ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೂರು | ಆಸ್ತಿ ಕಬಳಿಕೆಗೆ ಯತ್ನ ಆರೋಪ: ಪ್ರತಿಭಟನೆ

Published 8 ಜನವರಿ 2024, 13:27 IST
Last Updated 8 ಜನವರಿ 2024, 13:27 IST
ಅಕ್ಷರ ಗಾತ್ರ

ಕೆರೂರು: ‘ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ನಮ್ಮ ಆಸ್ತಿ ಕಬಳಿಕೆಗೆ ಕೆಲವರು ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿ ಬಡಿಗೇರ ಕುಟುಂಬದ ನೂರಾರು ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೆ ನಂ. 427, 428, 429, 430 ಆಸ್ತಿಯನ್ನು, ವೈ ಸಿ ಕಾಂಬಳೆ, ನಿಂಗಪ್ಪ ಬಡಿಗೇರ, ಲೋಕೇಶ ಕಾಂಬಳೆ ಎಂಬುವವರು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿರುವಾಗಲೇ ಆ ಜಾಗದಲ್ಲಿ ಎರಡು ಪೆಟ್ಟಿಗೆ ಅಂಗಡಿಗಳನ್ನು ಇಟ್ಟು ಆಸ್ತಿ ಕಬಳಿಕೆ ಮಾಡುವ ತಂತ್ರ ಹೆಣೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸುಮಾರು 14 ವರ್ಷಗಳಿಂದ ಬಾದಾಮಿ ನ್ಯಾಯಾಲಯದಲ್ಲಿ ದಾವೆ ಮುಂದುವರಿದಿದ್ದು ಇನ್ನೂ ಇತ್ಯರ್ಥವಾಗಿಲ್ಲ. ಅದನ್ನು ಲೆಕ್ಕಿಸದೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ರಾತ್ರೋರಾತ್ರಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟಿದ್ದಾರೆ. ಅಲ್ಲದೆ ನಮ್ಮ ವಿರುದ್ಧವೇ ಪ್ರಾಣ ಬೆದರಿಕೆ, ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ನ್ಯಾಯಾಲಯದ ತೀರ್ಪು ಬರುವ ತನಕ ಈಗಿನ ಹೊಸದಾಗಿ ಇರಿಸಿದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ.ಪಂ ಸದಸ್ಯನ ಕುಮ್ಮಕ್ಕು?:

ಪಟ್ಟಣ ಪಂಚಾಯಿತಿ ಸದಸ್ಯ ವಿಜಯಕುಮಾರ ಐಹೊಳೆ ಕುಮ್ಮಕ್ಕಿನಿಂದ ನಮ್ಮ ಆಸ್ತಿ ಕಬಳಿಸುವ ಸಂಚು ನಡೆದಿದ್ದು, ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಈ ಕುರಿತಂತೆ ಸಾಕಷ್ಟು ಬಾರಿ ಮಾತುಕತೆ ನಡೆಸಿದರೂ ನಮಗೆ ಬೆದರಿಕೆ ಹಾಕಿ ನಮ್ಮನ್ನು ಹತ್ತಿಕ್ಕುವ ತಂತ್ರ ರೂಪಿಸಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದು, ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯಲ್ಲಪ್ಪ ಬಿದರಿ, ಪಿಎಸ್‌ಐ ಕುಮಾರ ಹಿತ್ತಲಮನಿಯವರಿಗೆ ಮನವಿ ಮಾಡಿದರೂ ನಮಗೆ ನ್ಯಾಯ ದೊರೆತಿಲ್ಲ ಎಂದರು.

ಜಿಲ್ಲಾಧಿಕಾರಿ ಭೇಟಿ:

ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ ಜೊತೆ ಚರ್ಚಿಸಿದರು. ಪ್ರಕರಣಕ್ಕೆ ನ್ಯಾಯ ಕೊಡಿಸುವ ಭರವಸೆ ನೀಡಿದರು.

ದೇವಕ್ಕೆವ್ವ ಬಡಿಗೇರ, ಪುಷ್ಪಾ ಬಡಿಗೇರ, ರತ್ನವ್ವ ಬಡಿಗೇರ, ಶಾಂಭವಿ ಬಡಿಗೇರ, ಲಕ್ಷ್ಮವ್ವ ಬಡಿಗೇರ, ಪೂರ್ಣಿಮಾ ಬಡಿಗೇರ, ಮಂಜುಳಾ ಬಡಿಗೇರ, ಸುನಿತಾ ಬಡಿಗೇರ, ಪ. ಪಂ ಮಾಜಿ ಸದಸ್ಯ ಮಹೇಶ ಬಡಿಗೇರ, ದೇವಪ್ಪ ಬಡಿಗೇರ, ಗೋಪಾಲ ಬಡಿಗೇರ, ರಾಜು ಬಡಿಗೇರ, ಶಿವಾನಂದ ಬಡಿಗೇರ, ಶ್ರೀಧರ ಬಡಿಗೇರ, ಅಕ್ಷಯ ಬಡಿಗೇರ ಹಾಗೂ ನೂರಾರು ಬಡಿಗೇರ ಸಮಾಜದ ಪ್ರಮುಖರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT