾಜಕಾರಣ ಮಾಡುವ ಬದಲು ತಾಂಡಾಗಳಿಗೆ ಬಂದು ವಾಸ್ತವ ಅರಿತು, ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಲಿ ಇಲ್ಲದಿದ್ದರೆ ಪರಿಶಿಷ್ಟರ ಪಟ್ಟಿಯಲ್ಲಿರುವ 101 ಸಮುದಾಯಗಳೊಂದಿಗೆ ಸೇರಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ತಾಕೀತು ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು