ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ | ಕುಡಿಯಲು ನೀರು, ಅಗತ್ಯ ದಿನಸಿ ಸಿಗದೆ ಸಂಕಷ್ಟ

ಹೊಟ್ಟೆಗೆ ಅನ್ನವಿಲ್ಲದೆ ಸಾಯುವ ಪರಿಸ್ಥಿತಿ; ಸೀಲ್‌ಡೌನ್ ಪ್ರದೇಶದ ನಿವಾಸಿಗಳ ಅಳಲು
Last Updated 23 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಜಮಖಂಡಿ: ನಗರದಲ್ಲಿ ಕೋವಿಡ್-19 ಪ್ರಕರಣ ದೃಡಪಟ್ಟ ನಂತರ ಸೋಂಕಿತ ಪ್ರದೇಶದ ಸುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಗುರುತಿಸಿ ಸೀಲ್‌ಡೌನ್ ಮಾಡಿ ವಾರ ಕಳೆದರೂ ಸ್ಥಳೀಯರಿಗೆ ನಿತ್ಯದ ಅಗತ್ಯ ದಿನಸಿ ಸಾಮಗ್ರಿ ಪೂರೈಕೆಯಾಗಿಲ್ಲ.

ಇಲ್ಲಿನ ಪೊಲೀಸ್ ಕ್ವಾಟ್ರಸ್, ಬಾರಪೇಟ್ ಗಲ್ಲಿ, ಅವಟಿ ಗಲ್ಲಿಯನ್ನು ಸೀಲ್‌ಡೌನ್ ಮಾಡಿದ್ದು, ಈ ಪ್ರದೇಶದಲ್ಲಿ ಕುಡಿಯಲು ನೀರು, ಎಣ್ಣೆ, ಉಪ್ಪು, ತರಕಾರಿ, ಹಾಲು ಹೀಗೆ ನಿತ್ಯ ಬಳಕೆ ವಸ್ತುಗಳ ಪೂರೈಕೆ ಆಗುತ್ತಿಲ್ಲ. ಮಾರಾಟಗಾರರನ್ನು ಕಳಿಸುತ್ತಿಲ್ಲ, ಹೊರಗೆ ಹೋಗಿ ತರಲು ಬಿಡುತ್ತಿಲ್ಲ. ಮಕ್ಕಳು ಹಾಲು ಇಲ್ಲದೇ ಒದ್ದಾಡುತ್ತಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ನಗರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಮಾತ್ರ ಆಗಾಗ ಬಂದು ಹೋಗುತ್ತಾರೆ. ಅವರ ಗಮನಕ್ಕೆ ತಂದರೆ ಸಂಜೆ ಸಾಮಗ್ರಿ ಬರುತ್ತದೆ ಎಂದು ಹೇಳಿ ಹೋಗುತ್ತಾರೆ. ಆದರೆ, ಯಾವುದೂ ಬರೊಲ್ಲ. ಪೊಲೀಸ್ ಕ್ವಾಟ್ರಸ್‌ನಲ್ಲಿ ಮೊದಲಿಗೆ ಔಷಧ ಸಿಂಪಡಿಸಿ ಹೋದವರು ಮರಳಿ ಇತ್ತ ಬಂದಿಲ್ಲ. ಮಂಗಳವಾರ ಜಿಲ್ಲಾಧಿಕಾರಿ ಜೊತೆಗೆ ಬಂದಿದ್ದ ಅಧಿಕಾರಿಗಳಿಗೆ ದಿನಸಿ ವಸ್ತುಗಳ ಪೂರೈಕೆ ಮಾಡುವಂತೆ ಕೋರಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಸ್ಥಿತಿ ಮುಂದುವರಿದರೆ ಕೋವಿಡ್–19 ಬದಲಿಗೆ ಹೊಟ್ಟೆಗೆ ಅನ್ನವಿಲ್ಲದೆ ಸಾಯುವ ಪರಿಸ್ಥಿತಿ ಬರುತ್ತದೆ ಎಂದು ನಿವಾಸಿಗಳು ಹೇಳುತ್ತಾರೆ.

ಕಾಗದದಲ್ಲಿ ಮಾತ್ರ ಹೋಂ ಡಿಲೆವರಿ..
ಜಿಲ್ಲಾಧಿಕಾರಿ ಜಮಖಂಡಿಗೆ ಬಂದಾಗ ಸೀಲ್‌ಡೌನ್ ಪ್ರದೇಶದ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಹೋಂ ಡಿಲೆವರಿ ಮಾಡಿಸುತ್ತಿರುವುದಾಗಿ ಹೇಳಿ ಕಾಗದದಲ್ಲಿ ಲೆಕ್ಕ ತೋರಿಸುತ್ತಾರೆ. ಆದರೆ, ವಾಸ್ತವವಾಗಿ ಅಲ್ಲಿನ ಜನರಿಗೆ ಹೋಂ ಡಿಲೆವರಿ ಮಾಡುವವರು ಹೆಸರು, ಫೋನ್ ನಂಬರ್ ಯಾವುದು ಗೊತ್ತಿಲ್ಲ.

ದಿನಸಿ ಸಾಮಗ್ರಿ ಉಚಿತವಾಗಿ ನೀಡಲು ಆಗದಿದ್ದರೆ ಹಣ ಕೊಡುತ್ತೇವೆ. ವ್ಯವಸ್ಥೆ ಮಾಡಲಿ. ಇಲ್ಲಿಯವರೆಗೂ ನಮ್ಮ ಮನೆ ಸುತ್ತಲಿನ 10 ಕುಟುಂಬಗಳಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಕುಡಿಯಲು ನೀರು ಇಲ್ಲದ ಪರಿಸ್ಥಿತಿ ನಮ್ಮದು ಎಂದು ಬಾರ್ ಪೇಠಗಲ್ಲಿಯ ಅರುಣ ಘೋರ್ಪಡೆ, ಶ್ರೀಶೈಲ ಮಾಳಿ, ವಸಂತ ಜಾಧವ ಅಳಲು ತೋಡಿಕೊಂಡರು.

*
ಸೀಲ್‌ಡೌನ್ ಪ್ರದೇಶದ ನಿವಾಸಿಗಳಿಗೆ ದಿನಸಿ ಹೋಂ ಡಿಲೆವರಿ ಮಾಡುತ್ತಿದ್ದು, ಅದಕ್ಕೆ ತಂಡ ರಚನೆ ಮಾಡಿದ್ದೇವೆ. ಫೋನ್ ಮಾಡಿದರೆ ತರುತ್ತಾರೆ. ಹಣ ನೀಡಿ ಖರೀದಿಸಬೇಕು.
–ರಾಮಕೃಷ್ಣ ಸಿದ್ದನಕೊಳ್ಳ,ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT