ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಪರಿವಾರದ ಹಿನ್ನೆಲೆಯವರು, ಖಾತೆಗಾಗಿ ಕ್ಯಾತೆ ತೆಗೆಯಲ್ಲ: ಮುರುಗೇಶ ನಿರಾಣಿ 

Last Updated 7 ಆಗಸ್ಟ್ 2021, 10:53 IST
ಅಕ್ಷರ ಗಾತ್ರ

ಬಾಗಲಕೋಟೆ: ’ನಾವು (ಬಿಜೆಪಿಯವರು) ಪರಿವಾರದ ಹಿನ್ನೆಲೆಯವರು. ಖಾತೆಗಾಗಿ ಕ್ಯಾತೆ ತೆಗೆಯುವಂತವರು ಅಲ್ಲ. ಹೀಗಾಗಿ ಎಲ್ಲರೂ ಬಿಟ್ಟಿರುವಂತಹದ್ದು ನಾನು ತೆಗೆದುಕೊಳ್ಳುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಹೇಳಿದ್ದೆನು. ಆದರೂ ನನ್ನ ಕೇಳಲಾರದೇ ಬೃಹತ್ ಮತ್ತು ಮಧ್ಯಮ ಕೈಗಾರಿಕೆಯಂತಹ ಮಹತ್ವದ ಖಾತೆಯ ಜವಾಬ್ದಾರಿ ಅವರು ವಹಿಸಿದ್ದಾರೆ‘ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಸಚಿವರಾದ ನಂತರ ಜಿಲ್ಲೆಗೆ ಶನಿವಾರ ಮೊದಲ ಬಾರಿಗೆ ಬಂದ ಅವರು, ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

’ಮುಖ್ಯಮಂತ್ರಿ ಆಗಲು ನಾನು ಎಲ್ಲಿಯೂ ಲಾಬಿ ಮಾಡಲು ಹೋಗಿಲ್ಲ. ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲಿ ಇದ್ದೇನೆ. ಸಿಎಂ ಆಗುತ್ತೇನೆ ಎಂದು ಮಾಧ್ಯಮಗಳ ಮುಂದೆಯೂ ಹೇಳಿರಲಿಲ್ಲ. ಸ್ನೇಹಿತರ ಬಳಿಯೂ ಹೇಳಿಕೊಂಡಿಲ್ಲ. ಆದರೆ ನಾನೇ ಮುಖ್ಯಮಂತ್ರಿ ಆಗುವೆ ಎಂದು ನೀವೇ (ಮಾಧ್ಯಮದವರು) ಹೇಳಿದ್ದೀರಿ‘ ಎಂದು ನಿರಾಣಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

’ನಮ್ಮ ಬೇರೆ ಬೇರೆ ಸ್ನೇಹಿತರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡಿದ್ದರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಮಂತ್ರಿಮಂಡಲದ ಪಟ್ಟಿ ಕೊಡುವೆ ಎಂದು ಹೇಳಿದ್ದರು‘ ಎಂದು ಪರೋಕ್ಷವಾಗಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಟಾಂಗ್ ನೀಡಿದರು.

’ಕಳೆದ 20 ವರ್ಷಗಳ ರಾಜಕೀಯ ಬದುಕಿನಲ್ಲಿ ನಾನು ಮಾತ್ರ ಮಂತ್ರಿ ಆಗುತ್ತೇನೆ. ಮುಖ್ಯಮಂತ್ರಿ ಆಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಅದನ್ನು ಪಕ್ಷ ಮತ್ತು ರಾಜ್ಯ, ಕೇಂದ್ರದ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ನಮ್ಮನ್ನು ಗುರುತಿಸಿ ಅವಕಾಶ ಕೊಡುತ್ತಾರೆ‘ ಎಂದರು.

’ಯಡಿಯೂರಪ್ಪ ಸಂಪುಟದಲ್ಲಿ ಆರಂಭದಲ್ಲಿ ನನಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಹಾಗೆಂದು ನಾನು ಎಲ್ಲಿಯೂ ಅಸಮಾಧಾನ ತೋಡಿಕೊಂಡಿರಲಿಲ್ಲ. ತಾಳಿದವನು ಬಾಳಿಯಾನು ಮಾತಿನಲ್ಲಿ ನಂಬಿಕೆ ಇಟ್ಟಿದ್ದರಿಂದ ಯಾರ ವಿರುದ್ಧವೂ ಹೇಳಿಕೆ ನೀಡಿರಲಿಲ್ಲ. ಅದೇ ಕಾರಣಕ್ಕೆ ಮುಂದೆ ನನಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹೊಣೆ ನೀಡಲಾಗಿತ್ತು‘ ಎಂದು ನಿರಾಣಿ ಸ್ಮರಿಸಿದರು.

’ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಐದು ವರ್ಷಗಳ ಅವಧಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಎರಡು ಜಾಗತಿಕ ಹೂಡಿಕೆದಾರರ ಸಮ್ಮೇಳನ ಆಯೋಜಿಸಿ ಇಡೀ ದೇಶ ಬೆಂಗಳೂರಿನತ್ತ ತಿರುಗಿ ನೋಡುವಂತೆ ಮಾಡಿದ್ದೆನು. ಅದೇ ಅನುಭವ ಈಗ ನೆರವಾಗಲಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT