ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ | ವಾಹನಗಳ ಸಂಚಾರ: ಪಾದಚಾರಿಗಳಿಗೆ ಪ್ರಾಣ ಭಯ

Published 28 ನವೆಂಬರ್ 2023, 16:51 IST
Last Updated 28 ನವೆಂಬರ್ 2023, 16:51 IST
ಅಕ್ಷರ ಗಾತ್ರ

ಬಾದಾಮಿ: ಪಟ್ಟಣಕ್ಕೆ ಬರುವ ಮುಖ್ಯ ರಸ್ತೆಯಲ್ಲಿ ಈಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬಿನ ಟ್ರ್ಯಾಕ್ಟರ್, ಮರಳು ಸಾಗಿಸುವ ವಾಹನ, ಸಾರಿಗೆ ಬಸ್ಸು, ಪ್ರವಾಸಿ ವಾಹನ, ಮೋಟಾರ್ ಬೈಕ್ ಸಂಚಾರ ಮತ್ತು ಬೀದಿ ಬದಿ ವ್ಯಾಪಾರಿಗಳಿಂದ ಪಾದಚಾರಿಗಳು ಪ್ರಾಣ ಭಯದಿಂದ ಸಂಚರಿಬೇಕಾಗಿದೆ.

ಪಟ್ಟಣದ ಅಂದಾಜು ಅರ್ಧ ಕಿ.ಮೀ ನಲ್ಲಿ ರೈಲ್ವೆ ಸ್ಟೇಷನ್ ರಸ್ತೆ, ಗದಗ ಮತ್ತು ಕುಳಗೇರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೂ ವಾಹನಗಳ ದಟ್ಟಣೆ ಹೆಚ್ಚಾಗಿದೆ.

ರಸ್ತೆಯ ಪಕ್ಕ ನಿರ್ಮಿಸಿದ ಪಾದಚಾರಿ ಮತ್ತು ಮುಖ್ಯ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳಿಂದ ಭರ್ತಿಯಾಗಿದೆ. ಇಲ್ಲಿ ಪಾದಚಾರಿಗಳಿಗೆ ಹೋಗಲು ಬಾರದಂತಾಗಿದೆ. ಅನಿವಾರ್ಯವಾಗಿ ವಾಹನಗಳ ಪಕ್ಕದಲ್ಲಿಯೇ ರಸ್ತೆಯಲ್ಲಿ ಪಾದಚಾರಿಗಳು ಹೋಗಬೇಕಿದೆ.

ಬಸ್ ನಿಲ್ದಾಣ, ಪೋಲಿಸ್ ಕಾರ್ಯಾಲಯ, ತಾಲ್ಲೂಕು ಪಂಚಾಯ್ತಿ, ಟಾಂಗಾ ನಿಲ್ದಾಣ. ಮಾರುತಿ ಗುಡಿ ರಸ್ತೆ ಸಮೀಪ ಸಂಚಾರಿ ಪೊಲೀಸ್ ಸಿಬ್ಬಂದಿ ಇಲ್ಲದ ಕಾರಣ ಪಾದಚಾರಿಗಳು ಪರದಾಡುವಂತಾಗಿದೆ. ಅನೇಕರಿಗೆ ವಾಹನಗಳು ಹಾಯ್ದು ಗಾಯಗೊಂಡಿದ್ದ ಉದಾಹರಣೆಗಳಿವೆ.

ಬೆಳಿಗ್ಗೆ 9 ಗಂಟೆಯಿಂದ 12 ಗಂಟೆ ವರೆಗೆ ಸಂಜೆ 4 ರಿಂದ 8 ಗಂಟೆ ವರೆಗೆ ಮುಖ್ಯ ರಸ್ತೆಯಲ್ಲಿ ವಾಹನಗಳ ದಟ್ಟಣೆ ನಿರಂತರವಾಗಿ ಇರುತ್ತದೆ. ಸ್ಥಳೀಯರಿಗೆ ಮತ್ತು ಗ್ರಾಮೀಣ ಪ್ರದೇಶದಿಂದ ಬಂದ ಜನರಿಗೆ ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗಿದೆ.

‘ಪಟ್ಟಣಕ್ಕೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಬಂದರೆ ರಸ್ತೆಯಲ್ಲಿ ವಾಹನಗಳ ನಿಯಂತ್ರಣಕ್ಕಾಗಿ ಸಾಲು ಸಾಲಾಗಿ ಪೋಲಿಸ್ ಸಿಬ್ಬಂದಿ ಇರುತ್ತಾರೆ. ಉಳಿದ ದಿನಗಳಲ್ಲಿ ಸರಿಯಾಗಿ ಇರುವುದಿಲ್ಲ. ಜನರು ಪ್ರಾಣಭಯದಿಂದ ಸಂಚರಿಸಬೇಕಿದೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಣ್ಣ ಹಿರೇಹಾಳ ಒತ್ತಾಯಿಸಿದ್ದಾರೆ.

‘ಪಾದಚಾರಿಗಳ ಸುಗಮ ಸಂಚಾರಕ್ಕೆ ವೃತ್ತಗಳಲ್ಲಿ ಪೋಲಿಸ್ ಸಿಬ್ಬಂದಿಯನ್ನು ನೇಮಿಸಲಾಗುವುದು’ ಎಂದು ಸಿಪಿಐ ಡಿ.ಡಿ.ಧೂಳಖೇಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT