ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೋತ್ಸವವೋ, ಹೋರಾಟವೋ ಸರ್ಕಾರವೇ ನಿರ್ಧರಿಸಲಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Last Updated 12 ಜನವರಿ 2021, 7:01 IST
ಅಕ್ಷರ ಗಾತ್ರ

ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಚೆಂಡು ಈಗ ಸರ್ಕಾರದ ಅಂಗಳದಲ್ಲಿದೆ. ಪಾದಯಾತ್ರೆ ಆರಂಭಕ್ಕೆ ಇನ್ನು 48 ಗಂಟೆ ಮಾತ್ರ ಬಾಕಿ ಇದ್ದು, ಅಷ್ಟರೊಳಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಸಂಕ್ರಾಂತಿ ಪಂಚಮಸಾಲಿ ಸಮಾಜಕ್ಕೆ ಸಂಕ್ರಮಣದ ಘಟ್ಟವಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ಪೂರಕವಾಗಿ ನಿರ್ಧಾರ ಕೈಗೊಂಡರೆ ಜನವರಿ 14 ರಂದು ಕೂಡಲಸಂಗಮದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ವಿಜಯೋತ್ಸವ ಇಲ್ಲವೇ ಸರ್ಕಾರಕ್ಕೆ ಅಭಿನಂದನೆ ಕಾರ್ಯಕ್ರಮವಾಗಿ ಬದಲಾಗಲಿದೆ. ಇಲ್ಲದಿದ್ದರೆ ಪಾದಯಾತ್ರೆ ಹೋರಾಟದ ಹಾದಿಯಾಗಲಿದೆ. ಹೀಗಾಗಿ ಅಭಿನಂದನೆಯೋ ಇಲ್ಲವೇ ಹೋರಾಟವೋ ಎಂಬುದನ್ನು ಸರ್ಕಾರವೇ ನಿರ್ಧರಿಸಲಿ ಎಂದರು.

ಪಾದಯಾತ್ರೆ ಆರಂಭದ ಮೊದಲ ದಿನ ಕೂಡಲಸಂಗಮದಲ್ಲಿ ಸಮಾಜದ 2 ಲಕ್ಷ ಮಂದಿ ಸೇರಲಿದ್ದಾರೆ. ನಿತ್ಯ 20 ಕಿ.ಮೀ ನಂತೆ 700 ಕಿ.ಮೀ ಪಾದಯಾತ್ರೆಯ ಹಾದಿ ಸಾಗಲಿದೆ. ನಮ್ಮ ಈ ಹೋರಾಟಕ್ಕೆ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಬಸವ ಜಯ ಮೃತ್ಯುಂಜಯ ಶ್ರೀ ಪ್ರತಿಕ್ರಿಯಿಸಿದರು.

ಪಂಚಮಸಾಲಿ ಸಮುದಾಯವನ್ನು ಈ ಹಿಂದೆ ಯಡಿಯೂರಪ್ಪ ಅವರೇ ಪ್ರವರ್ಗ 3 ಬಿಗೆ ಸೇರ್ಪಡೆ ಮಾಡಿದ್ದರು. 2ಎಗೆ ಸೇರ್ಪಡೆ ಮಾಡುವುದಾಗಿ ಈ ಹಿಂದೆ ಭರವಸೆ ಕೂಡ ನೀಡಿದ್ದಾರೆ. ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬ ವಿಶ್ವಾಸವಿದೆ. ಈ ಹಿಂದೆ ಬೇರೆ ಬೇರೆ ಸಮುದಾಯಗಳು ಮೀಸಲಾತಿಗೆ ಆಗ್ರಹಿಸಿ ಸಮಾವೇಶಗಳ ಮಾಡಿದಾಗ ಯಡಿಯೂರಪ್ಪ ಕೇವಲ 24 ಗಂಟೆಗಳಲ್ಲಿ ಅವರ ಬೇಡಿಕೆಗೆ ಸ್ಲಂದಿಸಿದ್ದಾರೆ. ನಮ್ಮ ಸಮಾಜದ್ದು ಇದು 24 ವರ್ಷಗಳ ಹಿಂದಿನ ಹೋರಾಟ. ಯಡಿಯೂರಪ್ಪ ಅವರಿಗೆ ಪಂಚಮಸಾಲಿ ಸಮಾಜದ ಋಣ ಇದೆ. ಅದಕ್ಕಾಗಿಯಾದರೂ ನಮ್ಮ ಬೇಡಿಕೆ ಈಡೇರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.

ಬ್ಲಾಕ್ ಮೇಲ್ ಉದ್ದೇಶ ಇಲ್ಲ..

ಮೀಸಲಾತಿ ನೆಪದಲ್ಲಿ ಪಂಚಮಸಾಲಿ ಸಮುದಾಯವನ್ನು ಯಡಿಯೂರಪ್ಪ ವಿರುದ್ಧ ಎತ್ತಿಕಟ್ಡುವ ವಿರೋಧಿಗಳ ಹುನ್ನಾರಕ್ಕೆ ಸ್ವಾಮೀಜಿ ದಾಳವಾಗಿದ್ದಾರೆ. ಹೀಗಾಗಿಯೇ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, 24 ವರ್ಷಗಳ ಹಿಂದಿನ ಮನವಿಗೆ ಇಲ್ಲಿಯವರೆಗೂ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ. ಯಡಿಯೂರಪ್ಪ ಅವಧಿಯಲ್ಲಿ ಆಗದಿದ್ದರೆ ಇನ್ನಾವತ್ತೂ ಆಗುವುದಿಲ್ಲ. ಹೀಗಾಗಿಯೇ ಅನಿವಾರ್ಯವಾಗಿ ಹೋರಾಟ ಕೈಗೆತ್ತಿಕೊಂಡಿದ್ದೇವೆ ಹೊರತು ಇದು ಬ್ಲಾಕ್ ಮೇಲ್ ಅಲ್ಲ. ಸಮಾಜದ ಮೀಸಲಾತಿ ಹೋರಾಟಕ್ಕೂ ಸಚಿವ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ. ಪಂಚಮಸಾಲಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೊಡಲಿ ಇಲ್ಲವೇ ಬಿಡಲಿ ಅದು ಮುಖ್ಯವಲ್ಲ. ನಮ್ಮ ಮೀಸಲಾತಿ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT